Gold Rate | ಚೀನಾ ಮೀರಿಸಿ ವಿಶ್ವದ ಅತಿದೊಡ್ಡ ಚಿನ್ನಾಭರಣ ಬಳಕೆದಾರ ರಾಷ್ಟ್ರವಾದ ಭಾರತ
x
ಚಿನ್ನದ ಆಭರಣಗಳು (ಪ್ರಾತಿನಿಧಿಕ ಚಿತ್ರ)

Gold Rate | ಚೀನಾ ಮೀರಿಸಿ ವಿಶ್ವದ ಅತಿದೊಡ್ಡ ಚಿನ್ನಾಭರಣ ಬಳಕೆದಾರ ರಾಷ್ಟ್ರವಾದ ಭಾರತ

Gold Rate: ಆಭರಣಗಳ ಬಳಕೆ ಹೆಚ್ಚಾದುದರಿಂದ ಭಾರತದಲ್ಲಿ ಒಟ್ಟು ಚಿನ್ನದ ಬೇಡಿಕೆ ಶೇ.5ರಷ್ಟು ಹೆಚ್ಚಳ ಕಂಡು ಬಂದಿದೆ. 2024ರಲ್ಲಿ 802.8 ಟನ್‌ ಚಿನ್ನಾಭರಣಗಳು ಮಾರಾಟವಾಗಿದ್ದರೆ 2023ರಲ್ಲಿ ಅದು 761 ಟನ್‌ನಷ್ಟಿತ್ತು.


2024ರಲ್ಲಿ ಚಿನ್ನದ ಬೇಡಿಕೆಯ ಮೌಲ್ಯವು 22 ಶೇಕಡಾ ಹೆಚ್ಚಳ ಕಂಡಿತ್ತು (Gold Rate). ಆದಾಗ್ಯೂ ಚಿನ್ನದ ಮೇಲಿನ ಜನರ ಪ್ರೀತಿ ಕಡಿಮೆಯಾಗಿಲ್ಲ. ಹೀಗಾಗಿ ಗರಿಷ್ಠ ಪ್ರಮಾಣದ ಚಿನ್ನ ಖರೀದಿಯೊಂದಿಗೆ ಇದುವರೆಗೆ ಅಗ್ರಸ್ಥಾನದಲ್ಲಿದ್ದ ಚೀನಾವನ್ನುಹಿಂದಿಕ್ಕಿ ವಿಶ್ವದ ಅತಿ ದೊಡ್ಡ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದಿದೆ. 2024ರಲ್ಲಿ ಭಾರತದಲ್ಲಿ 563.4 ಟನ್ ಚಿನ್ನಾಭರಣ ಖರೀದಿಯಾಗಿದ್ದು, ಈ ಮೂಲಕ ಚೀನಾದ 511.4 ಟನ್ ಬಳಕೆಯನ್ನು ಮೀರಿಸಿದೆ.

ಆಭರಣಗಳ ಬಳಕೆ ಹೆಚ್ಚಾದುದರಿಂದ ಭಾರತದಲ್ಲಿ ಒಟ್ಟು ಚಿನ್ನದ ಬೇಡಿಕೆ ಶೇಕಡಾ 5ರಷ್ಟು ಹೆಚ್ಚಳ ಕಂಡು ಬಂದಿದೆ. 2024ರಲ್ಲಿ 802.8 ಟನ್‌ ಚಿನ್ನಾಭರಣಗಳು ಮಾರಾಟವಾಗಿದ್ದರೆ 2023ರಲ್ಲಿ ಅದು 761 ಟನ್‌ನಷ್ಟಿತ್ತು.

ವಿಶ್ವ ಚಿನ್ನ ಮಂಡಳಿಯ (WGC) ಅಂದಾಜಿನ ಪ್ರಕಾರ, 2025ರಲ್ಲಿ ಭಾರತದಲ್ಲಿ ಚಿನ್ನ ಬಳಕೆ 700 ರಿಂದ 800 ಟನ್ ನಡುವೆ ಸ್ಥಿರವಾಗಲಿದೆ. 2024ರಲ್ಲಿ ಚಿನ್ನದ ಬೇಡಿಕೆಯ ಮೌಲ್ಯವು ಶೇಕಡಾ 31 ರಷ್ಟು ಏರಿಕೆಯಾಗಿ ₹5,15,390 ಕೋಟಿ ಮುಟ್ಟಿದರೆ, 2023ರಲ್ಲಿ ಇದು ₹3,92,000 ಕೋಟಿಯಷ್ಟಿತ್ತು.

ಮಂಡಳಿಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಜೈನ್ ನೀಡಿದ ಮಾಹಿತಿಯಂತೆ, 2025ರಲ್ಲಿ ಅಂದಾಜಿನ ಪ್ರಕಾರ ಚಿನ್ನದ ಬೇಡಿಕೆ 700ರಿಂದ 800 ಟನ್ ನಡುವೆಯೇ ಇರಲಿದೆ. ಮದುವೆ ಹಾಗೂ ಶುಭ ಸಮಾರಂಭಗಳ ಖರೀದಿ ಹೆಚ್ಚಾದರೆ ಚಿನ್ನಾಭರಣ ಬೇಡಿಕೆ ಪುನಶ್ಚೇತನಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

2025ರ ಜನವರಿ 1ರ ವೇಳೆಗೆ ಪ್ರತಿ 10 ಗ್ರಾಂ ಚಿನ್ನದ ಬೆಲೆ 6,410 (8.07%) ರೂಪಾಯಿ ಏರಿಕೆಯಾಗಿದ್ದು, 79,390 ರೂಪಾಯಿಯಿಂದ ₹85,800 ಮುಟ್ಟಿದೆ.

ಆಮದು ಸುಂಕ ಕಡಿತದ ಪರಿಣಾಮ

2024ರಲ್ಲಿ ಚಿನ್ನಾಭರಣ ಬೇಡಿಕೆ 2 ಶೇಕಡಾ ಕುಸಿದು 563.4 ಟನ್ ಆಗಿತ್ತು. 2023ರಲ್ಲಿ ಇದು 575.8 ಟನ್ ಇತ್ತು. ಚಿನ್ನದ ಬೆಲೆಗಳು ಹಲವು ಬಾರಿ ದಾಖಲೆ ಮಟ್ಟ ತಲುಪಿದ ಕಾರಣವೂ ಕುಸಿತ ಉಂಟಾಗಿತ್ತು. ಆದಾಗ್ಯೂ ಚಿನ್ನಾಭರಣ ಬೇಡಿಕೆ ಭಾರತದಲ್ಲಿ ಸ್ಥಿರತೆ ತೋರಿಸುತ್ತದೆ ಮತ್ತು ಜುಲೈನಲ್ಲಿ ನಡೆದ ಸುಂಕ ಕಡಿತದ ಪರಿಣಾಮ ಬೀರಿದೆ. ಭಾರತದ ಆರ್ಥಿಕ ಬೆಳವಣಿಗೆಯೂ ಇದಕ್ಕೆ ಒಂದು ಪ್ರಮುಖ ಕಾರಣ ಎಂದು ಜೈನ್‌ ಅಭಿಪ್ರಾಯಪಟ್ಟಿದ್ದಾರೆ.

ಚಿನ್ನದ ಮೇಲೆ ಹೂಡಿಕೆ ಏರಿಕೆ

ಸುಂಕ ಕಡಿತದ ನಂತರ ಚಿನ್ನದ ಬೆಲೆಗಳು ಮತ್ತೆ ಏರಿಕೆ ಕಂಡವು. ಆದರೆ, ನವೆಂಬರ್‌ನಲ್ಲಿ ಬೆಲೆ ಕುಸಿತ ಕಂಡ ನಂತರ ಕಡಿಮೆ ದರದಲ್ಲಿ ಖರೀದಿಸಲು ಹೂಡಿಕೆದಾರರು ಆಸಕ್ತಿ ತೋರಿದ್ದರು.

2024ರಲ್ಲಿ ಚಿನ್ನದ ಹೂಡಿಕೆ ಮೌಲ್ಯವು 29 ಶೇಕಡಾ ಏರಿಕೆಯಾಗಿದ್ದು, 239.4 ಟನ್ ತಲುಪಿತ್ತು. ಇದು 2013 ನಂತರದ ಗರಿಷ್ಠ ಮಟ್ಟ. 2023ರಲ್ಲಿ 185.2 ಟನ್ ಮಾತ್ರ ಹೂಡಿಕೆಯಾಗಿತ್ತು. ಇದರಿಂದ ಚಿನ್ನವು ಭದ್ರ ಹೂಡಿಕೆ ಸಂಪತ್ತು ಎಂಬುದನ್ನು ಸಾಬೀತಾಗಿದೆ ಎಂದು ಜೈನ್‌ ಹೇಳಿದ್ದಾರೆ.

2024ರಲ್ಲಿ ಚಿನ್ನದ ಮರುಬಳಕೆ 2 ಶೇಕಡಾ ಕುಸಿತ ಕಂಡಿದ್ದು, 117.1 ಟನ್‌ನಿಂದ 114.3 ಟನ್‌ಗೆ ಇಳಿದಿದೆ. ಭಾರತ 2024ರಲ್ಲಿ 712.1 ಟನ್ ಚಿನ್ನ ಆಮದು ಮಾಡಿಕೊಂಡಿದ್ದು, ಹಿಂದಿನ ವರ್ಷದ 744 ಟನ್‌ಗೆ ಹೋಲಿಸಿದರೆ 4 ಶೇಕಡಾ ಇಳಿಕೆಯಾಗಿದೆ.

ಮುಂದೇನು?

2024ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 73 ಟನ್ ಚಿನ್ನ ಖರೀದಿಸಿದ್ದು, 2023ರಲ್ಲಿ ಕೇವಲ 16 ಟನ್ ಮಾತ್ರ ಖರೀದಿಸಿತ್ತು. ಚಿನ್ನದ ಹೂಡಿಕೆ ನಿರಂತರವಾಗಿ ಬೆಳೆಯುವ ನಿರೀಕ್ಷೆಯಿದ್ದು, ಚಿಲ್ಲರೆ ಹೂಡಿಕೆದಾರರು ಚಿನ್ನ, ಡಿಜಿಟಲ್ ಚಿನ್ನ, ನಾಣ್ಯಗಳು ಹಾಗೂ ಬಾರ್ ಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

Read More
Next Story