
ಜಮ್ಮು ಕಾಶ್ಮೀರ
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ಯೋಧ ಹುತಾತ್ಮ
ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಚುರುಂಡಾ ಪ್ರದೇಶದಲ್ಲಿ ಒಳನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮುಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಉರಿಯ ಚುರುಂಡಾ ಪ್ರದೇಶದಲ್ಲಿ ಒಳನುಸುಳಲು ಯತ್ನಿಸಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಯಿತು. ಒಳನುಸುಳುಕೋರರಿಗೆ ಪಾಕಿಸ್ತಾನ ಸೇನೆಯಿಂದ ಗುಂಡಿನ ಬೆಂಬಲವೂ ದೊರೆಯಿತು ಎಂದು ಎನ್‌ಡಿ ಟಿವಿ ವರದಿ ಮಾಡಿದೆ.
ಚಿನಾರ್ ಕಾರ್ಪ್ಸ್ ಮಾಹಿತಿ
ಬಾರಾಮುಲ್ಲಾ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ ಕರ್ತವ್ಯದಲ್ಲಿದ್ದಾಗ ಸೈನಿಕ ಬನೋತ್ ಅನಿಲ್ ಕುಮಾರ್ ಅವರು ಹುತಾತ್ಮರಾದರು ಎಂದು ಚಿನಾರ್ ಕಾರ್ಪ್ಸ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಸೈನಿಕನ ಅಪಾರ ಶೌರ್ಯ ಮತ್ತು ತ್ಯಾಗ ಸ್ಮರಿಸುತ್ತಾ, ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಪಾಕಿಸ್ತಾನದ ಮಿಲಿಟರಿ ಮತ್ತು ರಾಜಕೀಯ ನಾಯಕತ್ವ ಪದೇ ಪದೇ ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆ ಹಾಕುತ್ತಿರುವ ಸಮಯದಲ್ಲೇ ಒಳನುಸುಳುವಿಕೆ ತೀವ್ರಗೊಂಡಿರುವುದು ಆತಂಕ ಮೂಡಿಸಿದೆ.
ಪಾಕ್ ಪ್ರಧಾನಿ ಬೆದರಿಕೆ
ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಪಾಕಿಸ್ತಾನದ ಜಲ ಸಂಪನ್ಮೂಲಗಳ ಮೇಲೆ ಯಾವುದೇ ರೀತಿಯ ಹಸ್ತಕ್ಷೇಪ ಮಾಡಿದರೆ, ತಕ್ಕ ಪಾಠ ಕಲಿಸುವುದಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಇದೇ ರೀತಿಯ ಬೆದರಿಕೆ ಒಡ್ಡಿದ್ದರು. ಭಾರತದ ನೀರಿನ ಯೋಜನೆಗಳನ್ನು "ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯ ಮೇಲಿನ ದಾಳಿ" ಎಂದು ಕರೆದಿದ್ದರು.
ಭಾರತವು 1960 ರ ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಿದ ನಂತರ 250 ಮಿಲಿಯನ್ ಪಾಕಿಸ್ತಾನಿಯರು ಹಸಿವಿನ ಅಪಾಯ ಎದುರಿಸುತ್ತಿದ್ದಾರೆ ಎಂದು ಸೇನಾ ಮುಖ್ಯಸ್ಥ ಮುನೀರ್ ಹೇಳಿದ್ದಾರೆ. ಆದರೆ, ಪಾಕಿಸ್ತಾನದ ಬೆದರಿಕೆಗಳ ಬಗ್ಗೆ ಭಾರತ ಸರ್ಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪರಮಾಣು ಬೆದರಿಕೆ ಒಡ್ಡಿದ ಅಸಿಮ್ ಮುನೀರ್
ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಖಾಸಗಿ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವು ಭವಿಷ್ಯದಲ್ಲಿ ಭಾರತದೊಂದಿಗೆ ಯಾವುದೇ ಸಂಘರ್ಷದಲ್ಲಿ ಅಸ್ತಿತ್ವದ ಬೆದರಿಕೆ ಎದುರಿಸಿದರೆ ಪಾಕಿಸ್ತಾನವು ಅರ್ಧ ಜಗತ್ತನ್ನು ನಾಶಪಡಿಸಲಿದೆ ಎಂದು ಘೋಷಿಸಿದ್ದರು.
ಟ್ಯಾಂಪಾದ ಹೋಟೆಲ್‌ನಲ್ಲಿ ಪಾಕಿಸ್ತಾನಿ ವಲಸೆಗಾರರಿಗಾಗಿ ನಡೆದ ಬ್ಲ್ಯಾಕ್-ಟೈ ಕಾರ್ಯಕ್ರಮದಲ್ಲಿ ಮುನೀರ್ ಈ ಹೇಳಿಕೆ ನೀಡಿದ್ದರು. ಅಲ್ಲಿ ಫೋನ್‌ಗಳು ಮತ್ತು ಕ್ಯಾಮೆರಾಗಳಿಗೆ ನಿರ್ಬಂಧವಿತ್ತು. ಮುನೀರ್ ತಮ್ಮ ಭಾಷಣದ ಸಮಯದಲ್ಲಿ ಮೂರು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.
ಮೊದಲನೆಯದಾಗಿ, " ನಾವು ಪರಮಾಣು ರಾಷ್ಟ್ರ. ನಾವು ಪತನಗೊಳ್ಳುತ್ತಿದ್ದೇವೆ ಎಂದು ನಮಗೆ ಅನಿಸಿದರೆ, ನಾವು ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ" ಎಂದು ಹೇಳಿದ್ದರು.
ಎರಡನೆಯದಾಗಿ, ಭಾರತ ಅಣೆಕಟ್ಟು ನಿರ್ಮಿಸುವವರೆಗೆ ನಾವು ಕಾಯುತ್ತೇವೆ. ಅದು ನಿರ್ಮಿಸಿದ ನಂತರ ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ನಮ್ಮಲ್ಲಿ ಕ್ಷಿಪಣಿಗಳ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ.
ಮೂರನೆಯದಾಗಿ, ಭಾರತ ʻಹೆದ್ದಾರಿಯಲ್ಲಿ ಸಾಗುವ ಹೊಳೆಯುವ ಮರ್ಸಿಡಿಸ್ʼ ಬೆಂಜ್ ಮತ್ತು ಪಾಕಿಸ್ತಾನ ʻಜಲ್ಲಿಕಲ್ಲು ತುಂಬಿದ ಡಂಪ್ ಟ್ರಕ್ʼ ಇದ್ದಂತೆ. ಇದರರ್ಥ ಯಾವುದೇ ಸಂಘರ್ಷದಲ್ಲಿ ಭಾರತವು ಹೆಚ್ಚಿನ ನಷ್ಟ ಅನುಭವಿಸಲಿದೆ ಎಂದು ಹೇಳಿದ್ದರು.
ಭಾರತದ ಪ್ರತಿಕ್ರಿಯೆ
ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನದ ಪರಮಾಣು ದಾಳಿ ಬೆದರಿಕೆಯನ್ನು ಖಂಡಿಸಿದೆ. ಅಲ್ಲದೇ ಬೆದರಿಕೆ ಹಾಕಿದ ಮೂರನೇ ಸ್ಥಳದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ʻʻಅಂತರರಾಷ್ಟ್ರೀಯ ಸಮುದಾಯವು ಇಂತಹ ಹೇಳಿಕೆಗಳಲ್ಲಿ ಅಂತರ್ಗತವಾಗಿರುವ ಬೇಜವಾಬ್ದಾರಿ ಬಗ್ಗೆ ತನ್ನದೇ ಆದ ತೀರ್ಮಾನ ತೆಗೆದುಕೊಳ್ಳಬಹುದು. ಇದು ಮಿಲಿಟರಿ ಭಯೋತ್ಪಾದಕ ಗುಂಪುಗಳೊಂದಿಗೆ ಕೈಜೋಡಿಸಿದ ರಾಜ್ಯದಲ್ಲಿ ಪರಮಾಣು ಆಜ್ಞೆ ಮತ್ತು ನಿಯಂತ್ರಣದ ಸಮಗ್ರತೆಯ ಬಗ್ಗೆ ಚೆನ್ನಾಗಿ ನೆಲೆಸಿರುವ ಅನುಮಾನ ಬಲಪಡಿಸುತ್ತದೆ. ಭಾರತವು ಇಂತಹ ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ. ತನ್ನ ರಾಷ್ಟ್ರೀಯ ಭದ್ರತೆ ಕಾಪಾಡಲು ಎಲ್ಲಾ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.