ನೆಸ್ಲೆ ಇಂಡಿಯಾ 2024 ರ ಆರ್ಥಿಕ ವರ್ಷದಲ್ಲಿ ಮ್ಯಾಗಿಯ ಆರು ಶತಕೋಟಿ ಪೊಟ್ಟಣಗಳನ್ನು ಮಾರಾಟ ಮಾಡಿದೆ. ಭಾರತ ಮ್ಯಾಗಿಯ ಅತಿ ದೊಡ್ಡ ಹಾಗೂ ಕಿಟ್‌ ಕ್ಯಾಟ್‌ ನ ಎರಡನೇ ಅತಿ ದೊಡ್ಡ ಮಾರುಕಟ್ಟೆ ಯಾಗಿದೆ. ನೆಸ್ಲೆ ಇಂಡಿಯಾ ಮಾರ್ಚ್ 31, 2024 ರವರೆಗಿನ ಹದಿನೈದು ತಿಂಗಳಲ್ಲಿ 24,275.50 ಕೋಟಿ ರೂ. ವಹಿವಾಟು ನಡೆಸಿದೆ.

ನವದೆಹಲಿ, ಜೂನ್ 18- ಭಾರತವು ನೆಸ್ಲೆಯ ಮ್ಯಾಗಿ ನೂಡಲ್ಸ್ ನ ಅತಿ ದೊಡ್ಡ ಹಾಗೂ ಕಿಟ್‌ಕ್ಯಾಟ್‌ ನ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂದು ನೆಸ್ಲೆಯ ಸ್ಥಳೀಯ ಅಂಗಸಂಸ್ಥೆಯ ಇತ್ತೀಚಿನ ವಾರ್ಷಿಕ ವರದಿ ಹೇಳಿದೆ.

ಎರಡಂಕಿಯ ಬೆಳವಣಿಗೆ ದರದೊಂದಿಗೆ ಭಾರತದ ಮಾರುಕಟ್ಟೆಯು ನೆಸ್ಲೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಹೇಳಿದೆ.

ʻಮಾರುಕಟ್ಟೆ ಪ್ರವೇಶ, ಪ್ರೀಮಿಯಂ ಉತ್ಪನ್ನವೆಂದು ಬ್ರ್ಯಾಂಡ್‌ ಮಾಡಿರುವುದು ಮತ್ತು ನಾವೀನ್ಯತೆ, ಶಿಸ್ತುಬದ್ಧ ಸಂಪನ್ಮೂಲ ಹಂಚಿಕೆ ಯಿಂದ ವಹಿವಾಟು ಅಧಿಕಗೊಂಡಿದೆ. ಭಾರತವು ನೆಸ್ಲೆಯ ಅತಿ ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಮಾರುಕಟ್ಟೆಗಳಲ್ಲಿ ಒಂದು,ʼ ಎಂದು 2023-24ರ ನೆಸ್ಲೆ ಇಂಡಿಯಾದ ವಾರ್ಷಿಕ ವರದಿ ಹೇಳಿದೆ.

ಮ್ಯಾಗಿ ಬ್ರ್ಯಾಂಡ್‌ ಅಡಿಯಲ್ಲಿ ತ್ವರಿತ ನೂಡಲ್ಸ್, ತಿನಿಸುಗಳು ಮತ್ತು ಅಡುಗೆ ಸಾಧನಗಳನ್ನು ಮಾರಾಟ ಮಾಡುತ್ತಿರುವ ನೆಸ್ಲೆ, 2024ರ ಆರ್ಥಿಕ ವರ್ಷದಲ್ಲಿ ಮ್ಯಾಗಿಯ ಆರು ಶತಕೋಟಿ ಪೊಟ್ಟಣಗಳನ್ನು ಮಾರಾಟ ಮಾಡಿದೆ. ಭಾರತ ಮ್ಯಾಗಿಯ ಅತಿ ದೊಡ್ಡ ಮಾರುಕಟ್ಟೆಯಾಗಿದೆ,ʼ ಎಂದು ವರದಿ ಹೇಳಿದೆ.

ನೆಸ್ಲೆ ಕಂಪನಿಯು ಮ್ಯಾಗಿ ಬ್ರ್ಯಾಂಡಿನ ಶ್ರೇಣಿಯನ್ನು ವಿಸ್ತರಿಸಿದ್ದು, ಕೈಗೆಟಕುವ 10 ರೂ. ದರದಲ್ಲಿ ಓಟ್ಸ್ ನೂಡಲ್, ಕೊರಿಯನ್ ನೂಡಲ್ಸ್ ಮತ್ತು ವಿವಿಧ ಮಸಾಲಾ ನೂಡಲ್‌ಗಳನ್ನು ಬಿಡುಗಡೆ ಮಾಡಿದೆ.

ʻಸಿದ್ಧಪಡಿಸಿದ ತಿನಿಸು ಮತ್ತು ಅಡುಗೆ ಸಾಧನಗಳ ವ್ಯಾಪಾರವು ತೀವ್ರ ಬೆಳವಣಿಗೆಯನ್ನು ದಾಖಲಿಸಿದೆ. ಮ್ಯಾಗಿ ನೂಡಲ್ಸ್ ಮತ್ತು ಮ್ಯಾಗಿ ಮಸಾಲಾ ಎ ಮ್ಯಾಜಿಕ್‌ ನ ಮಾರಾಟ ಹೆಚ್ಚಳದೊಂದಿಗೆ, ಗ್ರಾಹಕರ ತೊಡಗಿಸಿಕೊಳ್ಳುವಿಕೆ, ವಿವಿಧ ಮಾಧ್ಯಮಗಳಲ್ಲಿ ಪ್ರಚಾರ ಹಾಗೂ ಆಕರ್ಷಕ ಗ್ರಾಹಕ ಯೋಜನೆಗಳಿಂದ ಇದು ಸಾಧ್ಯವಾಯಿತು,ʼ ಎಂದು ವರದಿ ಹೇಳಿದೆ.

ಕಿಟ್‌ ಕ್ಯಾಟ್‌ ಎರಡನೇ ಸ್ಥಾನ: ನೆಸ್ಲೆ ಇಂಡಿಯಾ 4,200 ದಶ ಲಕ್ಷ ಕಿಟ್‌ಕ್ಯಾಟ್ ಅನ್ನು ಮಾರಾಟ ಮಾಡಿದೆ ಎಂದು ವರದಿ ಹೇಳಿದೆ. ಹೊಸ ಉತ್ಪನ್ನಗಳ ಬಿಡುಗಡೆ, ವಿತರಣೆ ಜಾಲದ ವಿಸ್ತರಣೆ ಮತ್ತು ಬ್ರ್ಯಾಂಡ್ ಪರಿಚಯಿಸುವಿಕೆಯಲ್ಲಿ ನಾವೀನ್ಯತೆಯಿಂದ ಬೆಳವಣಿಗೆಯನ್ನು ಉತ್ತೇಜಿಸಲಾಯಿತು. ʻ ಕಿಟ್‌ಕ್ಯಾಟ್ ಉತ್ತಮ ಬೆಳವಣಿಗೆಯೊಂದಿಗೆ ದೇಶವನ್ನು ಜಾಗತಿಕವಾಗಿ ಎರಡನೇ ಅತಿದೊಡ್ಡ ಮಾರುಕಟ್ಟೆಯನ್ನಾಗಿ ಮಾಡುವ ಮೂಲಕ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದೆ,ʼ ಎಂದು ವರದಿ ಹೇಳಿದೆ.

ಮ್ಯಾಗಿಯಲ್ಲಿ ಅನುಮತಿಸಿದ್ದಕ್ಕಿಂತ ಅಧಿಕ ಸೀಸವನ್ನು ಹೊಂದಿರುವ ಆರೋಪದ ಮೇಲೆ ಐದು ತಿಂಗಳು ನಿಷೇಧ ಹೇರಲಾಗಿತ್ತು. ಆನಂತರ ಬ್ರ್ಯಾಂಡ್ ಚೇತರಿಸಿಕೊಂಡಿದೆ. ನವೆಂಬರ್ 2015 ರಲ್ಲಿ ಮರುಪ್ರಾರಂಭಿಸಿದ ನಂತರ ಮ್ಯಾಗಿ, ಮಾರುಕಟ್ಟೆಗೆ ಮರಳಿತು ಮತ್ತು ನಂತರ ನೆಸ್ಲೆ ಇಂಡಿಯಾ ಆಹಾರ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಬ್ರ್ಯಾಂಡ್ ನ್ನು ವಿಸ್ತರಿಸಿತು. ನಿಷೇಧಕ್ಕೆ ಮೊದಲು, ಮ್ಯಾಗಿ ತ್ವರಿತ ನೂಡಲ್ಸ್ ವಿಭಾಗದಲ್ಲಿ ಶೇ. 70 ಮಾರುಕಟ್ಟೆ ಪಾಲು ಹೊಂದಿತ್ತು. ಆನಂತರ ಹೊಸ ಬ್ರ್ಯಾಂಡ್‌ ಗಳ ಆಗಮನದಿಂದ ಸ್ಪರ್ಧೆ ತೀವ್ರಗೊಂಡಿರುವುದರಿಂದ, ಇನ್ನೂ ಆ ಮಟ್ಟ ತಲುಪಿಲ್ಲ.

ನೆಸ್ಲೆ ಒಡಿಶಾದಲ್ಲಿ ತನ್ನ ಹತ್ತನೇ ಕಾರ್ಖಾನೆಯನ್ನು ಸ್ಥಾಪಿಸುತ್ತಿದ್ದು, ಒಂದು ಮಾರುಕಟ್ಟೆಯಾಗಿ ಭಾರತದ ಮಹತ್ವವನ್ನು ಪುನರುಚ್ಚರಿಸಿದೆ.

ʻಹೊಸ ಉತ್ಪಾದನೆ ಘಟಕಗಳನ್ನುಸ್ಥಾಪಿಸಲು, ಅಸ್ತಿತ್ವದಲ್ಲಿರುವ ಘಟಕಗಳ ಸಾಮರ್ಥ್ಯವನ್ನು ವಿಸ್ತರಿಸಲು ಕಂಪನಿಯು 2020 ಮತ್ತು 2025 ರ ನಡುವೆ ಸುಮಾರು 7,500 ಕೋಟಿ ರೂ. ಹೂಡಿಕೆ ಮಾಡಲಿದೆ. ನಿರಂತರ ಬೆಳವಣಿಗೆ ಮತ್ತು ನಾವೀನ್ಯತೆ ಮೇಲೆ ಗಮನ ಹರಿಸುತ್ತದೆ,ʼ ಎಂದು ನೆಸ್ಲೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಷೇರುದಾರರನ್ನು ಉದ್ದೇಶಿಸಿ ವರದಿಯಲ್ಲಿ ಹೇಳಿದ್ದಾರೆ.

ಕಂಪನಿ ನಾವೀನ್ಯತೆಗೆ ಗಮನ ನೀಡುತ್ತಿದ್ದು, ಕಳೆದ ಎಂಟು ವರ್ಷಗಳಲ್ಲಿ 140 ಕ್ಕೂ ಹೆಚ್ಚು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. 2023 ರಲ್ಲಿ ಮಾರಾಟದ ಗಮನಾರ್ಹ ಭಾಗವು ನವೀನ ಉತ್ಪನ್ನಗಳಿಂದ ಬಂದಿದೆ.

ನಾರಾಯಣನ್ ಅವರ ಪ್ರಕಾರ, ʻ112 ವರ್ಷಗಳಿಂದ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಸ್ಲೆ ಇಂಡಿಯಾಗೆ ಸಸ್ಯ ಆಧಾರಿತ ಉತ್ಪನ್ನಗಳು ಅಧಿಕ ಅವಕಾಶ ಒದಗಿಸುತ್ತವೆ. ಈ ವಿಭಾಗ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ ಮತ್ತು ಗ್ರಾಮೀಣ-ನಗರ(RUrban) ಉಪಕ್ರಮ ಎರಡು ಲಕ್ಷ ಹಳ್ಳಿಗಳನ್ನು ಮೀರಿದೆʼ.

ನೆಸ್ಲೆ ಇಂಡಿಯಾ ಮೂಲ ಕಂಪನಿಗೆ ನಿವ್ವಳ ಮಾರಾಟದಲ್ಲಿ ಶೇ. 4.5ರಷ್ಟು ರಾಯಧನ ಪಾವತಿಸುವುದನ್ನು ಮುಂದುವರಿಸುವುದಾಗಿ ಇತ್ತೀಚೆಗೆ ಘೋಷಿಸಿತು. ರಾಯಧನ ಹೆಚ್ಚಳ ಪ್ರಸ್ತಾಪವನ್ನು ಷೇರುದಾರರು ತಿರಸ್ಕರಿಸಿದರು. ಕಂಪನಿಯ ಆಡಳಿತ ಮಂಡಳಿಯು ಸೊಸೈಟಿ ದೆಸ್‌ ಪ್ರೊಡ್ಯೂಟ್ಸ್‌ ನೆಸ್ಲೆ ಎಸ್‌ಎ ಗೆ ಶೇ. 4.5 ರಷ್ಟು ರಾಯಧನ ಪಾವತಿಯನ್ನು ಅನುಮೋದಿಸಿದೆ. ಏಪ್ರಿಲ್‌ನಲ್ಲಿ ನೆಸ್ಲೆ ಇಂಡಿಯಾದ ಮಂಡಳಿ ತನ್ನ ಮಾತೃಸಂಸ್ಥೆಗೆ ಶೇ.5.25 ರಷ್ಟು ರಾಯಧನವನ್ನು ಅನುಮೋದಿಸಿತ್ತು.

ನೆಸ್ಲೆ ಇಂಡಿಯಾ ತನ್ನ ವಾರ್ಷಿಕ ವರದಿಯಲ್ಲಿ ʻಕಂಪನಿಯು ಪರವಾನಗಿದಾರರಿಗೆ ಪಾವತಿಸುವ ಸಾಮಾನ್ಯ ಪರವಾನಗಿ ಶುಲ್ಕ (ರಾಯಧನ) ಭಾರತದಲ್ಲಿನ ಇತರ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಹೋಲಿಸಿದರೆ ಕಡಿಮೆ ಇದೆ,ʼ ಎಂದು ಹೇಳಿದೆ.

ನೆಸ್ಲೆ ಇಂಡಿಯಾ ಮಾರ್ಚ್ 31, 2024 ರವರೆಗಿನ ಹದಿನೈದು ತಿಂಗಳಲ್ಲಿ 24,275.50 ಕೋಟಿ ರೂ. ವಹಿವಾಟು ನಡೆಸಿದೆ.

Next Story