![RCB Bengaluru | ಸ್ಫೋಟಕ ಬ್ಯಾಟರ್ ರಜತ್ ಪಾಟೀದಾರ್ ಆರ್ಸಿಬಿ ನೂತನ ನಾಯಕ RCB Bengaluru | ಸ್ಫೋಟಕ ಬ್ಯಾಟರ್ ರಜತ್ ಪಾಟೀದಾರ್ ಆರ್ಸಿಬಿ ನೂತನ ನಾಯಕ](https://karnataka.thefederal.com/h-upload/2025/02/13/512537-rajat-patiadar.webp)
RCB Bengaluru | ಸ್ಫೋಟಕ ಬ್ಯಾಟರ್ ರಜತ್ ಪಾಟೀದಾರ್ ಆರ್ಸಿಬಿ ನೂತನ ನಾಯಕ
Rajat Patidar : ಒಂದೇ ಒಂದು ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್ಸಿಬಿ ಇದೀಗ 18ನೇ ಆವೃತ್ತಿಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗಬಹುದು ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ.
ಐಪಿಎಲ್ 2025ರ ಆವೃತ್ತಿಗೆ ಆರ್ಸಿಬಿ ತಂಡದ ನಾಯಕರಾಗಿ ಸ್ಫೋಟಕ ಬ್ಯಾಟರ್ ರಜತ್ ಪಾಟೀದಾರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ನಾಯಕನ ಹೆಸರನ್ನು ಪ್ರಕಟಿಸಲಾಗಿದೆ. ಕೋಚ್ ಆಂಡಿ ಫ್ಲವರ್ ಮತ್ತು ನಿರ್ದೇಶಕ ಮೋ ಬೊಬಾಟ್ ಅವರು ನಾಯಕ ಆಯ್ಕೆಯನ್ನು ಪ್ರಕಟಿಸಿದ್ದಾರೆ.
ಒಂದೇ ಒಂದು ಟ್ರೋಫಿ ಗೆಲ್ಲಲು ವಿಫಲವಾಗಿರುವ ಆರ್ಸಿಬಿ ಇದೀಗ 18ನೇ ಆವೃತ್ತಿಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗಬಹುದು ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಆರಂಭದಿಂದಲೇ ರಜತ್ ಪಾಟೀದಾರ್ ಹೆಸರು ಮುಂಚೂಣಿಯಲ್ಲಿತ್ತು. ಅಂತೆಯೇ ಅವರನ್ನೇ ಆಯ್ಕೆ ಮಾಡಲಾಗಿದೆ.
2025ರಲ್ಲಾದರೂ ಆರ್ಸಿಬಿ ಟ್ರೋಫಿ ಗೆಲ್ಲುವುದೇ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಆದರೆ, ತಂಡದ ಇದುವರೆಗಿನ ಸಾಧನೆ ಹೇಳುವ ಮಟ್ಟಕ್ಕಿಲ್ಲ. ಆದಾಗ್ಯೂ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೇ ಕ್ಷಣದಲ್ಲಿ ಅಸಾಧ್ಯ ಪರಿಶ್ರಮದಿಂದ ಪ್ಲೇಆಫ್ಗೆ ಪ್ರವೇಶಿಸಿತ್ತು. ಆರಂಭಿಕ 8 ಪಂದ್ಯಗಳಲ್ಲಿ ಕೇವಲ ಒಂದು 1 ಪಂದ್ಯ ಗೆದ್ದು 7 ರಲ್ಲಿ ಸೋತಿತ್ತು. ಬಳಿಕ ಸತತ 6 ಪಂದ್ಯಗಳನ್ನು ಜಯಿಸಿ ನಾಲ್ಕನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಿತ್ತು. ಆದಾಗ್ಯೂ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಹೋಗಿ ನಿರಾಸೆ ಎದುರಿಸಿತ್ತು.
9 ಬಾರಿ ಪ್ಲೇಆಫ್ಗೇರಿದ್ದ ಆರ್ಸಿಬಿ
ಟ್ರೋಫಿ ಗೆಲ್ಲದಿದ್ದರೂ ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಆರ್ಸಿಬಿ ನಾಲ್ಕನೇ ಸ್ಥಾನವಿದೆ. ಯಾಕೆಂದರೆ 2009, 2011, 2016ರಲ್ಲಿ ಫೈನಲ್ ಪ್ರವೇಶಿಸಿದ್ದ ಆರ್ಸಿಬಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ 9 ಬಾರಿ ಪ್ಲೇಆಫ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರ್ಸಿಬಿ ಹಿಂದಿನ ಕ್ಯಾಪ್ಟನ್ಗಳು
- ರಾಹುಲ್ ದ್ರಾವಿಡ್ - 2008-2008
- ಕೆವಿನ್ ಪೀಟರ್ಸನ್ - 2009-2009
- ಅನಿಲ್ ಕುಂಬ್ಳೆ - 2009-2010
- ಡೇನಿಯಲ್ ವೆಟ್ಟೋರಿ - 2011-2012
- ವಿರಾಟ್ ಕೊಹ್ಲಿ - 2011-2023
- ಶೇನ್ ವ್ಯಾಟ್ಸನ್ - 2017-2017
- ಫಾಫ್ ಡು ಪ್ಲೆಸಿಸ್ - 2022-2024
ಕೊಹ್ಲಿ ಹೇಳಿದ್ದೇನು?
ಮಾಜಿ ನಾಯಕಜ ಕೊಹ್ಲಿ ರಜತ್ ಪಾಟೀದಾರ್ ಅವರನ್ನು ಅಭಿನಂದಿಸಿದ್ದಾರೆ. ಅವರು ಆರ್ಸಿಬಿ ನಾಯಕತ್ವಕ್ಕೆ ಅರ್ಹರು ಎಂದು ಹೇಳಿದ್ದಾರೆ. "ನಾನು ಮತ್ತು ತಂಡದ ಇತರ ಸದಸ್ಯರು ನಿಮ್ಮ ಹಿಂದೆಯೇ ಇರುತ್ತೇವೆ, ರಜತ್" ಎಂದು ಕೊಹ್ಲಿ ಫ್ರಾಂಚೈಸಿ ಹಂಚಿಕೊಂಡ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ಫ್ರಾಂಚೈಸಿಯಲ್ಲಿ ನೀವು ಬೆಳೆದ ರೀತಿ ಮತ್ತು ನೀವು ಪ್ರದರ್ಶನ ನೀಡಿದ ರೀತಿ, ನೀವು ಎಲ್ಲಾ ಆರ್ಸಿಬಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ಇದು ಬಹಳ ಅರ್ಹ, "ಎಂದು ಅವರು ಹೇಳಿದರು.