ಅಪಾಯ ತಂದುಕೊಂಡಿದ್ದೇ ಸಂತ್ರಸ್ತೆ ; ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್​
x

'ಅಪಾಯ ತಂದುಕೊಂಡಿದ್ದೇ ಸಂತ್ರಸ್ತೆ' ; ಅತ್ಯಾಚಾರ ಆರೋಪಿಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್​

ನೊಯ್ಡಾ ಮೂಲದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಮೂವರು ಗೆಳತಿಯರೊಂದಿಗೆ ದೆಹಲಿಯ ಬಾರ್‌ಗೆ ಹೋಗಿದ್ದಳು. ಅಲ್ಲಿ ಪರಿಚಯಗೊಂಡ ಯುವಕ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.


ಭಿನ್ನ ತೀರ್ಪುಗಳ ಮೂಲಕ ಸುದ್ದಿಯಲ್ಲಿರುವ ಅಲಹಾಬಾದ್ ಹೈಕೋರ್ಟ್ ಮತ್ತೊಂದು ವಿವಾದಾಸ್ಪದ ಆದೇಶ ಹೊರಡಿಸಿದ್ದು, ಅತ್ಯಾಚಾರ ಪ್ರಕರಣದಲ್ಲಿ 'ಸಂತ್ರಸ್ತೆಯೇ ಅಪಾಯ ತಂದುಕೊಂಡವಳು' ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅತ್ಯಾಚಾರ ಘಟನೆಗೆ ಆಕೆಯೇ 'ಜವಾಬ್ದಾರಿ' ಎಂದು ಹೇಳಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.

ಅಲಹಾಬಾದ್​ ಹೈಕೋರ್ಟ್​​ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ಈ ಆದೇಶ ಹೊರಡಿಸಿದ್ದು ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತೊಂದು ಬಾರಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಯಾಕೆಂದರೆ, ಇದೇ ಹೈಕೋರ್ಟ್​​ನ ನ್ಯಾಯಾಧೀಶರಾದ ಮನೋಹರ್​ ನಾರಾಯಣ್ ಮಿಶ್ರಾ ಅವರು ಮಾರ್ಚ್​ 17ರಂದು ಪೋಕ್ಸೋ ಪ್ರಕರಣದಲ್ಲಿ ಇದೇ ಮಾದರಿಯ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ ಚರ್ಚೆ ಹುಟ್ಟು ಹಾಕಿದ್ದರು. 11 ವರ್ಷದ ಬಾಲಕಿಯೊಬ್ಬಳ ಸ್ತನ ಹಿಡಿಯುವುದು ಮತ್ತು ಪೈಜಾಮದ ದಾರ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ ಎಂದು ಹೇಳಿದ್ದರು. ಅದು ವಿವಾದಕ್ಕೆ ಈಡಾಗಿ ಬಳಿಕ ಸುಪ್ರೀಂ ಕೋರ್ಟ್​ ಮಧ್ಯಪ್ರವೇಶ ಮಾಡಿತ್ತು.

ಈ ಪ್ರಕರಣ ಏನು?

ನೋಯ್ಡಾ ಮೂಲದ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ತನ್ನ ಮೂವರು ಗೆಳತಿಯರೊಂದಿಗೆ ದೆಹಲಿಯ ಬಾರ್‌ಗೆ ಹೋಗಿದ್ದಳು. ಅಲ್ಲಿ, ಮೊದಲೇ ಪರಿಚಯವಿದ್ದ ಆರೋಪಿ ಸೇರಿ ಕೆಲ ಪುರುಷರನ್ನು ಭೇಟಿಯಾಗಿದ್ದಳು.

ಮದ್ಯದ ಅಮಲಿನಲ್ಲಿದ್ದ ಆರೋಪಿಯು ಮನೆಗೆ ಬಿಡುವುದಾಗಿ ಕರೆದಿದ್ದು, ಹೀಗಾಗಿ ಆತನ ಜತೆ ಹೋಗಿದ್ದೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ. ಮಾರ್ಗದುದ್ದಕ್ಕೂ ಆತ ಅನುಚಿತವಾಗಿ ಸ್ಪರ್ಶಿಸುತ್ತಲೇ ಇದ್ದ. ಅಲ್ಲದೆ, ನೋಯ್ಡಾದ ತನ್ನ ಮನೆಗೆ ಕರೆದೊಯ್ಯವ ಬದಲು ಗುರುಗ್ರಾಮದಲ್ಲಿರುವ ಆತನ ಸಂಬಂಧಿಕರ ಫ್ಲ್ಯಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಿದ್ದಳು.

ಆರೋಪಿ ಯುವತಿಯ ಆರೋಪಗಳನ್ನು ನಿರಾಕರಿಸಿದ್ದ. ಆಕೆಯೇ ನನ್ನ ಜತೆ ಬರುವುದಾಗಿ ಹೇಳಿದ್ದಳು. ಎರಡು ಬಾರಿ ಅತ್ಯಾಚಾರ ಎಸಗಿರುವುದು ಸುಳ್ಳು. ಇದು ಸಮ್ಮತಿಯ ಲೈಂಗಿಕತೆ ಎಂದು ಕೋರ್ಟ್ ಮುಂದೆ ವಾದ ಮಾಡಿದ್ದ.

ಕೋರ್ಟ್​ ಹೇಳಿದ್ದೇನು?

"ಅತ್ಯಾಚಾರ ಸಂತ್ರಸ್ತೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯಾಗಿದ್ದು, ಆಕೆ ನೈತಿಕತೆ ಮತ್ತು ಅದರ ಮಹತ್ವ ಅರ್ಥಮಾಡಿಕೊಳ್ಳುವಷ್ಟು ಅರಿವು ಇದೆ "ಪ್ರಕರಣದ ಸಂದರ್ಭ ಸನ್ನಿವೇಶಗಳನ್ನು ಪರಿಗಣಿಸಿ, ಅಪರಾಧದ ಸ್ವರೂಪ, ಸಾಕ್ಷ್ಯಗಳು, ಆರೋಪಿಯ ಕೃತ್ಯ ಮತ್ತು ವಕೀಲರ ವಾದ ಮಂಡನೆ ಗಮನದಲ್ಲಿಟ್ಟುಕೊಂಡು, ಅರ್ಜಿದಾರರು ಜಾಮೀನಿಗೆ ಸೂಕ್ತ ಎಂದು ನಾನು ಭಾವಿಸುತ್ತೇನೆ " ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Read More
Next Story