ವಿಮಾನ ರದ್ದು ಸೃಷ್ಟಿಸಿದ ಬಿಕ್ಕಟ್ಟು ಅಲ್ಲ, ಉದ್ದೇಶಪೂರ್ವಕವೂ ಅಲ್ಲ: ಇಂಡಿಗೋ ಚೇರ್ಮನ್
x

ಇಂಡಿಗೋ ಅಧ್ಯಕ್ಷ ವಿಕ್ರಮ್ ಸಿಂಗ್ ಮೆಹ್ತಾ ಅವರು ಬುಧವಾರ (ಡಿಸೆಂಬರ್ 10) ವೀಡಿಯೊ ಹೇಳಿಕೆಯಲ್ಲಿ ಆರೋಪವನ್ನು ತಳ್ಳಿಹಾಕಿದರು.

ವಿಮಾನ ರದ್ದು 'ಸೃಷ್ಟಿಸಿದ ಬಿಕ್ಕಟ್ಟು' ಅಲ್ಲ, ಉದ್ದೇಶಪೂರ್ವಕವೂ ಅಲ್ಲ: ಇಂಡಿಗೋ ಚೇರ್ಮನ್

ಡಿಸೆಂಬರ್ 2 ರಿಂದ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ (FDTL) ನಿಯಮಗಳ ಜಾರಿಯಲ್ಲಿನ ವೈಫಲ್ಯದಿಂದಾಗಿ ಸಾವಿರಾರು ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.


ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಎದುರಿಸುತ್ತಿರುವ ತೀವ್ರ ಬಿಕ್ಕಟ್ಟು 'ಉದ್ದೇಶಪೂರ್ವಕ' ಅಥವಾ ಸರ್ಕಾರದ ನಿಯಮಗಳನ್ನು ಬದಲಿಸಲು 'ಸೃಷ್ಟಿಸಿದ ಬಿಕ್ಕಟ್ಟು' ಅಲ್ಲ ಎಂದು ಸಂಸ್ಥೆಯ ಚೇರ್ಮನ್ ವಿಕ್ರಮ್ ಸಿಂಗ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.

ಬುಧವಾರ (ಡಿ.10) ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಒಂದು ವಾರದಿಂದ ಸಂಸ್ಥೆಯ ಸುತ್ತ ಕೇಳಿಬರುತ್ತಿರುವ ಗಂಭೀರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಡಿಸೆಂಬರ್ 2 ರಿಂದ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ (FDTL) ನಿಯಮಗಳ ಜಾರಿಯಲ್ಲಿನ ವೈಫಲ್ಯದಿಂದಾಗಿ ಸಾವಿರಾರು ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಆರೋಪಗಳು ಸತ್ಯಕ್ಕೆ ದೂರ

"ಕಳೆದ ವಾರದಿಂದ ನಮ್ಮ ಸಂಸ್ಥೆಯ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಪ್ರಯಾಣಿಕರಿಗೆ ಆಗಿರುವ ಅನಾನುಕೂಲತೆ ಮತ್ತು ಉತ್ತರದಾಯಿತ್ವದ ವಿಚಾರದಲ್ಲಿ ಕೆಲವು ಟೀಕೆಗಳು ಸರಿಯಾಗಿವೆ. ಆದರೆ, ಇಂಡಿಗೋ ಸಂಸ್ಥೆಯು ಉದ್ದೇಶಪೂರ್ವಕವಾಗಿ ಈ ಬಿಕ್ಕಟ್ಟನ್ನು ಸೃಷ್ಟಿಸಿದೆ, ಸರ್ಕಾರದ ನಿಯಮಗಳನ್ನು ಪ್ರಭಾವಿಸಲು ಯತ್ನಿಸಿದೆ ಅಥವಾ ಸುರಕ್ಷತೆಯಲ್ಲಿ ರಾಜಿ ಮಾಡಿಕೊಂಡಿದೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು," ಎಂದು ಮೆಹ್ತಾ ಹೇಳಿದ್ದಾರೆ. ಪೈಲಟ್ ಆಯಾಸಕ್ಕೆ ಸಂಬಂಧಿಸಿದ ನಿಯಮಗಳನ್ನು ಜಾರಿಗೆ ಬಂದಾಗಿನಿಂದಲೂ ಪಾಲಿಸಲಾಗುತ್ತಿದೆ ಎಂದು ಅವರು ಸಮರ್ಥಿಸಿಕೊಂಡರು.

ಬಿಕ್ಕಟ್ಟಿಗೆ ಕಾರಣಗಳೇನು?

ವಿಮಾನಗಳ ರದ್ದು ಮತ್ತು ವ್ಯತ್ಯಯವು ಯಾವುದೇ ಪೂರ್ವಯೋಜಿತ ಕೃತ್ಯವಲ್ಲ ಎಂದು ಸ್ಪಷ್ಟಪಡಿಸಿದ ಮೆಹ್ತಾ, ಇದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ. "ಸಣ್ಣಪುಟ್ಟ ತಾಂತ್ರಿಕ ದೋಷಗಳು, ಚಳಿಗಾಲದ ವೇಳಾಪಟ್ಟಿ ಬದಲಾವಣೆ, ಪ್ರತಿಕೂಲ ಹವಾಮಾನ ಮತ್ತು ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ ಬದಲಾವಣೆಯಂತಹ ಆಂತರಿಕ ಮತ್ತು ಬಾಹ್ಯ ಅಂಶಗಳು ಒಟ್ಟಾಗಿ ಈ ಪರಿಸ್ಥಿತಿಗೆ ಕಾರಣವಾಗಿವೆ," ಎಂದು ವಿವರಿಸಿದ್ದಾರೆ.

ತಜ್ಞರ ಮೊರೆ ಹೋದ ಮಂಡಳಿ

ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಲು ಮತ್ತು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಲು ಬಾಹ್ಯ ತಾಂತ್ರಿಕ ತಜ್ಞರ ನೆರವು ಪಡೆಯಲು ಆಡಳಿತ ಮಂಡಳಿ ನಿರ್ಧರಿಸಿದೆ. ಈಗಾಗಲೇ ಕಾರ್ಯಾಚರಣೆ ನಿರೀಕ್ಷೆಗಿಂತ ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದು, ರದ್ದಾದ ಟಿಕೆಟ್‌ಗಳಿಗೆ ಕೋಟ್ಯಂತರ ರೂಪಾಯಿ ಮರುಪಾವತಿ ಮಾಡಲಾಗಿದೆ ಹಾಗೂ ವಿಳಂಬವಾದ ಲಗೇಜ್‌ಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಇಒಗೆ ಸರ್ಕಾರದ ಸಮನ್ಸ್

ಪರಿಸ್ಥಿತಿ ಸುಧಾರಿಸಲು ವಿಫಲವಾದ ಹಿನ್ನೆಲೆಯಲ್ಲಿ, ಮಂಗಳವಾರ ಸರ್ಕಾರವು ಇಂಡಿಗೋದ ಚಳಿಗಾಲದ ವೇಳಾಪಟ್ಟಿಯಲ್ಲಿ ಶೇ.10 ರಷ್ಟು ಕಡಿತಗೊಳಿಸಲು ಆದೇಶಿಸಿದೆ. ಅಲ್ಲದೆ, ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಸಮನ್ಸ್ ನೀಡಿದ್ದು, ಗುರುವಾರ (ಡಿ.11) ಖುದ್ದು ಹಾಜರಾಗಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

Read More
Next Story