
ಕಜನ್, ಯೆಕಟೆರಿನ್‌ಬರ್ಗ್‌ನಲ್ಲಿ ಭಾರತೀಯ ದೂತಾವಾಸ ಕಚೇರಿ: ಪ್ರಧಾನಿ
ಮಾಸ್ಕೋ, ಜು.9: ರಷ್ಯದೊಂದಿಗೆ ಪ್ರಯಾಣ ಮತ್ತು ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಭಾರತವು ಕಜನ್ ಮತ್ತು ಯೆಕಟೆರಿನ್‌ಬರ್ಗ್ ನಗರಗಳಲ್ಲಿ ದೂತಾವಾಸ ಕಚೇರಿಗಳನ್ನು ತೆರೆಯಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಭಾರತ ಪ್ರಸ್ತುತ ಸೇಂಟ್ ಪೀಟರ್ಸ್‌ಬರ್ಗ್ ಮತ್ತು ವ್ಲಾಡಿವೋಸ್ಟಾಕ್ ನಲ್ಲಿ ಎರಡು ದೂತಾವಾಸಗಳನ್ನು ಹೊಂದಿದೆ.
ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಜನ್ ಮತ್ತು ಯೆಕಟೆರಿನ್‌ಬರ್ಗ್‌ನಲ್ಲಿ ಹೊಸ ದೂತಾವಾಸ ಕಚೇರಿ ತೆರೆಯುವುದಾಗಿ ಹೇಳಿದರು.
ಯೆಕಟೆರಿನ್‌ಬರ್ಗ್ ರಷ್ಯಾದ ನಾಲ್ಕನೇ ದೊಡ್ಡ ನಗರವಾಗಿದ್ದು, ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ. 2018 ರಲ್ಲಿ ರಷ್ಯಾದಲ್ಲಿ ಫಿಫಾ ವಿಶ್ವ ಕಪ್ ಪಂದ್ಯಾವಳಿ ನಡೆದಾಗ, ನಗರದಲ್ಲಿ ನಾಲ್ಕು ಪಂದ್ಯಗಳನ್ನು ಆಯೋಜಿಸ ಲಾಗಿತ್ತು.
ವೋಲ್ಗಾ ಮತ್ತು ಕಜಾಂಕಾ ನದಿಗಳ ಸಂಗಮದಲ್ಲಿರುವ ಕಜನ್, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರ. ದೇಶದ ಉದಯೋನ್ಮುಖ ಆರ್ಥಿಕ ಕೇಂದ್ರವಾಗಿದೆ. ಅಕ್ಟೋಬರ್‌ನಲ್ಲಿ ಕಜನ್‌ನಲ್ಲಿ ರಷ್ಯಾ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದೆ.