ʼಐಎನ್‌ಎಸ್ ಅರಿಘಾತ್ʼ ಕಾರ್ಯಾರಂಭ
ದೇಶದ ಎರಡನೇ ಪರಮಾಣು ಚಾಲಿತ ಜಲಾಂತರ್ಗಾಮಿ ಕ್ಷಿಪಣಿ ನೌಕೆ ʻಅರಿಘಾತ್ʼ ಕಾರ್ಯಾರಂಭವು ದೇಶದ ನೌಕಾ ಶಕ್ತಿ ಮತ್ತು ಪರಮಾಣು ನಿರೋಧಕ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ದೇಶದ ಎರಡನೇ ಪರಮಾಣು ಚಾಲಿತ ಜಲಾಂತರ್ಗಾಮಿ ಕ್ಷಿಪಣಿ ನೌಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಗುರುವಾರ ನೌಕಾಪಡೆಗೆ ನಿಯೋಜಿಸಲಾಯಿತು.
ʻಐಎನ್‌ಎಸ್ ಅರಿಘಾತ್ʼ ದೇಶದ ಪರಮಾಣು ಸಾಮರ್ಥ್ಯವನ್ನು ಬಲಪಡಿಸುತ್ತದೆ ಮತ್ತು ಪರಮಾಣು ತಡೆ ಕಾರ್ಯಕ್ರಮವನ್ನು ವರ್ಧಿಸುತ್ತದೆ,ʼ ಎಂದು ಸಚಿವರು ಹೇಳಿದರು.
ಈ ಜಲಾಂತರ್ಗಾಮಿ ನೌಕೆಯಲ್ಲಿನ ತಾಂತ್ರಿಕತೆಯು ʻಹಿಂದಿನ ಐಎನ್‌ಎಸ್ ಅರಿಹಂತ್‌ಗಿಂತ ಹೆಚ್ಚು ಮುಂದುವರಿದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಅರಿಘಾತ್ ಈ ಪ್ರದೇಶದಲ್ಲಿ ಕಾರ್ಯತಂತ್ರದ ಸಮತೋಲನ ಮತ್ತು ಶಾಂತಿಯನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ; ದೇಶದ ಭದ್ರತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ರಾಷ್ಟ್ರದ ಸಾಧನೆ. ರಕ್ಷಣೆಯಲ್ಲಿ 'ಆತ್ಮನಿರ್ಭರತೆ' ಸಾಧಿಸುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಚಲ ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಸಿಂಗ್ ಹೇಳಿದರು.
ಪ್ರಮುಖ ಹೆಜ್ಜೆ: ಅರಿಘಾತ್ ಕಾರ್ಯಾರಂಭವು ದೇಶದ ನೌಕಾ ಶಕ್ತಿ ಮತ್ತು ಪರಮಾಣು ನಿರೋಧಕ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿ ನಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಎಸ್‌ಎಸ್‌ಬಿಎನ್ (ಹಡಗು, ಸಬ್ ಮರ್ಸಿಬಲ್, ಬ್ಯಾಲಿಸ್ಟಿಕ್, ನ್ಯೂಕ್ಲಿಯರ್) ಕಾರ್ಯಕ್ರಮವು ನಿಕಟವಾಗಿ ರಕ್ಷಿಸಲ್ಪಟ್ಟ ಯೋಜನೆಯಾಗಿದೆ. ದೇಶದ ಮೊದಲ ಸ್ವದೇಶಿ ನಿರ್ಮಿತ ಪರಮಾಣು ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಅರಿಹಂತ್ ಯೋಜನೆ ಜುಲೈ 2009 ರಲ್ಲಿ ಪ್ರಾರಂಭವಾಗಿ, 2016 ರಲ್ಲಿ ಕಾರ್ಯಾರಂಭ ಮಾಡಿತು.
ಐಎನ್‌ಎಸ್ ಅರಿಘಾತ್ ಸುಧಾರಿತ ವಿನ್ಯಾಸ ಮತ್ತು ಉತ್ಪಾದನಾ ತಂತ್ರಜ್ಞಾನ, ವಿಸ್ತೃತ ಸಂಶೋಧನೆ ಮತ್ತು ಅಭಿವೃದ್ಧಿ, ವಿಶೇಷ ವಸ್ತುಗಳ ಬಳಕೆ, ಸಂಕೀರ್ಣ ಎಂಜಿನಿಯರಿಂಗ್ ಮತ್ತು ಹೆಚ್ಚು ನುರಿತ ಕೆಲಸಗಾರಿಕೆಯನ್ನು ಒಳಗೊಂಡಿದೆ. ಐಎನ್‌ಎಸ್ ಅರಿಹಂತ್ ಅಕ್ಟೋಬರ್ 2022 ರಲ್ಲಿ ಜಲಾಂತರ್ಗಾಮಿ ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್‌ಎಲ್‌ಬಿಎಂ) ಯನ್ನು ಬಂಗಾಳ ಕೊಲ್ಲಿಯಲ್ಲಿ ಅತ್ಯಂತ ನಿಖರವಾಗಿ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ʻಈ ಸ್ವಾವಲಂಬನೆ ಸ್ವಯಂ ಶಕ್ತಿಯ ಅಡಿಪಾಯ. ಈ ಯೋಜನೆ ಮೂಲಕ ದೇಶದ ಕೈಗಾರಿಕಾ ವಲಯ, ವಿಶೇಷವಾಗಿ ಎಂಎಸ್‌ಎಂಇಗಳು ಹೆಚ್ಚು ಪ್ರೋತ್ಸಾಹ ಪಡೆದಿದ್ದು, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ,ʼ ಎಂದು ಸಿಂಗ್ ಹೇಳಿದರು. ದೇಶವನ್ನು ಪರಮಾಣು ಅಸ್ತ್ರ ರಾಷ್ಟ್ರಕ್ಕೆ ಸರಿಸಮನಾಗಿ ನಿಲ್ಲಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಇಚ್ಛಾಶಕ್ತಿಯನ್ನು ಅವರು ಸ್ಮರಿಸಿಕೊಂಡರು.