Ustad Zakir Hussain | ಸಂಗೀತ ದಂತಕಥೆ, ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಇನ್ನಿಲ್ಲ
ಅಂತಾರಾಷ್ಟ್ರೀಯ ತಬಲಾ ವಾದಕ, ಸಂಗೀತದ ದಂತಕಥೆ ಜಾಕಿರ್ ಹುಸೇನ್ ಭಾನುವಾರ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಅಂತಾರಾಷ್ಟ್ರೀಯ ತಬಲಾ ವಾದಕ ಜಾಕಿರ್ ಹುಸೇನ್ (73) ಹೃದಯ ಸಂಬಂಧಿ ಕಾಯಿಲೆಯಿಂದ ಭಾನುವಾರ ಅಮೆರಿಕಾದಲ್ಲಿ ಮೃತಾಪಟ್ಟಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಹೃದಯ ಸಂಬಂಧಿ ಸಮಸ್ಯೆಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಜಾಕಿರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಭಾರತದ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿದ್ದ ಖ್ಯಾತ ತಬಲಾ ವಾದಕ ಅಲ್ಲಾ ರಖಾ ಅವರ ಹಿರಿಯ ಪುತ್ರನಾಗಿದ್ದ ಜಾಕೀರ್ ಹುಸೇನ್, 1951 ರಂದು ಮುಂಬೈನಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಿಂದಲೂ ಸಂಗೀತದ ವಾತಾವರಣದಲ್ಲಿ ಬೆಳೆದಿದ್ದರು. ತಂದೆಯ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಜಾಕಿರ್ ಹುಸೇನ್ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು.
1988ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮ ಭೂಷಣ ಹಾಗೂ 2023ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
1990 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್, 1999 ರಲ್ಲಿ ಅಮೇರಿಕಾದ ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್ ’ ರಾಷ್ಟ್ರೀಯ ಪರಂಪರೆಯ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಜಾಕೀರ್ ಹುಸೇನ್ ಅವರು ಏಳು ಬಾರಿ ಗ್ರ್ಯಾಮಿ ಪ್ರಶಸ್ತಿ ನಾಮನಿರ್ದೇಶನ ಪಡೆದಿದ್ದರು. ಈ ಪೈಕಿ, ಮೂರು ಬಾರಿ ಪ್ರಶಸ್ತಿಗಳನ್ನು ಗೆದ್ದಿದ್ದರು.
ಜಾಕಿರ್ ಹುಸೇನ್ ನಿಧನದ ಸುದ್ದಿ ಅತೀವ ದುಃಖವಾಗಿದೆ. ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಅವರ ದೈವಿಕ ಸಂಗೀತ ಸದಾ ಪ್ರತಿಧ್ವನಿಸುತ್ತಿದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಲ್ಲಿ ದುಃಖ ಭರಿಸುವ ಶಕ್ತಿ ನೀಡಲೆಂದು ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.