
ಅಕ್ಟೋಬರ್‌ನಲ್ಲಿ ವಾಡಿಕೆಗಿಂತ ಶೇ. 15 ಹೆಚ್ಚು ಮಳೆ ಸಾಧ್ಯತೆಯ ಮುನ್ಸೂಚನೆ
ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರ ಪ್ರಕಾರ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಿಂಗಾರು ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹೇಳಿದ್ದಾರೆ.
ನಾಲ್ಕು ತಿಂಗಳ ಕಾಲ ಉತ್ತಮ ಮುಂಗಾರು ಮಳೆಯಾದ ಬೆನ್ನಲ್ಲೇ, ಅಕ್ಟೋಬರ್ ತಿಂಗಳಲ್ಲೂ ದೇಶಾದ್ಯಂತ ವಾಡಿಕೆಗಿಂತ ಶೇ. 15ರಷ್ಟು ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.
ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರ ಪ್ರಕಾರ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಿಂಗಾರು ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ವಾಯುವ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಸಾಮಾನ್ಯ ಅಥವಾ ಅದಕ್ಕಿಂತ ಕಡಿಮೆ ಮಳೆಯಾಗಬಹುದು. ಜೊತೆಗೆ, ಅಕ್ಟೋಬರ್ ತಿಂಗಳಲ್ಲಿ ಪೂರ್ವ-ಈಶಾನ್ಯ ಮತ್ತು ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಹಿಂಗಾರು ಅಬ್ಬರ
ದಕ್ಷಿಣ ಭಾರತಕ್ಕೆ ಸಂಬಂಧಿಸಿದಂತೆ, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಈಶಾನ್ಯ ಮುಂಗಾರು (ಹಿಂಗಾರು) ಮಳೆಯು ದಕ್ಷಿಣ ಪರ್ಯಾಯ ದ್ವೀಪದಲ್ಲಿ (ತಮಿಳುನಾಡು, ಕರಾವಳಿ ಆಂಧ್ರ, ರಾಯಲಸೀಮೆ, ಕೇರಳ ಮತ್ತು ದಕ್ಷಿಣ ಒಳನಾಡು ಕರ್ನಾಟಕ) ವಾಡಿಕೆಗಿಂತ ಹೆಚ್ಚಾಗುವ (ದೀರ್ಘಾವಧಿಯ ಸರಾಸರಿಯ ಶೇ. 112ಕ್ಕಿಂತ ಹೆಚ್ಚು) ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಈ ಭಾಗದ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣ 334.13 ಮಿ.ಮೀ. ಆಗಿದೆ.
ಅಕ್ಟೋಬರ್ ತಿಂಗಳೊಂದರಲ್ಲೇ ದೇಶಾದ್ಯಂತ ವಾಡಿಕೆಗಿಂತ ಶೇ. 115ಕ್ಕಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ (ಅಕ್ಟೋಬರ್ ತಿಂಗಳ ದೀರ್ಘಾವಧಿ ಸರಾಸರಿ ಮಳೆ 75.4 ಮಿ.ಮೀ.). ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಂತಹ ವಾತಾವರಣದ ಪ್ರಕ್ರಿಯೆಗಳು ಇದಕ್ಕೆ ಕಾರಣವೆಂದು ಮೊಹಾಪಾತ್ರ ವಿವರಿಸಿದ್ದಾರೆ. ಆದಾಗ್ಯೂ, ವಾಯುವ್ಯ ಭಾರತದ ಕೆಲವು ಪ್ರದೇಶಗಳು, ದಕ್ಷಿಣ ಪರ್ಯಾಯ ದ್ವೀಪ ಮತ್ತು ಈಶಾನ್ಯ ಭಾರತದ ಕೆಲವೆಡೆ ಅಕ್ಟೋಬರ್‌ನಲ್ಲಿ ಸಾಮಾನ್ಯ ಮಳೆಯಾಗಬಹುದು ಎಂದು ಅವರು ತಿಳಿಸಿದ್ದಾರೆ.