
ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿಯ ದಾರುಣ ಸಾವು: ಗುಂಡಿನ ದಾಳಿಯಲ್ಲಿ ಅಮಾಯಕ ಜೀವ ಬಲಿ
ವಿಡಿಯೊ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಕಪ್ಪು ಬಣ್ಣದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಸೆಡಾನ್ ಕಾರಿನ ಒಳಗಿದ್ದವರ ಮೇಲೆ ಗುಂಡು ಹಾರಿಸಿದ್ದ. ಈ ವೇಳೆ ಪ್ರತಿ ದಾಳಿ ನಡೆದಿತ್ತು. ಅದರಲ್ಲೊಂದು ಗುಂಡು ಹರ್ಸಿಮ್ರತ್ ಅವರಿಗೆ ತಗುಲಿತ್ತು.
ಕೆನಡಾದ ಒಂಟಾರಿಯೋದ ಹ್ಯಾಮಿಲ್ಟನ್‌ನ ಮೊಹಾಕ್ ಕಾಲೇಜಿನ 21 ವರ್ಷದ ಭಾರತ ಮೂಲದ ವಿದ್ಯಾರ್ಥಿನಿ ಹರ್ಸಿಮ್ರತ್ ರಂಧಾವಾ ಎಂಬುವರು ಆಗಂತುಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಅವರು ಕೆಲಸಕ್ಕೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಅವರಿಗೆ ಗುಂಡು ತಗುಲಿದೆ. ಎರಡು ಕಾರುಗಳಲ್ಲಿ ಇದ್ದ ವ್ಯಕ್ತಿಗಳು ಪರಸ್ಪರ ಗುಂಡು ಹಾರಿಸಿದ ವೇಳೆ ಒಂದು ಗುಂಡು ರಂಧಾವಾ ಅವರಿಗೆ ತಗುಲಿ ದಾರುಣವಾಗಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯನ್ನು ಹ್ಯಾಮಿಲ್ಟನ್ ಪೊಲೀಸ್ ಇಲಾಖೆ ಕೊಲೆ ಪ್ರಕರಣವಾಗಿ ತನಿಖೆ ನಡೆಸುತ್ತಿದೆ.
ಹ್ಯಾಮಿಲ್ಟನ್‌ನ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರೋಡ್ ಬೀದಿಗಳ ಸಮೀಪ ಏಪ್ರಿಲ್ 16ರಂದು ಸಂಜೆ 7.30ರ ಸುಮಾರಿಗೆ ಗುಂಡಿನ ದಾಳಿ ವರದಿಯಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ, ಹರ್ಸಿಮ್ರತ್ ರಂಧಾವಾ ಎದೆಗೆ ಗುಂಡೇಟು ತಗುಲಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದರು.
ವಿಡಿಯೊ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಕಪ್ಪು ಬಣ್ಣದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಸೆಡಾನ್ ಕಾರಿನ ಒಳಗಿದ್ದವರ ಮೇಲೆ ಗುಂಡು ಹಾರಿಸಿದ್ದ. ಈ ವೇಳೆ ಪ್ರತಿ ದಾಳಿ ನಡೆದಿತ್ತು. ಅದರಲ್ಲೊಂದು ಗುಂಡು ಹರ್ಸಿಮ್ರತ್ ಅವರಿಗೆ ತಗುಲಿತ್ತು. ಗುಂಡುಗಳು ಸಮೀಪದ ಮನೆಯೊಂದರ ಹಿಂಬದಿಯ ಕಿಟಕಿ ಒಡೆದು ಒಳನುಗ್ಗಿವೆ. ಆ ಮನೆಯಲ್ಲಿ ಕೆಲವೇ ಅಡಿಗಳ ದೂರದಲ್ಲಿ ಕುಟುಂಬದವರು ಟಿವಿ ವೀಕ್ಷಿಸುತ್ತಿದ್ದರು. ಆದರೆ, ಅವರಿಗೆ ಪ್ರಾಣಾಪಾಯ ಆಗಿರಲಿಲ್ಲ.
ಭಾರತೀಯ ರಾಜತಾಂತ್ರಿಕ ಕಚೇರಿ ನೆರವು
ಟೊರೊಂಟೊದ ಭಾರತೀಯ ಕಾನ್ಸುಲೇಟ್ ಜನರಲ್ ಈ ದುರ್ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದೆ. ಏಪ್ರಿಲ್ 18, 2025ರ ಶುಕ್ರವಾರ ಎಕ್ಸ್ನಲ್ಲಿ ಒಂದು ಪೋಸ್ಟ್‌ನಲ್ಲಿ, ಕಾನ್ಸುಲೇಟ್ ಅಧಿಕಾರಿಯೊಬ್ಬರು, "ಒಂಟಾರಿಯೋದ ಹ್ಯಾಮಿಲ್ಟನ್‌ನಲ್ಲಿ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಂಧಾವಾ ಅವರ ದುರಂತ ಸಾವಿನಿಂದ ನಾವು ಕಳವಳಗೊಂಡಿದ್ದೇವೆ. ಸ್ಥಳೀಯ ಪೊಲೀಸರ ಪ್ರಕಾರ, ಎರಡು ವಾಹನಗಳ ನಡುವಿನ ಗುಂಡಿನ ದಾಳಿಯಲ್ಲಿ ತಪ್ಪಾಗಿ ಗುಂಡೇಟು ತಗುಲಿ ಆಕೆ ಮೃತಪಟ್ಟಿದ್ದಾಳೆ. ನಾವು ಆಕೆಯ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಎಲ್ಲಾ ಅಗತ್ಯ ಸಹಾಯವನ್ನು ಒದಗಿಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.