IPL Fans Face Tax Shock: Ticket Prices Jump 40%, Relief for International Matches
x
ಐಪಿಎಲ್‌ ಟಿಕೆಟ್‌ಗೆ ಕೇಂದ್ರ ಸರ್ಕಾರ ಜಿಎಸ್‌ಟಿ ಹೆಚ್ಚಳ ಮಾಡಿದೆ.

ಐಪಿಎಲ್ ಅಭಿಮಾನಿಗಳಿಗೆ ತೆರಿಗೆ ಶಾಕ್: ಟಿಕೆಟ್ ದರ ಶೇ. 40ಕ್ಕೆ ಜಿಗಿತ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ರಿಲೀಫ್

ಹೊಸ ತೆರಿಗೆ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಬದಲಾವಣೆಯು ಐಪಿಎಲ್ ಅನ್ನು ಕ್ಯಾಸಿನೊ, ರೇಸ್ ಕ್ಲಬ್, ಮತ್ತು ಇತರ ಐಷಾರಾಮಿ ಸೇವೆಗಳ ವರ್ಗಕ್ಕೆ ಸೇರಿಸಿದೆ.


Click the Play button to hear this message in audio format

ದೇಶದಾದ್ಯಂತ ಜಿಎಸ್‌ಟಿ ಸುಧಾರಣೆಯ ಅಲೆ ಎದ್ದಿರುವ ಬೆನ್ನಲ್ಲೇ, ಕ್ರಿಕೆಟ್ ಅಭಿಮಾನಿಗಳಿಗೆ, ವಿಶೇಷವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರೇಮಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಹೊಸ ತೆರಿಗೆ ನೀತಿಯ ಅಡಿಯಲ್ಲಿ, "ಐಪಿಎಲ್‌ನಂತಹ ಕ್ರೀಡಾಕೂಟಗಳ" ಟಿಕೆಟ್‌ಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಶೇ. 28 ರಿಂದ ಶೇ. 40 ಕ್ಕೆ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದಾಗಿ ಐಪಿಎಲ್ ಪಂದ್ಯಗಳನ್ನು ಕ್ರೀಡಾಂಗಣದಲ್ಲಿ ವೀಕ್ಷಿಸುವುದು ಇನ್ನು ಮುಂದೆ ದುಬಾರಿಯಾಗಲಿದೆ.

ಈ ಹೊಸ ತೆರಿಗೆ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಬದಲಾವಣೆಯು ಐಪಿಎಲ್ ಅನ್ನು ಕ್ಯಾಸಿನೊ, ರೇಸ್ ಕ್ಲಬ್, ಮತ್ತು ಇತರ ಐಷಾರಾಮಿ ಸೇವೆಗಳ ವರ್ಗಕ್ಕೆ ಸೇರಿಸಿದೆ. ಸರ್ಕಾರವು ಐಪಿಎಲ್ ವೀಕ್ಷಣೆಯನ್ನು "ಅಗತ್ಯವಲ್ಲದ ಐಷಾರಾಮಿ ಮನರಂಜನೆ" ಎಂದು ಪರಿಗಣಿಸಿದ್ದು, ಈ ತೆರಿಗೆ ಹೆಚ್ಚಳವು ಹೆಚ್ಚಿನ ಮೌಲ್ಯದ ವಿವೇಚನಾ ಖರ್ಚುಗಳನ್ನು ಗುರಿಯಾಗಿಸಿಕೊಂಡಿದೆ.

ಟಿಕೆಟ್ ದರದ ಮೇಲೆ ಪರಿಣಾಮ

ಈ ತೆರಿಗೆ ಏರಿಕೆಯಿಂದ ಅಭಿಮಾನಿಗಳ ಜೇಬಿಗೆ ಬೀಳುವ ಹೊರೆ ಗಣನೀಯವಾಗಿದೆ. ಉದಾಹರಣೆಗೆ: 1,000 ರೂ. ಮೂಲ ಬೆಲೆಯ ಟಿಕೆಟ್‌ಗೆ ಈ ಹಿಂದೆ ಶೇ. 28ರಷ್ಟು ಜಿಎಸ್‌ಟಿ (280 ರೂಪಾಯಿ) ಸೇರಿ ಒಟ್ಟು 1,280 ರೂಪಾಯಿ ಆಗುತ್ತಿತ್ತು. ಇನ್ನು ಮುಂದೆ ಶೇ. 40ರಷ್ಟು ಜಿಎಸ್‌ಟಿ (400) ಸೇರಿ 1,400 ರೂಪಾಯಿ ಆಗಲಿದೆ. ಇದು ಪ್ರತಿ ಸಾವಿರ ರೂಪಾಯಿಗೆ 120ರಷ್ಟು ಹೆಚ್ಚಳವಾಗಿದೆ.

500 ರೂಪಾಯಿ ಮುಖಬೆಲೆಯ ಟಿಕೆಟ್ ದರವು 640 ರಿಂದ 700 ರೂಪಾಯಿಗೆ ಏರಿಕೆಯಾಗಲಿದೆ. 2,000 ಮುಖಬೆಲೆಯ ಟಿಕೆಟ್ ದರವು 2,560 ರಿಂದ 2,800 ರೂಪಾಯಿಗೆ ಜಿಗಿಯಲಿದೆ.

ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಿಕ್ಕಿತು ವಿನಾಯಿತಿ

ಐಪಿಎಲ್ ಅಭಿಮಾನಿಗಳಿಗೆ ಬೇಸರದ ಸುದ್ದಿಯ ನಡುವೆಯೂ, ಭಾರತೀಯ ರಾಷ್ಟ್ರೀಯ ತಂಡದ ಪಂದ್ಯಗಳನ್ನು ವೀಕ್ಷಿಸುವವರಿಗೆ ಒಂದು ಸಿಹಿ ಸುದ್ದಿ ಇದೆ. ಹೊಸ ನಿಯಮವು ಕೇವಲ "ಐಪಿಎಲ್‌ನಂತಹ ಕ್ರೀಡಾಕೂಟ"ಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವುದರಿಂದ, ಭಾರತ ಆಡುವ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಇತರ ಮಾನ್ಯತೆ ಪಡೆದ ಕ್ರೀಡಾಕೂಟಗಳ ಟಿಕೆಟ್‌ಗಳು ಈ ವ್ಯಾಪ್ತಿಗೆ ಬರುವುದಿಲ್ಲ.

ಈ ಪಂದ್ಯಗಳ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ದರವು ಶೇ. 28 ರಿಂದ ಶೇ. 18 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ. ಅಂದರೆ, ವಿರಾಟ್ ಕೊಹ್ಲಿ, ಎಂ.ಎಸ್. ಧೋನಿಯಂತಹ ಆಟಗಾರರನ್ನು ಐಪಿಎಲ್‌ನಲ್ಲಿ ನೋಡುವುದು ದುಬಾರಿಯಾದರೆ, ಅವರನ್ನೇ ಭಾರತದ ಜೆರ್ಸಿಯಲ್ಲಿ ನೋಡುವುದು ಅಗ್ಗವಾಗಲಿದೆ.

ಈ ಸುಧಾರಣೆಯು ವಾಣಿಜ್ಯೀಕರಣಗೊಂಡ ಫ್ರಾಂಚೈಸಿ ಲೀಗ್ ಮತ್ತು ದೇಶವನ್ನು ಪ್ರತಿನಿಧಿಸುವ ಕ್ರೀಡೆಯ ನಡುವೆ ಸ್ಪಷ್ಟವಾದ ತೆರಿಗೆ ವ್ಯತ್ಯಾಸವನ್ನು ಸೃಷ್ಟಿಸಿದೆ. ಆದರೆ, ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಮತ್ತು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ನಂತಹ ಇತರ ಪ್ರಮುಖ ಲೀಗ್‌ಗಳು ಕೂಡ ಇದೇ ಶೇ. 40ರ ತೆರಿಗೆ ವ್ಯಾಪ್ತಿಗೆ ಬರುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Read More
Next Story