Is Goa or Varanasi the favorite place for Indians?
x

ವಾರಣಾಸಿ

ಭಾರತೀಯರ ನೆಚ್ಚಿನ ಸ್ಥಳ ಗೋವಾವೋ ಅಥವಾ ವಾರಾಣಸಿಯೋ?

'ಭವಿಷ್ಯದ ದೃಶ್ಯ 2047: ನವ ಭಾರತಕ್ಕಾಗಿ ಆತಿಥ್ಯದ ಪರಿಷ್ಕರಣೆ' ಎಂಬುದು ಸಮ್ಮೇಳನದ ಧ್ಯೇಯ ವಾಕ್ಯವಾಗಿತ್ತು. ಈ ಸಮ್ಮೇಳನದಲ್ಲಿ ಹೋಟೆಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ 1000 ಗಣ್ಯರು ಪಾಲ್ಗೊಂಡಿದ್ದರು.


Click the Play button to hear this message in audio format

ಪ್ರವಾಸಿಗರ ನೆಚ್ಚಿನ ಸ್ಥಳ ವಾರಾಣಸಿಯೋ ಅಥವಾ ಗೋವಾ ಇರಬಹುದೋ?...ಮಾರಣಾಂತಿಕ ಕೋವಿಡ್ ಸೋಂಕಿನ ಬಳಿಕ ಇಂತದ್ದೊಂದು ಪ್ರಶ್ನೆ ಉದ್ಭವಿಸಿದೆ. ದೇಶಿಯ ಪ್ರವಾಸಿಗರ ಸಂಖ್ಯೆಯ ಗಣನೀಯವಾಗಿ ಹೆಚ್ಚುತ್ತಿದ್ದು, ವಿಶೇಷವಾಗಿ ಆಧ್ಯಾತ್ಮಿಕ ಪ್ರವಾಸಿಗರ ಸಂಖ್ಯೆ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ.

ಬೆಂಗಳೂರಿನಲ್ಲಿ ಫೆಡೆರೇಶನ್ ಆಫ್ ಹೋಟೆಲ್ & ರೆಸ್ಟೋರಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಸಮ್ಮೇಳನ ನಡೆದಿದ್ದು, ಎರಡನೇ ದಿನವಾದ ಶುಕ್ರವಾರ ಈ ವಿಷಯ ಸಂಬಂಧ ಅತಿ ಹೆಚ್ಚು ಚರ್ಚೆ ನಡೆದಿದೆ.

'ಭವಿಷ್ಯದ ದೃಶ್ಯ 2047: ನವ ಭಾರತಕ್ಕಾಗಿ ಆತಿಥ್ಯದ ಪರಿಷ್ಕರಣೆ' ಎಂಬುದು ಸಮ್ಮೇಳನದ ಧ್ಯೇಯ ವಾಕ್ಯವಾಗಿತ್ತು. ಈ ಸಮ್ಮೇಳನದಲ್ಲಿ ಹೋಟೆಲ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು ಹಾಗೂ ರಾಜಕಾರಣಿಗಳು ಸೇರಿದಂತೆ 1000 ಗಣ್ಯರು ಪಾಲ್ಗೊಂಡಿದ್ದರು. ಎರಡು ಮತ್ತು ಮೂರನೇ ಸ್ತರದ ನಗರಗಳಲ್ಲಿ ಬೇಡಿಕೆ ಹೆಚ್ಚುತ್ತಿರುವ ಕಾರಣ ಆತಿಥ್ಯ ಕ್ಷೇತ್ರದ ತನ್ನ ತಂತ್ರಗಾರಿಕೆಗಳನ್ನು ಪುನರ್ ಪರಿಶೀಲಿಸಿಕೊಂಡು ಮುನ್ನಡೆಯಬೇಕಿದೆ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ವಾರಾಣಸಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಈಗ ಗೋವಾ ಮತ್ತು ವಾರಾಣಸಿ ಎರಡರಲ್ಲಿ ಪ್ರವಾಸಿಗರ ನೆಚ್ಚಿನ ಸ್ಥಳ ಯಾವುದು ಎಂದು ನೋಡುವುದಾದರೆ ವಾರಾಣಸಿಯೇ ಮುಂದಿದೆ. ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ, ಗೋವಾಗೆ 1 ಕೋಟಿ ಪ್ರವಾಸಿಗರು ಭೇಟಿ ನೀಡಿದರೆ, ವಾರಣಾಸಿಗೆ 11 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಈ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಅಯೋಧ್ಯೆ, ತಿರುಪತಿ, ಪ್ರಯಾಗ್ ರಾಜ್, ವಾರಣಾಸಿ, ಪುರಿ ಹಾಗೂ ಅಜ್ಮೀರ್ ಅಂತಹ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನ ಕಳೆದಂತೆ ಹೆಚ್ಚಳವಾಗುತ್ತಿದೆ. ಈ ಪ್ರವೃತ್ತಿಯು ಕೇವಲ ಸಾಂಪ್ರದಾಯಿಕ ಪ್ರವಾಸಿ ಸ್ಥಳಗಳಿಗಷ್ಟೇ ಸೀಮಿತವಾಗಿಲ್ಲ. ಯೋಗ, ಧ್ಯಾನ ಸೇರಿದಂತೆ ಇನ್ನಿತರೆ ವಿಚಾರಗಳಿಗಾಗಿ ಪ್ರವಾಸಿಗರು ವಿವಿಧ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಋಷಿಕೇಶ ಎಂದೇ ಹೇಳಬಹುದು.

ಹೋಟೆಲಿವೇಟ್ ಸಂಸ್ಥೆಯ ನಿರ್ವಹಣಾ ಸಹಭಾಗಿ ಅಚಿನ್ ಖನ್ನಾ ಮಾತನಾಡಿ, ದೇಶದಲ್ಲಿ ಒಟ್ಟು 50 ಆಧ್ಯಾತ್ಮಿಕ ಸ್ಥಳಗಳಿವೆ. ಈ ಸ್ಥಳಗಳಿಗೆ ಬಹುತೇಕವಾಗಿ ಭಾರತೀಯ ಪ್ರವಾಸಿಗರೇ ಆಗಮಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ವಾರಣಾಸಿ ಮತ್ತು ಗೋವಾ ಕೂಡ ಸೇರಿಕೊಂಡಿವೆ ಎಂದರು.

ಅಗೋಡಾದ ಭಾರತ ದೇಶದ ನಿರ್ದೇಶಕ ಗೌರವ್ ಮಲಿಕ್ ಮಾತನಾಡಿ, ನೀವು ಆನ್​ಲೈನ್​​ನಲ್ಲಿ ಹುಡುಕಿದ ಪ್ರಕಾರ, ಭಾರತದ ಯಾವ ನಗರ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತಿದೆ? ಎಂದು ಪ್ರೇಕ್ಷಕರನ್ನು ಪ್ರಶ್ನಿಸಿದರು. ಇದಕ್ಕೆ ಪ್ರೇಕ್ಷಕರು ಬೆಂಗಳೂರು, ಆಂಧ್ರ, ಗುವಾಹಟಿ ಎಂದೆಲ್ಲಾ ಉತ್ತರಿಸಿದರು. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಗೌರವ್, ನಿಮ್ಮ ಉತ್ತರ ತಪ್ಪು, ತಿರುಪತಿ ಸರಿಯಾದ ಉತ್ತರ, ಎರಡನೇ ಸ್ಥಾನದಲ್ಲಿ ಡಾರ್ಜಿಲಿಂಗ್ ಇದೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಇತರೆ ಉದ್ಯಮಿಗಳು, ತಿರುಪತಿ ಉತ್ತರವಾಗಲಿದೆ ಎಂಬುದು ಅಚ್ಚರಿಯ ಸಂಗತಿ ಏನಲ್ಲ. ಕೆಲ ದಿನಗಳಿಂದ ಆಧ್ಯಾತ್ಮಿಕ ಮನೋಭಾವ ಎಂಬುದು ಜನರಲ್ಲಿ ಮನೆ ಮಾಡಿದೆ. ಈ ಪ್ರವೃತ್ತಿ ಇನ್ನಷ್ಟು ದಿನಗಳವರೆಗೆ ಮುಂದುವರಿಯಬಹುದು ಎಂದರು.

ಬಳಿಕ ಮಾತು ಮುಂದುವರಿಸಿದ ಗೌರವ್, 2025ರ ಆರಂಭದಿಂದಲೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಆಸಕ್ತಿ ಗಣನೀಯವಾಗಿ ಬೆಳೆಯುತ್ತಿದೆ. ಜನ ಭೌಗೋಳಿಕತೆಗೆ ಆದ್ಯತೆ ನೀಡದೆ ವೈವಿಧ್ಯತೆಗೆ ಪ್ರಾಧಾನ್ಯತೆ ನೀಡುತ್ತಿದ್ದಾರೆ. ಸಂಪರ್ಕ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಬೆಳೆಯುತ್ತಿರುವ ಆಸಕ್ತಿ ಈ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ ಎಂದರು.

ಕರಾವಳಿ ತೀರದತ್ತ ಪ್ರವಾಸಿಗರ ಸೆಳೆಯಲು ಕರ್ನಾಟಕ ಸಜ್ಜು

ಸಮ್ಮೇಳನವನ್ನು ಉದ್ಘಾಟನೆ ಮಾಡಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರವು ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದ 320 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕರಾವಳಿ ಭಾಗದ ಅಭಿವೃದ್ಧಿಗಾಗಿ ಶೀಘ್ರವೇ 'ಕರಾವಳಿ ಪ್ರವಾಸೋದ್ಯಮ ನೀತಿ'ಯನ್ನು ಜಾರಿಗೊಳಿಸಲಿದ್ದೇವೆ. ಇದಕ್ಕಾಗಿ ಸರಿಸುಮಾರು 200 ಕೋಟಿ ರೂ. ಮೀಸಲಿರಿಸಲಾಗಿದೆ.

ಪಾರಂಪರಿಕ ಹಿನ್ನೆಲೆ ಹೊಂದಿರುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಸಮುದಾಯ ಕೇಂದ್ರಿತ ಆತಿಥ್ಯಕ್ಕೆ ಆದ್ಯತೆ ನೀಡುತ್ತಿದ್ದೇವೆ. ವಸತಿ ಸೇವೆ ಒದಗಿಸುವ ಉದ್ದೇಶದಿಂದ ಕರ್ನಾಟಕದಲ್ಲಿ 54 ಹೋಟೆಲ್ ಮತ್ತು ರೆಸ್ಟೊರೆಂಟ್​ಗಳು ಇತ್ತೀಚೆಗೆ ಕಾರ್ಯಾರಂಭ ಮಾಡಿವೆ ಎಂದಿದ್ದಾರೆ.

2024ರಲ್ಲಿ ಕರ್ನಾಟಕಕ್ಕೆ 30.46 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಅಂಕಿ-ಅಂಶವನ್ನು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.56ರಷ್ಟು ಪ್ರವಾಸಿಗರು ಹೆಚ್ಚಳವಾಗಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರವು ರಾಜ್ಯದ ಅಭಿವೃದ್ಧಿಗೆ 25000 ಕೋಟಿಯಷ್ಟು ಕೊಡುಗೆ ನೀಡಿದೆ. ಅಷ್ಟೇ ಅಲ್ಲದೆ, ಪ್ರವಾಸೋದ್ಯಮ ಕ್ಷೇತ್ರದಿಂದ 4 ಲಕ್ಷದಷ್ಟು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದರು.

ಈಗಾಗಲೇ 1000 ಯುವಕರಿಗೆ ಪ್ರವಾಸಿ ಮಾರ್ಗದರ್ಶಕರಾಗಿ ತರಬೇತಿ ನೀಡಲಾಗಿದೆ. 2026ರ ಅಂತ್ಯದ ವೇಳೆಗೆ 50000 ಯುವಕರಿಗೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ತರಬೇತಿ ನೀಡುವ ಗುರಿಯನ್ನು ಹಾಕಿಕೊಂಡಿದ್ದೇವೆ. ಆ ಮೂಲಕ ರಾಜ್ಯದ ಯುವ ಸಮೂಹವನ್ನು ಪ್ರವಾಸೋದ್ಯಮ ಕ್ಷೇತ್ರದ ಕರ್ನಾಟಕದ ರಾಯಭಾರಿಗಳನ್ನಾಗಿ ಮಾಡಲಿದ್ದೇವೆ.

ಸಭೆ, ಸಮಾರಂಭ, ಸಮ್ಮೇಳನ ಮತ್ತು ಪ್ರದರ್ಶನಗಳನ್ನು ಏರ್ಪಡಿಸಲು ಸೂಕ್ತವಾದ ನಗರವಾಗಿ ಬೆಂಗಳೂರು ಮಹಾನಗರ ಈಗಾಗಲೇ ಗುರುತಿಸಿಕೊಂಡಿದೆ. ಹಾಗಾಗಿ ರಾಷ್ಟ್ರೀಯ ಮಾರುಕಟ್ಟೆ ಕ್ಷೇತ್ರಕ್ಕೆ ಬೆಂಗಳೂರು ಶೇ.15ರಷ್ಟು ಕೊಡುಗೆ ನೀಡುತ್ತಿದೆ. ಗದಗ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಂಜನಾದ್ರಿ ಬೆಟ್ಟ, ಸವದತ್ತಿ ಯಲ್ಲಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳು ಚಾಲನೆಯಲ್ಲಿವೆ. ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಲಕ್ಕುಂಡಿ ಮತ್ತು ಐಹೊಳೆಗೂ ಕೂಡ ಭೇಟಿ ನೀಡಿ, ಅಭಿವೃದ್ಧಿಗೆ ಅವಕಾಶಗಳಿವೆಯೇ ಎಂದು ಪರಿಶೀಲಿಸಿ ಎಂದು ಎಫ್ಎಚ್ಎಆರ್ ಐಗೆ ನಮ್ಮ ಸರ್ಕಾರ ಆಹ್ವಾನ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇನ್ನು ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಮುಂದಿನ ದಿನಗಳಲ್ಲಿ ಶೇ.20ರಷ್ಟು ಅಭಿವೃದ್ಧಿಪಡಿಸಿ ದೇಶದ ಆರ್ಥಿಕ ವ್ಯವಸ್ಥೆಗೆ ಕ್ಷೇತ್ರದಿಂದ ಮತ್ತಷ್ಟು ಕೊಡುಗೆ ಸಿಗುವ ಹಾಗೆ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದರು.

Read More
Next Story