ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕ
ರಿಷಬ್ ಪಂತ್ ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಾಯಕತ್ವ ವಹಿಸಲಿದ್ದಾರೆ ಎಂದು ಫ್ರಾಂಚೈಸಿ ಪ್ರಕಟಿಸಿದೆ.
ವಿಕೆಟ್‌ಕೀಪರ್-ಬ್ಯಾಟರ್ 14 ತಿಂಗಳ ನಂತರ ವೃತ್ತಿಪರ ಕ್ರಿಕೆಟ್‌ಗೆ ಮರಳುತ್ತಿದ್ದಾರೆ ಮತ್ತು ವಿಶಾಖಪಟ್ಟಣಂನಲ್ಲಿ ತಂಡದ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಡಿಸೆಂಬರ್ 2022 ರಲ್ಲಿ ಭೀಕರ ಕಾರು ಅಪಘಾತದ ನಂತರ ಪಂತ್ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಡಿಸಿ ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್ ಮಾತನಾಡಿ, ʻರಿಷಭ್ ಅವರನ್ನು ಮತ್ತೆ ಕ್ಯಾಪ್ಟನ್ ಆಗಿ ಸ್ವಾಗತಿಸಲು ಸಂತೋಷಪಡುತ್ತೇವೆ. ಛಲ ಮತ್ತು ನಿರ್ಭಯತೆ ಅವರ ಕ್ರಿಕೆಟ್ ನ ಗುರುತು. ನವ ಉತ್ಸಾಹ, ಚೈತನ್ಯ ಮತ್ತು ಉಲ್ಲಾಸದಿಂದ ನಾವು ಹೊಸ ಋತುವಿಗಾಗಿ ಎದುರು ನೋಡುತ್ತಿರುವಾಗ, ಅವರು ತಂಡವನ್ನು ಮುನ್ನಡೆಸುವುದನ್ನು ನೋಡಲು ಉತ್ಸುಕರಾಗಿದ್ದೇವೆʼ ಎಂದರು.
ತಂಡದ ಸಹ ಮಾಲೀಕ ಕಿರಣ್ ಕುಮಾರ್ ಗ್ರಾಂಧಿ, ʻರಿಷಭ್ ಜೀವನದ ಅತ್ಯಂತ ಸವಾಲಿನ ಹಂತಗಳಲ್ಲಿ ಶ್ರಮಿಸಿ ಜಯಿಸಿದ್ದಾರೆ. ಅವರಿಂದ ಸಹ ಆಟಗಾರರು ಅಪಾರ ಸ್ಫೂರ್ತಿ ಪಡೆದುಕೊಳ್ಳುತ್ತಾರೆ ಎಂಬುದರಲ್ಲಿ ನನಗೆ ಸಂದೇಹವಿಲ್ಲʼ ಎಂದರು.
ಮೊದಲ ಪಂದ್ಯ: ಮಾರ್ಚ್ 23 ರಂದು ಚಂಡೀಗಢದಲ್ಲಿ ನಡೆಯಲಿರುವ ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ಡಿಸಿ, ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
ಪಂತ್ ಡಿಸೆಂಬರ್ 30, 2022 ರಂದು ಉತ್ತರಾಖಂಡದ ರೂರ್ಕಿ ಬಳಿ ನಡೆದ ಅಪಘಾತದ ಬಳಿಕ 14 ತಿಂಗಳ ಪುನರ್ವಸತಿ ಮತ್ತು ಚೇತರಿಕೆ ಪ್ರಕ್ರಿಯೆಗೆ ಒಳಗಾಗಿದ್ದರು. ಕಳೆದ ವರ್ಷ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಡಿಸಿಯನ್ನು ಮುನ್ನಡೆಸಿದ್ದರು. 10 ತಂಡಗಳ ಲೀಗ್‌ನಲ್ಲಿ ಡಿಸಿ ಐದು ಗೆಲುವು ಮತ್ತು ಒಂಬತ್ತು ಸೋಲುಗಳೊಂದಿಗೆ ಒಂಬತ್ತನೇ ಸ್ಥಾನ ಪಡೆದಿತ್ತು.