ಕೋವಿಡ್‌ ನಿಂದ 11.9 ಲಕ್ಷ ಹೆಚ್ಚುವರಿ ಸಾವು: ಅಧ್ಯಯನ
x

ಕೋವಿಡ್‌ ನಿಂದ 11.9 ಲಕ್ಷ ಹೆಚ್ಚುವರಿ ಸಾವು: ಅಧ್ಯಯನ

ಭಾರತದಲ್ಲಿ‌ 2020ರ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ಹೇಳಿದೆ. ಆದರೆ, ಈ ವರದಿ ಅಸಮರ್ಥನೀಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಳ್ಳಿ ಹಾಕಿದೆ.


ನವದೆಹಲಿ, ಜುಲೈ 20: ಭಾರತದಲ್ಲಿ‌ 2020ರ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿವೆ. 2019 ಕ್ಕೆ ಹೋಲಿಸಿದರೆ ಇದು ಶೇ.17 ರಷ್ಟು ಹೆಚ್ಚು ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ಹೇಳಿದೆ.

ಇದು ಭಾರತದಲ್ಲಿನ ಅಧಿಕೃತ ಕೋವಿಡ್‌ ಸಾವಿಗಿಂತ ಎಂಟು ಪಟ್ಟು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ 1.5 ಪಟ್ಟು ಹೆಚ್ಚು ಎಂದು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳಿದ್ದಾರೆ.

ಅಧ್ಯಯನವು 7.65 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳ ದತ್ತಾಂಶವನ್ನು ಬಳಸಿಕೊಂಡಿದ್ದು, ದೇಶದಲ್ಲಿ 2019 ಮತ್ತು 2020 ರ ನಡುವೆ ಲಿಂಗ ಮತ್ತು ಸಾಮಾಜಿಕ ಗುಂಪುಗಳ ಜೀವಿತಾವಧಿಯಲ್ಲಿ ಬದಲಾವಣೆಗಳನ್ನು ಅಂದಾಜಿಸಿದೆ. ಜಾಗತಿಕ ಹೆಚ್ಚುವರಿ ಸಾವುಗಳಲ್ಲಿ ಮೂರನೇ ಒಂದು ಭಾಗದಷ್ಟು ಸಾವುಗಳು ದೇಶದಲ್ಲಿ ಸಂಭವಿಸಿವೆ ಎಂದು ಲೇಖಕರು ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಹೇಳಿದ್ದಾರೆ.

ಅಧ್ಯಯನಕ್ಕೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (ಎನ್‌ಎಫ್‌ಎಚ್‌ಎಸ್‌ -5)ಯ ದತ್ತಾಂಶಗಳನ್ನು ಬಳಸಿಕೊಳ್ಳಲಾಗಿದೆ.

ಮಹಿಳೆಯರ ಜೀವಿತಾವಧಿ 3.1 ವರ್ಷ ಹಾಗೂ ಪುರುಷರಲ್ಲಿ 2.1 ವರ್ಷ ಕಡಿಮೆಯಾಗಿದೆ. ಆರೋಗ್ಯ ರಕ್ಷಣೆಯಲ್ಲಿ ಲಿಂಗ ಅಸಮಾನತೆ ಮತ್ತು ಮನೆಯಲ್ಲಿ ಸಂಪನ್ಮೂಲ ವಿತರಣೆಯಲ್ಲಿನ ಅಸಮಾನತೆ ಸಂಭವನೀಯ ಕಾರಣ. ಇದು ಹೆಚ್ಚು ಆದಾಯದ ದೇಶಗಳಲ್ಲಿ ಕಂಡುಬರುವ ಮಾದರಿಗೆ ವ್ಯತಿರಿಕ್ತವಾಗಿದೆ. ಶ್ರೀಮಂತ ದೇಶಗಳಲ್ಲಿ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಿನ ಸಾವು ಕಂಡುಬಂದಿದೆ.

ಸಾಮಾಜಿಕ ಗುಂಪುಗಳನ್ನು ನೋಡಿದಾಗ, ಉನ್ನತ ಜಾತಿಯ ಹಿಂದು ಗುಂಪುಗಳ ಜೀವಿತಾವಧಿ 1.3 ವರ್ಷ ಕುಸಿದಿದೆ. ಮುಸ್ಲಿಮರ ಜೀವಿತಾವಧಿ 5.4 ವರ್ಷ ಮತ್ತು ಪರಿಶಿಷ್ಟ ಪಂಗಡಗಳ ಜೀವಿತಾವಧಿ 4.1 ವರ್ಷಗಳ ಕುಸಿದಿದೆ. ಅಂಚಿನಲ್ಲಿರುವ ಜಾತಿ ಮತ್ತು ಧಾರ್ಮಿಕ ಗುಂಪುಗಳ ಜೀವಿತಾವಧಿಯಲ್ಲಿನ ಅಸಮಾನತೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ ಎಂದು ಲೇಖಕರು ಹೇಳಿದ್ದಾರೆ.

ʻಅಂಚಿನ ಗುಂಪುಗಳು ಈಮೊದಲೇ ಕಡಿಮೆ ಜೀವಿತಾವಧಿ ಹೊಂದಿದ್ದವು. ಸಾಂಕ್ರಾಮಿಕವು ಹೆಚ್ಚು ಸವಲತ್ತು ಹೊಂದಿರುವ ಭಾರತೀಯ ಸಾಮಾಜಿಕ ಗುಂಪುಗಳು ಮತ್ತು ಅತ್ಯಂತ ಅಂಚಿನಲ್ಲಿರುವ ಸಾಮಾಜಿಕ ಗುಂಪುಗಳ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದೆ,ʼ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಫೆಲೋ ಲೇಖಕ ಆಶಿಶ್ ಗುಪ್ತಾ ಹೇಳಿದರು. ಇವರು ಅಧ್ಯಯನದ ಮೊದಲ ಲೇಖಕ.

ಭಾರತದಲ್ಲಿ ಕಿರಿಯ ಮತ್ತು ಹಿರಿಯರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಆದರೆ, ಹೆಚ್ಚು ಆದಾಯದ ದೇಶಗಳಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ.

ನಿರ್ದಿಷ್ಟ ಪ್ರದೇಶಗಳ ಮಕ್ಕಳು ಕೋವಿಡ್‌ ಸೋಂಕಿಗೆ ಹೆಚ್ಚು ಗುರಿಯಾಗುತ್ತಾರೆ. ಇಂಥ ಸಾವುಗಳನ್ನು ವಿವರಿಸಬಹುದು. ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳ ಪರೋಕ್ಷ ಪರಿಣಾಮ, ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಅಡೆತಡೆ ಇತ್ಯಾದಿ ಕಿರಿಯ ವಯಸ್ಕರ ಮರಣಕ್ಕೆ ಕಾರಣ ಎಂದು ಲೇಖಕರು ಹೇಳಿದ್ದಾರೆ.

ಜನಸಂಖ್ಯೆ ಮತ್ತು ಆರೋಗ್ಯ ಸಮೀಕ್ಷೆಯ ದತ್ತಾಂಶವನ್ನು ಬಳಸಿಕೊಂಡಿರುವ ನಮ್ಮ ಅಧ್ಯಯನವು ಮರಣ ಪ್ರಮಾಣವನ್ನು ಅಳೆಯುವಾಗ ಅಸಮಾನತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಸಾಂಕ್ರಾಮಿಕ ರೋಗಗಳು ಅಸಮಾನತೆಗಳನ್ನು ಇನ್ನಷ್ಟು ಹದಗೆಡಿಸಬಹುದು ಎಂದು ಜನಸಂಖ್ಯಾಶಾಸ್ತ್ರ ಮತ್ತು ಕಂಪ್ಯುಟೇಶನಲ್ ಸಾಮಾಜಿಕ ವಿಜ್ಞಾನದ ಪ್ರಾಧ್ಯಾಪಕಿ ರಿಧಿ ಕಶ್ಯಪ್ ಹೇಳಿದ್ದಾರೆ.

ಸ್ವೀಕಾರಾರ್ಹವಲ್ಲದ ವರದಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿಗೆ ಪ್ರತಿಕ್ರಿಯಿಸಿ, ಅಧ್ಯಯನದ ಅಂದಾಜುಗಳು ತಪ್ಪುದಾರಿಗೆಳೆಯುವಂಥವು, ಅಸಮರ್ಥನೀಯ ಮತ್ತು ಸ್ವೀಕಾರಾರ್ಹವಲ್ಲ ಎಂದಿದೆ. ʻಎನ್‌ಎಫ್‌ಹೆಚ್‌ಎಸ್‌ ಮಾದರಿಯನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ ಮಾತ್ರ ಇಡೀ ದೇಶವನ್ನು ಪ್ರತಿನಿಧಿಸುತ್ತದೆ. 14 ರಾಜ್ಯಗಳ ಶೇ.23 ಕುಟುಂಬಗಳನ್ನು ಪ್ರಾತಿನಿಧಿಕ ಎಂದು ಪರಿಗಣಿಸಲು ಆಗುವುದಿಲ್ಲ,ʼ ಎಂದು ಹೇಳಿದೆ.

ಭಾರತವು ಸದೃಢ ನಾಗರಿಕ ನೋಂದಣಿ ವ್ಯವಸ್ಥೆ(ಸಿಆರ್‌ಎಸ್‌)ಯನ್ನು ಅಂಗೀಕರಿಸುವಲ್ಲಿ ವಿಫಲವಾಗಿದೆ. ಇದರಿಂದ 2020 ರಲ್ಲಿ ಸಾವಿನ ದಾಖಲು ಗಣನೀಯವಾಗಿ ಹೆಚ್ಚಿದೆ. ಇದಕ್ಕೆ ಸಾಂಕ್ರಾಮಿಕ ಮಾತ್ರ ಕಾರಣವಲ್ಲ,ʼ ಎಂದು ವರದಿ ಹೇಳಿದೆ.

Read More
Next Story