
ಮುಸ್ಲಿಮರಿಗೆ ಮೀಸಲಾತಿ ನೀಡಲು INDIA ಸಂವಿಧಾನವನ್ನು ಬದಲಾಯಿಸಲಿದೆ: ಪ್ರಧಾನಿ ಮೋದಿ
ಮಿರ್ಜಾಪುರ (ಉತ್ತರ ಪ್ರದೇಶ): ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಕೋಮುವಾದ ಮತ್ತು 'ಜಾತಿವಾದ'ದಿಂದ ಕೂಡಿದ್ದು, ಮೈತ್ರಿಕೂಟದ ನಾಯಕರು ಮುಸ್ಲಿಮರಿಗೆ ಮೀಸಲಾತಿ ಒದಗಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಲು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಮಿರ್ಜಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಅನುಪ್ರಿಯಾ ಪರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
'ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಮೀಸಲಾಗಿದ್ದರೆ, ನಾವು ಹಿಂದುಳಿದ ವರ್ಗಗಳು ಮತ್ತು ಬಡವರ ಹಕ್ಕುಗಳಿಗೆ ಸಮರ್ಪಿತರಾಗಿದ್ದೇವೆ' ಎಂದು ಮೋದಿ ತಿಳಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ನಾಯಕರು ಕೋಮುವಾದಿ, ಜಾತಿವಾದಿ ಹಾಗೂ ಪರಿವಾರವಾದಿಗಳಾಗಿದ್ದಾರೆ (ಕುಟುಂಬಗಳ ಹಿಡಿತ). ಅವರು ಅಧಿಕಾರದಲ್ಲಿದ್ದಾಗಲೆಲ್ಲ ಕುಟುಂಬ ರಾಜಕಾರಣದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ದೇಶದ ಜನರಿಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ಪಕ್ಷವು ಯಾದವ ಸಮುದಾಯವನ್ನು ನಿರ್ಲಕ್ಷಿಸುವ ಮೂಲಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದ ಸದಸ್ಯರಿಗೆ ಮಾತ್ರ ಟಿಕೆಟ್ ನೀಡಿದೆ ಎಂದು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಏಳನೇ ಮತ್ತು ಕೊನೆಯ ಹಂತದ ಮತದಾನ ಜೂನ್ 1ರಂದು ನಡೆಯಲಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.