Infosys: ಇನ್ಫೋಸಿಸ್‌ನಲ್ಲಿ ಮತ್ತೆ ಉದ್ಯೋಗ ಕಡಿತ: 240 ಉದ್ಯೋಗಿಗಳ ವಜಾ
x

Infosys: ಇನ್ಫೋಸಿಸ್‌ನಲ್ಲಿ ಮತ್ತೆ ಉದ್ಯೋಗ ಕಡಿತ: 240 ಉದ್ಯೋಗಿಗಳ ವಜಾ

Infosys: ಐಟಿ ಕ್ಷೇತ್ರದಲ್ಲಿ ಮುಂದುವರಿಯಲು ಇಚ್ಛಿಸುವವರಿಗೆ ಇನ್ಫೋಸಿಸ್-ಪ್ರಾಯೋಜಿತ ಐಟಿ ಫಂಡಮೆಂಟಲ್ಸ್ ತರಬೇತಿ ಸಿಗಲಿದೆ. ಕೆಲಸ ಕಳೆದುಕೊಂಡವರಿಗೆ ಒಂದು ತಿಂಗಳ ವೇತನ, ವಸತಿ ವೆಚ್ಚ, ಮತ್ತು ಮೈಸೂರಿನ ತರಬೇತಿ ಕೇಂದ್ರದಿಂದ ಬೆಂಗಳೂರು ಅಥವಾ ಊರಿಗೆ ಪ್ರಯಾಣ ಭತ್ಯೆ ಸಿಗಲಿದೆ.


ಭಾರತದ ಪ್ರಮುಖ ಐಟಿ ಕಂಪನಿಯಾಗಿರುವ ಇನ್ಫೋಸಿಸ್, ಆಂತರಿಕ ಮೌಲ್ಯಮಾಪನದಲ್ಲಿ (ಜನರಿಕ್ ಫೌಂಡೇಶನ್ ಟ್ರೈನಿಂಗ್ ಪ್ರೋಗ್ರಾಂ) ಅರ್ಹತೆ ಪಡೆಯಲು ವಿಫಲರಾದ 240 ಆರಂಭಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ವಿಷಯವು ಕಂಪನಿಯ ಆಂತರಿಕ ಇಮೇಲ್‌ಗಳ ಮೂಲಕ ಏಪ್ರಿಲ್ 18ರಂದು ಬಹಿರಂಗಗೊಂಡಿದ್ದು ಈ ಬಗ್ಗೆ ಮನಿಕಂಟ್ರೋಲ್ ವರದಿ ಮಾಡಿದೆ. ಇದು 2025ರಲ್ಲಿ ಇನ್ಫೋಸಿಸ್‌ನ ಎರಡನೇ ಸುತ್ತಿನ ಉದ್ಯೋಗ ಕಡಿತವಾಗಿದೆ. ಇದಕ್ಕೂ ಮೊದಲು, ಫೆಬ್ರವರಿಯಲ್ಲಿ 300ಕ್ಕೂ ಹೆಚ್ಚು ತರಬೇತುದಾರರನ್ನು ಇದೇ ಕಾರಣಕ್ಕಾಗಿ ಕೆಲಸದಿಂದ ವಜಾಗೊಳಿಸಲಾಗಿತ್ತು.

ಮನಿಕಂಟ್ರೋಲ್ ಪಡೆದ ಕಂಪನಿಯ ಇಮೇಲ್ ಪ್ರಕಾರ, ತರಬೇತುದಾರರಿಗೆ ಹೆಚ್ಚುವರಿ ಸಮಯ, ಸಂದೇಹ ನಿವಾರಣಾ ಸೆಷನ್‌ಗಳು, ಮಾಕ್ ಮೌಲ್ಯಮಾಪನಗಳು ಮತ್ತು ಒಟ್ಟು ಮೂರು ಅವಕಾಶಗಳನ್ನು ನೀಡಿದ್ದರೂ, ಅವರು 'ಜನರಿಕ್ ಫೌಂಡೇಶನ್ ಟ್ರೈನಿಂಗ್ ಪ್ರೋಗ್ರಾಂ'ನ ಅರ್ಹತಾ ಮಾನದಂಡಗಳನ್ನು ಪೂರೈಸಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಕಂಪನಿಯ​ ಪ್ರೋಗ್ರಾಂನಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.

ಇಮೇಲ್‌ನ ಒಂದು ಭಾಗವು ಹೀಗಿದೆ:

“ನಿಮ್ಮ ಅಂತಿಮ ಮೌಲ್ಯಮಾಪನದ ಫಲಿತಾಂಶಗಳ ಘೋಷಣೆಯ ನಂತರ, ಹೆಚ್ಚುವರಿ ತಯಾರಿ ಸಮಯ, ಸಂದೇಹ ನಿವಾರಣಾ ಸೆಷನ್‌ಗಳು, ಹಲವಾರು ಮಾಕ್ ಮೌಲ್ಯಮಾಪನಗಳು ಮತ್ತು ಮೂರು ಅವಕಾಶಗಳನ್ನು ನೀಡಿದ್ದರೂ, ನೀವು 'ಜನರಿಕ್ ಫೌಂಡೇಶನ್ ಟ್ರೈನಿಂಗ್ ಪ್ರೋಗ್ರಾಂ'ನ ಅರ್ಹತಾ ಮಾನದಂಡಗಳನ್ನು ಪೂರೈಸಿಲ್ಲ. ಆದ್ದರಿಂದ, ನೀವು ಶಿಷ್ಯವೃತ್ತಿ ಕಾರ್ಯಕ್ರಮದಲ್ಲಿ ಮುಂದುವರಿಯಲು ಸಾಧ್ಯವಿಲ್ಲ.”

ಕಂಪನಿಯಿಂದ ಬೆಂಬಲ ಕ್ರಮಗಳು

ಕೆಲಸ ಕಳೆದುಕೊಂಡ ಉದ್ಯೋಗಿಗಳಿಗೆ ಇನ್ಫೋಸಿಸ್ ಕೆಲವು ಪರಿಹಾರಗಳನ್ನು ಕೊಟ್ಟಿದೆ. ಕಂಪನಿಯ ಹೊರಗೆ ಹೊಸ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಸಹಾಯ.ಎನ್​​ಐಐಟಿ ಮತ್ತು UPGrad ಸಹಯೋಗದೊಂದಿಗೆ, ಉದ್ಯೋಗಿಗಳು ಬಿಸಿನೆಸ್ ಪ್ರಾಸೆಸ್ ಮ್ಯಾನೇಜ್‌ಮೆಂಟ್ (BPM) ಉದ್ಯಮದಲ್ಲಿ ಕೆಲಸಕ್ಕೆ ಸಿದ್ಧವಾಗಲು ತರಬೇತಿ ಪಡೆಯಬಹುದು. ಈ ತರಬೇತಿ ಯಶಸ್ವಿಯಾಗಿ ಪೂರೈಸಿದವರು ಇನ್ಫೋಸಿಸ್ ಬಿಪಿಎಮ್​ ಲಿಮಿಟೆಡ್‌ನಲ್ಲಿ ಲಭ್ಯವಿರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು,

ಐಟಿ ಕ್ಷೇತ್ರದಲ್ಲಿ ಮುಂದುವರಿಯಲು ಇಚ್ಛಿಸುವವರಿಗೆ ಇನ್ಫೋಸಿಸ್-ಪ್ರಾಯೋಜಿತ ಐಟಿ ಫಂಡಮೆಂಟಲ್ಸ್ ತರಬೇತಿ ಸಿಗಲಿದೆ. ಕೆಲಸ ಕಳೆದುಕೊಂಡವರಿಗೆ ಒಂದು ತಿಂಗಳ ವೇತನ, ವಸತಿ ವೆಚ್ಚ, ಮತ್ತು ಮೈಸೂರಿನ ತರಬೇತಿ ಕೇಂದ್ರದಿಂದ ಬೆಂಗಳೂರು ಅಥವಾ ಊರಿಗೆ ಪ್ರಯಾಣ ಭತ್ಯೆ ಸಿಗಲಿದೆ.

ಆರ್ಥಿಕ ಸವಾಲುಗಳ ಹಿನ್ನೆಲೆ

ಐಟಿ ಉದ್ಯಮದಲ್ಲಿ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಈ ಉದ್ಯೋಗ ಕಡಿತಗಳು ಆಗುತ್ತಿದೆ. ಏಪ್ರಿಲ್ 17 ರಂದು ಇನ್ಫೋಸಿಸ್ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿತು, ಇದರಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಕಡಿಮೆ ನಿರೀಕ್ಷೆ ಮಾಡಲಾಗಿದೆ ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಟೀಕೆಗಳು ಮತ್ತು ವಿವಾದ

ನಾಸೆಂಟ್ ಇನ್ಫರ್ಮೇಶನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಸೇರಿದಂತೆ ಕೆಲವು ವಲಯಗಳು ಈ ಮೌಲ್ಯಮಾಪನ ಪ್ರಕ್ರಿಯೆಯನ್ನು ಟೀಕಿಸಿದೆ. ಇತ್ತೀಚಿನ ದಿನಗಳಲ್ಲಿ ಮೌಲ್ಯಮಾಪನ ಮಾನದಂಡಗಳನ್ನು ಕಠಿಣಗೊಳಿಸಲಾಗಿದ್ದು, ಫೇಲ್ ಆಗುವ ಪ್ರಮಾಣವು ಶೇ.10ರಿಂದ ಶೇ.30-40ಕ್ಕೆ ಏರಿಕೆಯಾಗಿದೆ ಎಂದು ಕೆಲವು ತರಬೇತುದಾರರು ಆರೋಪಿಸಿದ್ದಾರೆ. ಆದರೆ, ಇನ್ಫೋಸಿಸ್ ಈ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

Read More
Next Story