Indian Youth Congress| ಉದಯ್ ಭಾನು ಚಿಬ್ ಯುವ ಕಾಂಗ್ರೆಸ್ ಅಧ್ಯಕ್ಷ
ನವದೆಹಲಿ: ಜಮ್ಮುವಿನ ಉದಯ್ ಭಾನು ಚಿಬ್ ಅವರನ್ನು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಅಧ್ಯಕ್ಷರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ. ಜಮ್ಮು-ಕಾಶ್ಮೀರ ಪ್ರದೇಶ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿದ್ದ ಚಿಬ್, ಐವೈಸಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ರಾಜ್ಯದಲ್ಲಿ ಮೂರು ಹಂತದ ವಿಧಾನಸಭೆ ಚುನಾವಣೆ ನಡುವೆಯೇ ಈ ನೇಮಕ ನಡೆದಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚಿಬ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಅವರು ಗುಲಾಂ ನಬಿ ಆಜಾದ್ ಅವರ ನಂತರ ಪಕ್ಷದ ಪ್ರಮುಖ ಸಂಘಟನೆಯ ಮುಖ್ಯಸ್ಥರಾಗಿರುವ ಜಮ್ಮು-ಕಾಶ್ಮೀರದ ಎರಡನೇ ನಾಯಕ.
ಬಿ.ವಿ. ಶ್ರೀನಿವಾಸ್ ಅವರ ಸ್ಥಾನಕ್ಕೆ ಚಿಬ್ ನೇಮಕಗೊಂಡಿದ್ದಾರೆ. ಶ್ರೀನಿವಾಸ್ ಅವರ ಐದು ವರ್ಷಗಳಿಗಿಂತ ಹೆಚ್ಚು ಅವಧಿಯಲ್ಲಿ ಐವೈಸಿ ಸಂಘಟನಾತ್ಮಕವಾಗಿ ಬಲಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಅವರ ಸಕ್ರಿಯ ಕಾರ್ಯಗಳು ಮಾಧ್ಯಮಗಳಲ್ಲಿ ಶ್ಲಾಘನೆಗೆ ಒಳಗಾಗಿತ್ತು.
ಜಮ್ಮು-ಕಾಶ್ಮೀರದಿಂದ ಐವೈಸಿ ಮುಖ್ಯಸ್ಥರಾಗಿರುವ ಎರಡನೇ ನಾಯಕ ಚಿಬ್. ಈಮೊದಲು ಆಜಾದ್ 1980-82ರ ಅವಧಿಯಲ್ಲಿ ಐವೈಸಿ ಮುಖ್ಯಸ್ಥರಾಗಿದ್ದರು. ಎನ್‌ಎಸ್‌ಯುಐ ಅಧ್ಯಕ್ಷ ವರುಣ್ ಚೌಧರಿ ಅವರಿಗಿಂತ ಮೊದಲು ಜಮ್ಮು-ಕಾಶ್ಮೀರದ ಇಬ್ಬರು ಎನ್‌ಎಸ್‌ಯುಐ ಅಧ್ಯಕ್ಷರಾಗಿದ್ದರು; ಫೈರೋಜ್ ಖಾನ್ ಮತ್ತು ನೀರಜ್ ಕುಂದನ್. ಕಳೆದ ನಾಲ್ಕು ದಶಕಗಳಲ್ಲಿ ಐವೈಸಿ ಮುಖ್ಯಸ್ಥರಾದ ಮೊದಲಿಗ ಜಮ್ಮು-ಕಾಶ್ಮೀರದ ನಾಯಕ ಚಿಬ್.
ಚಿಬ್ ಅವರು ಖರ್ಗೆ ಅವರನ್ನು ಭೇಟಿ ಮಾಡಿದ್ದು, ಯುವ ಘಟಕವನ್ನು ಬಲಪಡಿಸುವುದಾಗಿ ಹೇಳಿದರು.ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಫೋಟೋ ಪೋಸ್ಟ್ ಮಾಡಿದ್ದಾರೆ.
ಜಮ್ಮು ಉತ್ತರ ವಿಧಾನಸಭೆ ಕ್ಷೇತ್ರದ ಚಿಬ್, ಕಾಂಗ್ರೆಸ್ ನಾಯಕ ಹರಿ ಸಿಂಗ್ ಚಿಬ್ ಅವರ ಪುತ್ರ. ಜಮ್ಮು-ಕಾಶ್ಮೀರ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸಿದ ಸಮಿತಿಯ ಭಾಗವಾಗಿದ್ದರು. ಸಿವಿಲ್ ಎಂಜಿನಿಯರ್ ಪದವಿ ಮತ್ತು ಎಂಬಿಎ ಹೊಂದಿದ್ದಾರೆ.
ನಿರ್ಗಮಿತ ಐವೈಸಿ ಮುಖ್ಯಸ್ಥ ಬಿ.ವಿ.ಶ್ರೀನಿವಾಸ್ ಅವರು ಚಿಬ್ ಅವರನ್ನು ಸ್ವಾಗತಿಸಿದ್ದಾರೆ. ಐವೈಸಿ ಚಿಬ್ ಅವರನ್ನು ಅಭಿನಂದಿಸಿದೆ.