'ಅನ್ಯಾಯ'ದ ವಿರುದ್ಧದ ಹೋರಾಟದಲ್ಲಿ ನಿಮ್ಮೊಂದಿಗಿದ್ದೇವೆ: ರಾಹುಲ್
ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಇಂಡಿಯ ಒಕ್ಕೂಟವು ಕೇಜ್ರಿವಾಲ್ ಅವರೊಟ್ಟಿಗೆ ಇದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ಕೇಜ್ರಿವಾಲ್ ಶುಕ್ರವಾರ 56 ನೇ ವರ್ಷಕ್ಕೆ ಕಾಲಿಟ್ಟರು. ಅವರಿಗೆ ಶುಭಾಶಯ ಕೋರಿರುವ ರಾಹುಲ್, ʼನಿಮಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ನೀವು ಆರೋಗ್ಯ ಮತ್ತು ಸಂತೋಷದಿಂದ ಇರುತ್ತೀರಿ ಎಂದು ಭಾವಿಸುತ್ತೇನೆ" ಎಂದು ಗಾಂಧಿ ಎಕ್ಸ್ ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಎಎಪಿ, ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯ ಒಕ್ಕೂಟದ ಭಾಗವಾಗಿವೆ.
ಎಎಪಿ ರಾಷ್ಟ್ರೀಯ ಸಂಚಾಲಕರಾಗಿರುವ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಆದರೆ, ಸಿಬಿಐ ಅವರನ್ನು ಬಂಧಿಸಿದ ನಂತರ ಅವರು ಜೈಲಿನಲ್ಲಿದ್ದಾರೆ.
Next Story