
ದೆಹಲಿ ಏರ್ಪೋರ್ಟ್ನಲ್ಲಿ ಪ್ರಯಾಣಿಕರ ಸರತಿ ಸಾಲು.
ಇಂಡಿಗೋ ಸಂಕಷ್ಟ ಮುಂದುವರಿಕೆ: 610 ಕೋಟಿ ರೂಪಾಯಿ ಟಿಕೆಟ್ ಹಣ ವಾಪಸ್
ಶನಿವಾರ ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದರೆ, ಭಾನುವಾರ ಈ ಸಂಖ್ಯೆ 650ಕ್ಕೆ ಇಳಿದಿದೆ ಎಂದು ವರದಿಗಳು ತಿಳಿಸಿವೆ. ಡಿಸೆಂಬರ್ 10ರ ವೇಳೆಗೆ ಎಲ್ಲವೂ ಸರಿಹೋಗುವ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಸಿಬ್ಬಂದಿ ಕೊರತೆಯ ಬಿಕ್ಕಟ್ಟು ಸೋಮವಾರವೂ (ಡಿ.8) ಮುಂದುವರಿದಿದೆ. ಸತತ ಏಳನೇ ದಿನವೂ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿದೆ.
ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ವಿಮಾನಯಾನ ಬಿಕ್ಕಟ್ಟನ್ನು ಇಂಡಿಗೋ ಎದುರಿಸುತ್ತಿದ್ದು, ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಲು ಇನ್ನೂ ಸಮಯ ಹಿಡಿಯುವ ಸಾಧ್ಯತೆಯಿದೆ. ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬ ಮತ್ತು ರದ್ದತಿ ಸೋಮವಾರವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಶನಿವಾರ ಸಾವಿರಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದರೆ, ಭಾನುವಾರ ಈ ಸಂಖ್ಯೆ 650ಕ್ಕೆ ಇಳಿದಿದೆ ಎಂದು ವರದಿಗಳು ತಿಳಿಸಿವೆ. ಡಿಸೆಂಬರ್ 10ರ ವೇಳೆಗೆ ಎಲ್ಲವೂ ಸರಿಹೋಗುವ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ.
ಏನಿದು ದಿಢೀರ್ ಬಿಕ್ಕಟ್ಟು?
ಸರ್ಕಾರ ಜಾರಿಗೆ ತಂದಿರುವ ಪೈಲಟ್‌ಗಳ ಕರ್ತವ್ಯದ ಅವಧಿಗೆ ಸಂಬಂಧಿಸಿದ ಹೊಸ ನಿಯಮಗಳ ಪೂರ್ಣ ಅನುಷ್ಠಾನದಿಂದಾಗಿ ಕಾಕ್‌ಪಿಟ್ ಸಿಬ್ಬಂದಿಯ ತೀವ್ರ ಕೊರತೆ ಉಂಟಾಗಿತ್ತು. ಇದು ಸರಣಿ ರದ್ದತಿಗೆ ಕಾರಣವಾಯಿತು ಎಂದು ಸಂಸ್ಥೆ ಮೂಲಗಳು ತಿಳಿಸಿವೆ. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಸದ್ಯಕ್ಕೆ ಈ ನಿಯಮಕ್ಕೆ ತಡೆ ನೀಡಿದೆ. ಈ ನಡುವೆ ಸಂಸ್ಥೆಯು ರದ್ದುಗೊಂಡ ವಿಮಾನಗಳ ಪ್ರಯಾಣಿಕರಿಗೆ ಬರೋಬ್ಬರಿ 610 ಕೋಟಿ ರೂಪಾಯಿ ಮರುಪಾವತಿ ಮಾಡಿದೆ.
ಕೇಂದ್ರದಿಂದ ಕಠಿಣ ಕ್ರಮ
ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ನೀಡಿದ್ದ ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಸೋಮವಾರ ಸಂಜೆ 6 ಗಂಟೆಯವರೆಗೆ ಗಡುವು ನೀಡಿದೆ. ಇದೇ ವೇಳೆ ವಿಮಾನ ಟಿಕೆಟ್ ದರಗಳು ಗಗನಕ್ಕೇರದಂತೆ ತಡೆಯಲು ಕೇಂದ್ರ ಸರ್ಕಾರ ದರ ಮಿತಿಯನ್ನೂ ಹೇರಿದೆ. ಈ ಅವ್ಯವಸ್ಥೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಒಂದು ವರ್ಷದ ಹಿಂದೆಯೇ ನಿಯಮಾವಳಿ ನೀಡಿದ್ದರೂ ಸಿದ್ಧತೆ ಮಾಡಿಕೊಳ್ಳದ ಸಂಸ್ಥೆಯದ್ದೇ ತಪ್ಪು ಎಂದು ಕಿಡಿಕಾರಿದ್ದಾರೆ. ಶನಿವಾರದ ವರೆಗೆ ಪ್ರಯಾಣಿಕರ ಸುಮಾರು 3,000 ಬ್ಯಾಗ್‌ಗಳನ್ನು ವಾಪಸ್ ನೀಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

