
PSLV-C62 ಮಿಷನ್ ವಿಫಲ; ಕಕ್ಷೆ ಸೇರುವ ಮೊದಲೇ 16 ಉಪಗ್ರಹಗಳು ಭಸ್ಮ!
ಇಸ್ರೋ PSLV-C62 ಮಿಷನ್ ತಾಂತ್ರಿಕ ಕಾರಣದಿಂದ ವಿಫಲವಾಗಿದೆ. ಶ್ರೀಹರಿಕೋಟಾದಿಂದ ಉಡಾವಣೆಯಾದ ರಾಕೆಟ್ ಮೂರನೇ ಹಂತದಲ್ಲಿ ದಿಕ್ಕು ತಪ್ಪಿದ್ದು, DRDO ನ ಅನ್ವೇಷಣೆ ಸೇರಿದಂತೆ 16 ಉಪಗ್ರಹಗಳು ನಾಶವಾಗಿವೆ.
ಬಹಳಷ್ಟು ನಿರೀಕ್ಷೆ ಹುಟ್ಟಿಸಿದ್ದ ಇಸ್ರೋದ 2026ರ ಮೊದಲ ಬಾಹ್ಯಾಕಾಶ ಕಾರ್ಯಾಚರಣೆ PSLV-C62 ಭಾರಿ ವೈಫಲ್ಯ ಅನುಭವಿಸಿದೆ. ಇಂದು ಬೆಳಿಗ್ಗೆ 10:17ಕ್ಕೆ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ರಾಕೆಟ್, ಮೂರನೇ ಹಂತದ ಉಡಾವಣೆಯ ವೇಳೆ ದಿಕ್ಕು ತಪ್ಪಿದ ಪರಿಣಾಮ ಎಲ್ಲಾ 16 ಉಪಗ್ರಹಗಳು ನಷ್ಟವಾಗಿವೆ.
ಏನಾಯಿತು? ಮಿಷನ್ ವೈಫಲ್ಯದ ಹಂತ
• ಉಡಾವಣೆ: 260 ಟನ್ ತೂಕದ PSLV-DL ರಾಕೆಟ್ ಬೆಳಿಗ್ಗೆ 10:17ಕ್ಕೆ ನಭಕ್ಕೆ ಚಿಮ್ಮಿತು. ಮೊದಲ ಎರಡು ಹಂತಗಳು ಅತ್ಯಂತ ಸುಸೂತ್ರವಾಗಿ ನಡೆದವು.
• ತಾಂತ್ರಿಕ ಅಡಚಣೆ: ರಾಕೆಟ್‌ನ ಮೂರನೇ ಹಂತದ ಇಗ್ನಿಷನ್ (Ignition) ಆರಂಭವಾದ ಬಳಿಕ ಇಸ್ರೋ ಕಂಟ್ರೋಲ್ ರೂಂಗೆ ಸಂಕೇತಗಳು (Telemetry) ಬರುವುದು ನಿಂತುಹೋಯಿತು.
"ಮೂರನೇ ಹಂತದ ಕೊನೆಯಲ್ಲಿ ರಾಕೆಟ್‌ನ ಹಾದಿಯಲ್ಲಿ ವ್ಯತ್ಯಯ ಕಂಡುಬಂದಿದೆ. ನಾವು ದತ್ತಾಂಶವನ್ನು ವಿಶ್ಲೇಷಿಸುತ್ತಿದ್ದೇವೆ" ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಖಚಿತಪಡಿಸಿದ್ದಾರೆ.
ಉಪಗ್ರಹ ಉಡಾವಣೆ ವಿಡಿಯೊ
ನಷ್ಟವಾದ ಪ್ರಮುಖ ಉಪಗ್ರಹಗಳು
ಈ ಮಿಷನ್‌ನಲ್ಲಿ ಭಾರತದ ರಕ್ಷಣಾ ಇಲಾಖೆಗೆ (DRDO) ಸೇರಿದ EOS-N1 (ಅನ್ವೇಷಣೆ) ಎಂಬ ಅತ್ಯಂತ ಮಹತ್ವದ ಕಣ್ಗಾವಲು ಉಪಗ್ರಹವಿತ್ತು. ಇದರೊಂದಿಗೆ ಭಾರತೀಯ ವಿದ್ಯಾರ್ಥಿಗಳು ತಯಾರಿಸಿದ ಉಪಗ್ರಹಗಳು, ಖಾಸಗಿ ಸಂಸ್ಥೆಗಳ ಪ್ರಾಯೋಗಿಕ ಉಪಗ್ರಹಗಳು. ಸ್ಪೇನ್ ದೇಶದ KID ರೀ-ಎಂಟ್ರಿ ಕ್ಯಾಪ್ಸುಲ್ ಸೇರಿದಂತೆ ಒಟ್ಟು 16 ಉಪಗ್ರಹಗಳು ಕಕ್ಷೆ ಸೇರುವ ಮೊದಲೇ ನಾಶವಾಗಿವೆ.
ಸತತ ಎರಡನೇ ಸೋಲು - ಆತಂಕದಲ್ಲಿ ಇಸ್ರೋ
ಕಳೆದ ವರ್ಷ ನಡೆದ PSLV-C61 ಮಿಷನ್ ಕೂಡ ಇದೇ ರೀತಿ ವಿಫಲವಾಗಿತ್ತು. ಎಂಟು ತಿಂಗಳ ಅವಧಿಯಲ್ಲಿ ಇಸ್ರೋ ಕಂಡ ಎರಡನೇ ಸೋಲು ಇದಾಗಿದೆ. ಇದು ಪಿಎಸ್‌ಎಲ್‌ವಿ ರಾಕೆಟ್‌ನ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳನ್ನು ಎತ್ತಿದೆ. ಸತತ ವೈಫಲ್ಯಗಳಿಂದಾಗಿ ಇಸ್ರೋದ ವಾಣಿಜ್ಯ ವಿಭಾಗವಾದ NSIL ಗೆ ವಿದೇಶಿ ಗ್ರಾಹಕರು ನೀಡುವ ಆರ್ಡರ್‌ಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
PSLV-C62 ರಾಕೆಟ್‌ನ ತಾಂತ್ರಿಕ ವಿವರ
• ಎತ್ತರ ಮತ್ತು ತೂಕ: ಈ ರಾಕೆಟ್ 44.4 ಮೀಟರ್ ಎತ್ತರವಿದ್ದು, 260 ಟನ್ ತೂಕ ಹೊಂದಿತ್ತು.
• ಹಂತಗಳು: ಇದು ನಾಲ್ಕು ಹಂತದ ಉಡಾವಣಾ ವಾಹನವಾಗಿದೆ.
• ಕಾನ್ಫಿಗರೇಶನ್: ಇದರಲ್ಲಿ 'PSLV-DL' ಮಾದರಿಯನ್ನು ಬಳಸಲಾಗಿದ್ದು, ಇದು ಎರಡು ಸಾಲಿಡ್ ಸ್ಟ್ರ್ಯಾಪ್-ಆನ್ ಮೋಟಾರ್‌ಗಳನ್ನು ಹೊಂದಿತ್ತು.
• ಇತಿಹಾಸ: ಇದು PSLV ಸರಣಿಯ 64ನೇ ಹಾರಾಟವಾಗಿದೆ.

