IPL 2024 | ಚೆನ್ನೈನಲ್ಲಿ ಮೇ 26ರಂದು ಫೈನಲ್
ಮಾ.25-ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಪಿಎಲ್ 2024 ರ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 22, 2024 ರಂದು ಬಿಸಿಸಿಐ ಮೊದಲ ಎರಡು ವಾರಗಳ (21 ಪಂದ್ಯಗಳು) ವೇಳಾಪಟ್ಟಿ ಪ್ರಕಟಿಸಿತ್ತು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 21 ರಂದು ಎರಡು ಅಗ್ರ ಶ್ರೇಯಾಂಕದ ತಂಡಗಳ ನಡುವೆ ಕ್ವಾಲಿಫೈಯರ್ ಮತ್ತು ಮೇ 22 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಋತುವಿನ ಆರಂಭಿಕ ಪಂದ್ಯ, ಕ್ವಾಲಿಫೈಯರ್ 2 ಮತ್ತು ಗ್ರ್ಯಾಂಡ್ ಫೈನಲ್ ಚೆನ್ನೈನಲ್ಲಿ ನಡೆಯಲಿದೆ. ಕ್ವಾಲಿಫೈಯರ್ 2, ಕ್ವಾಲಿಫೈಯರ್ 1 ರಲ್ಲಿ ಸೋತವರು ಮತ್ತು ಎಲಿಮಿನೇಟರ್ ವಿಜೇತರ ನಡುವೆ ಮೇ 24 ರಂದು ಮತ್ತು ಫೈನಲ್ ಮೇ 26 ರ ಭಾನುವಾರ ನಡೆಯಲಿದೆ. ಎರಡನೇ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಶಾಖಪಟ್ಟಣಂನಲ್ಲಿ ತಮ್ಮ ಮೊದಲ ಎರಡು ಪಂದ್ಯ, ಆನಂತರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳನ್ನು ಆಡಲಿದೆ.
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮುಲ್ಲನ್‌ಪುರದ ಪಿಸಿಎ ನ್ಯೂ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಋತುವನ್ನು ಆರಂಭಿಸಲಿದ್ದು, ಧರ್ಮಶಾಲಾದಲ್ಲಿ ಅಭಿಯಾನ ಮುಕ್ತಾಯಗೊಳಿಸಲಿದೆ. ಮೇ 5 ಮತ್ತು 9 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎರಡು ಪಂದ್ಯ ನಡೆಯಲಿದೆ.
ರಾಜಸ್ಥಾನ್ ರಾಯಲ್ಸ್ (ಆರ್ ಆರ್) ಗುವಾಹಟಿಯಲ್ಲಿ ಮತ್ತು ಅಸ್ಸಾಂನಲ್ಲಿ ಕೊನೆಯ ಎರಡು ತವರು ಪಂದ್ಯಗಳನ್ನು ಆಡಲಿದೆ. ಮೇ 15 ರಂದು ಪಂಜಾಬ್ ಕಿಂಗ್ಸ್ ಮತ್ತು ಮೇ 19 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದ್ದಾರೆ.