Indo-Pak Tension | ಚಿನಾಬ್ ನದಿ ನೀರು ಸ್ಥಗಿತಗೊಳಿಸಿದ ಭಾರತ ; ಪಾಕಿಸ್ತಾನದಲ್ಲಿ ಜಲಕ್ಷಾಮದ ಭೀತಿ
x

Indo-Pak Tension | ಚಿನಾಬ್ ನದಿ ನೀರು ಸ್ಥಗಿತಗೊಳಿಸಿದ ಭಾರತ ; ಪಾಕಿಸ್ತಾನದಲ್ಲಿ ಜಲಕ್ಷಾಮದ ಭೀತಿ

ಚಿನಾಬ್ ನದಿಯ ರಂಬಂನ್ ಮತ್ತು ದಲಾಲ್ ಆಣೆಕಟ್ಟುಗಳ ಎಲ್ಲಾ ಗೇಟ್‌ಗಳನ್ನು ಭಾರತ ಮುಚ್ಚಿದ್ದು ಪಾಕಿಸ್ತಾನದತ್ತ ನೀರು ಹರಿಯುತ್ತಿಲ್ಲ ಎಂದು ಸ್ಥಳೀಯ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಕದನ ವಿರಾಮ ಜಾರಿಯಾದ ನಂತರವೂ ರಾಜತಾಂತ್ರಿಕ ನಿರ್ಬಂಧಗಳನ್ನು ಭಾರತ ಮುಂದುವರಿಸಿದೆ. ಪಹಲ್ಗಮ್ ದಾಳಿಯ ಬಳಿಕ ಸಿಂಧೂ ನದಿ ಒಪ್ಪಂದ ಅಮಾನತಿನಲ್ಲಿ ಇಟ್ಟಿದ್ದ ಭಾರತ ಈಗ ಸಿಂಧೂ ನದಿಯ ಉಪನದಿ ಚಿನಾಬ್ ನದಿಯ ನೀರನ್ನು ಬಂದ್ ಮಾಡಿದೆ. ಇದರಿಂದ ಪಾಕಿಸ್ತಾನದಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ.

ಚಿನಾಬ್ ನದಿಯ ರಂಬಂನ್ ಮತ್ತು ದಲಾಲ್ ಆಣೆಕಟ್ಟುಗಳ ಎಲ್ಲಾ ಗೇಟ್‌ಗಳನ್ನು ಭಾರತ ಮುಚ್ಚಿದ್ದು ಪಾಕಿಸ್ತಾನದತ್ತ ನೀರು ಹರಿಯುತ್ತಿಲ್ಲ ಎಂದು ಸ್ಥಳೀಯ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಸಲಾಲ್‌ ಜಲಾಶಯದ ಒಂದು ಗೇಟ್ ತೆರೆದಿದ್ದು, ನೀರು ಹರಿಯುತ್ತಿದೆ. ತಾಂತ್ರಿಕ ಕಾರಣದಿಂದ ಗೇಟ್ ಸ್ಥಗಿತಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಅದನ್ನೂ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಚಿನಾಬ್ ನದಿ ಆಣೆಕಟ್ಟುಗಳ ಮೂಲಕ ಹರಿಯುವ ನೀರನ್ನು ಪಾಕಿಸ್ತಾನವು ಕೃಷಿ ಹಾಗೂ ಜಲ ವಿದ್ಯುತ್‌ ಉತ್ಪಾದನೆಗೆ ಬಳಸಸುತ್ತಿತ್ತು.

1960ರಲ್ಲಿ ಆಗಿದ್ದ ಜಲ ಒಪ್ಪಂದ

ವಿಶ್ವ ಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರಲ್ಲಿ ಭಾರತಹಾಗೂ ಪಾಕಿಸ್ತಾನದ ಮಧ್ಯೆ ನೀರು ಹಂಚಿಕೆ ಸಂಬಂಧ ಜಲ ಒಪ್ಪಂದವಾಗಿತ್ತು. ಪೂರ್ವದ ಸಟ್ಲೆಜ್, ರಾವಿ, ಬ್ಯಾಸ್‌ ನದಿಗಳ ನೀರಿನ ಹಕ್ಕುಗಳು ಸಂಪೂರ್ಣ ಭಾರತಕ್ಕೆ ಸೇರಿದರೆ, ಪಶ್ಚಿಮದ ಸಿಂಧೂ, ಝೇಲಮ್ ಹಾಗೂ ಚಿನಾಬ್ ನದಿಗಳ ನೀರಿನ ಮೇಲಿನ ಹಕ್ಕು ಪಾಕಿಸ್ತಾನಕ್ಕೆ ಸೇರಿತ್ತು.

ಸಟ್ಲೆಜ್, ರಾವಿ, ಬ್ಯಾಸ್ ನದಿಗಳಿಂದ ವಾರ್ಷಿಕವಾಗಿ ಸರಾಸರಿ 3.3 ಕೋಟಿ ಕ್ಯೂಬಿಕ್ ಅಡಿ ನೀರು ಹರಿಯುತ್ತಿತ್ತು. ಸಿಂಧೂ, ಝೇಲಮ್ ಹಾಗೂ ಚಿನಾಬ್‌ನಲ್ಲಿ ವಾರ್ಷಿಕವಾಗಿ ಸರಾಸರಿ 13.5 ಕೋಟಿ ಕ್ಯೂಬಿಕ್ ಅಡಿಗಳಷ್ಟು ನೀರು ಹರಿಯುತ್ತದೆ. ಇದರಿಂದ ಪಾಕಿಸ್ತಾನಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ ಅಧಿಕವಿದೆ.

ಈಗ ಜಲ ಒಪ್ಪಂದವನ್ನು ಅಮಾನತು ಮಾಡಿರುವುದರಿಂದ, ಸಿಂಧೂ, ಝೇಲಂ ಹಾಗೂ ಚಿನಾಬ್ ನದಿಗಳ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಮಾರ್ಗೋಪಾಯಗಳ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

Read More
Next Story