
ರೈಲು ಪ್ರಯಾಣಿಕರೇ ಗಮನಿಸಿ: ಇಂದಿನಿಂದಲೇ ಟಿಕೆಟ್ ದರ ಏರಿಕೆ!
ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ದರವನ್ನು ಹೆಚ್ಚಿಸಿದೆ. ಪ್ರತಿ ಕಿಲೋಮೀಟರ್‌ಗೆ 1 ರಿಂದ 2 ಪೈಸೆ ಏರಿಕೆಯಾಗಿದ್ದು, ಡಿಸೆಂಬರ್ 26ರಿಂದ ಜಾರಿಗೆ ಬರಲಿದೆ.
ಭಾರತೀಯ ರೈಲ್ವೆಯು ಪ್ರಯಾಣಿಕರ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರಗಳು ಶುಕ್ರವಾರದಿಂದ (ಡಿಸೆಂಬರ್ 26, 2025) ಜಾರಿಗೆ ಬರಲಿವೆ. ಜುಲೈ ತಿಂಗಳ ನಂತರ ಈ ವರ್ಷದಲ್ಲಿ ನಡೆಯುತ್ತಿರುವ ಎರಡನೇ ದರ ಪರಿಷ್ಕರಣೆ ಇದಾಗಿದೆ. ಐದುವರೆ ವರ್ಷಗಳ ಬಳಿಕ (ಜನವರಿ 1, 2020ರ ನಂತರ) ರೈಲ್ವೆ ಇಲಾಖೆ ಇಂತಹದೊಂದು ನಿರ್ಧಾರಕ್ಕೆ ಬಂದಿದೆ. ಜುಲೈನಲ್ಲಿ ಎಸಿ ಮತ್ತು ನಾನ್-ಎಸಿ ದರಗಳಲ್ಲಿ ಸಣ್ಣ ಮಟ್ಟದ ಬದಲಾವಣೆ ಮಾಡಲಾಗಿತ್ತಾದರೂ, ಅದು ಎಲ್ಲಾ ಕಡೆಗಳಲ್ಲಿ ಅನ್ವಯ ಆಗಿರಲಿಲ್ಲ. ಡೀಸೆಲ್ ಮತ್ತು ವಿದ್ಯುತ್ ದರಗಳ ಏರಿಕೆಯಿಂದ ರೈಲುಗಳನ್ನು ಓಡಿಸುವ ವೆಚ್ಚ ಹೆಚ್ಚಾಗಿದೆ ಹೀಗಾಗಿ ದರ ಏರಿಕೆ ಮಾಡಲಾಗಿದೆ.
ದರ ಹೆಚ್ಚಳದ ಪ್ರಮಾಣ ಎಷ್ಟು?
ರೈಲ್ವೆ ಸಚಿವಾಲಯದ ಪ್ರಕಟಣೆಯ ಪ್ರಕಾರ
ಸಾಮಾನ್ಯ ದರ್ಜೆ: 215 ಕಿ.ಮೀ ಗಿಂತ ಹೆಚ್ಚಿನ ಪ್ರಯಾಣಕ್ಕೆ ಪ್ರತಿ ಕಿ.ಮೀ ಗೆ 1 ಪೈಸೆ ಹೆಚ್ಚಳ.
ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು: ಎಸಿ ಮತ್ತು ಎಸಿ ರಹಿತ (Non-AC) ಎರಡೂ ದರ್ಜೆಗಳಿಗೆ ಪ್ರತಿ ಕಿ.ಮೀ ಗೆ 2 ಪೈಸೆ ಹೆಚ್ಚಳ.
ಎಸಿ ದರ್ಜೆಗಳು: ಎಲ್ಲಾ ರೈಲುಗಳ ಎಸಿ ಕ್ಲಾಸ್‌ಗಳಿಗೆ ಪ್ರತಿ ಕಿ.ಮೀ ಗೆ 2 ಪೈಸೆ ಏರಿಕೆ ಮಾಡಲಾಗಿದೆ.
ಯಾರಿಗೆ ವಿನಾಯಿತಿ ಇದೆ?
ಸಾಮಾನ್ಯ ಜನರಿಗೆ ಹೊರೆಯಾಗದಂತೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ
ಸಬರ್ಬನ್ ರೈಲುಗಳು: ಉಪನಗರ ರೈಲು ಸೇವೆಗಳು ಮತ್ತು ಸೀಸನ್ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.
ಕಡಿಮೆ ದೂರದ ಪ್ರಯಾಣ: 215 ಕಿ.ಮೀ ವರೆಗಿನ ಎರಡನೇ ದರ್ಜೆಯ ಸಾಮಾನ್ಯ ಪ್ರಯಾಣದ ದರ ಏರಿಕೆ ಮಾಡಲಾಗಿಲ್ಲ. ಇದು ದೈನಂದಿನ ಪ್ರಯಾಣಿಕರಿಗೆ ನೆರವಾಗಲಿದೆ.
ದರ ಏರಿಕೆ ಎಷ್ಟು? ಲೆಕ್ಕಾಚಾರ ಹೇಗೆ?
ರೈಲ್ವೆ ಇಲಾಖೆಯು ಕಿಲೋಮೀಟರ್ ಆಧಾರದ ಮೇಲೆ ದರವನ್ನು ಹೆಚ್ಚಿಸಿದೆ. ಸರಳವಾಗಿ ಹೇಳಬೇಕೆಂದರೆ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ನೀವು ಎಸಿ ಕೋಚ್‌ನಲ್ಲಿ ಪ್ರಯಾಣಿಸಿ ಅಥವಾ ನಾನ್-ಎಸಿ ಸ್ಲಿಪರ್‌ನಲ್ಲಿ ಪ್ರಯಾಣಿಸಿ, ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚುವರಿ ದರ ಕೊಡಬೇಕಾಗುತ್ತದೆ. ಸಾಮಾನ್ಯ ದರ್ಜೆಯಲ್ಲಿ 215 ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಪ್ರಯಾಣಿಸುವವರಿಗೆ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಳವಾಗಲಿದೆ.
ಉದಾಹರಣೆಗೆ, ನೀವು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಮಾಡುವುದಾದರೆ 1,000 ಕಿಲೋಮೀಟರ್ ಸಾಗಬಕೇಕು ಎಂದುಕೊಳ್ಳೋಣ. ಹಳೆಯ ದರಕ್ಕೆ ಹೋಲಿಸಿದರೆ, ಈಗಿನ 2 ಪೈಸೆ ಏರಿಕೆಯಂತೆ ನೀವು ಒಂದು ಟಿಕೆಟ್‌ಗೆ 20 ರೂಪಾಯಿ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ (1000 km x 0.02 = 20 ರೂ.). ಇದು ಚಿಕ್ಕ ಮೊತ್ತ ಎನಿಸಿದರೂ, ಕುಟುಂಬ ಸಮೇತ ಹೋಗುವಾಗ ಅಥವಾ ಆಗಾಗ ಪ್ರಯಾಣಿಸುವಾಗ ಈ ಮೊತ್ತದ ಹೊರೆ ತಿಳಿಯುತ್ತದೆ.
ಯಾವೆಲ್ಲಾ ರೈಲುಗಳಿಗೆ ಅನ್ವಯ?
ವಂದೇ ಭಾರತ್, ರಾಜಧಾನಿ, ಶತಾಬ್ದಿ, ದುರಂತೋ, ತೇಜಸ್, ಗತಿಮಾನ್, ಹಮ್‌ಸಫರ್, ಅಮೃತ್ ಭಾರತ್, ಗರೀಬ್ ರಥ್, ಜನ ಶತಾಬ್ದಿ ಮತ್ತು ನಮೋ ಭಾರತ್ ರಾಪಿಡ್ ರೈಲು ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ರೈಲುಗಳಿಗೆ ಹೊಸ ದರ ಅನ್ವಯವಾಗಲಿದೆ.
ದರ ಏರಿಕೆಗೆ ಕಾರಣವೇನು?
- ವಂದೇ ಭಾರತ್ ರೈಲುಗಳ ವಿಸ್ತರಣೆ, ಅಮೃತ್ ಭಾರತ್ ನಿಲ್ದಾಣಗಳ ಅಭಿವೃದ್ಧಿ ಮತ್ತು 'ಕವಚ'ದಂತಹ ಸುರಕ್ಷತಾ ತಂತ್ರಜ್ಞಾನಗಳ ಅಳವಡಿಕೆಗೆ ಇಲಾಖೆಗೆ ದೊಡ್ಡ ಮೊತ್ತದ ಹಣಕಾಸಿನ ಅಗತ್ಯವಿದೆ ಅದಕ್ಕಾಗಿ ಬೆಲೆ ಹೆಚ್ಚಿಸಲಾಗುತ್ತಿದೆ.
- ಡಿಸೆಂಬರ್ 26ರ ನಂತರ ನೀವು ಟಿಕೆಟ್ ಬುಕ್ ಮಾಡುವಾಗ ಅಥವಾ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವಾಗ ದರದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಇದು ಜನಸಾಮಾನ್ಯರ ಮೇಲೆ ದೊಡ್ಡ ಮಟ್ಟದ ಪ್ರಹಾರವಲ್ಲದಿದ್ದರೂ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಇದೊಂದು ಹೆಚ್ಚುವರಿ ಹೊರೆ ಎಂಬುದಂತೂ ಸತ್ಯ.
ವಿಶೇಷ ಸೂಚನೆ
ಡಿಸೆಂಬರ್ 26ರ ಮೊದಲು ಬುಕ್ ಮಾಡಲಾದ ಟಿಕೆಟ್‌ಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಇಂದು ಅಥವಾ ಇಂದಿನ ನಂತರ ಬುಕ್ ಮಾಡುವ ಟಿಕೆಟ್‌ಗಳಿಗೆ ಮಾತ್ರ ಹೊಸ ದರ ಅನ್ವಯವಾಗುತ್ತದೆ.

