ಬಿಹಾರ: ಇಂಡಿಯ ಒಕ್ಕೂಟದ ಜಾತಿ ಕಾರ್ಯತಂತ್ರದಿಂದ ಹೊಸ ಭರವಸೆ
x
ಖಗರಿಯಾ ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿ ಸಂಜಯ್ ಕುಮಾರ್ (ಮಧ್ಯ) ಪ್ರಚಾರ ನಡೆಸುತ್ತಿರುವುದು

ಬಿಹಾರ: ಇಂಡಿಯ ಒಕ್ಕೂಟದ ಜಾತಿ ಕಾರ್ಯತಂತ್ರದಿಂದ ಹೊಸ ಭರವಸೆ

ಬಿಜೆಪಿಯೊಂದಿಗೆ ನೇರ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳಲು ಎಚ್ಚರಿಕೆಯಿಂದ ಸೀಟು ಹಂಚಿಕೆ, ನಿತೀಶ್ ಅವರ ಲವ್-ಕುಶ್ ಜಾತಿ ಸೂತ್ರವನ್ನು ದುರ್ಬಲಗೊಳಿಸಲು ಕುಶ್ವಾಹ ಸಮುದಾಯವನ್ನು ಸೆಳೆಯುವ ಪ್ರಯತ್ನಗಳು ಕಮ್ಯುನಿಸ್ಟ್ ಪಕ್ಷಗಳ ಅವಕಾಶವನ್ನು ಹೆಚ್ಚಿಸಿದೆ.


ಮೂರು ದಶಕಕ್ಕೂ ಅಧಿಕ ಸಮಯದ ನಂತರ ಎಡ ಪಕ್ಷಗಳು ಬಿಹಾರದಿಂದ ಲೋಕಸಭೆ ಪ್ರವೇಶಿಸುವ ಭರವಸೆಯಲ್ಲಿವೆ. ಇಂಡಿಯ ಒಕ್ಕೂಟದಡಿ ಸಿಪಿಐ, ಸಿಪಿಎಂ ಮತ್ತು ಸಿಪಿಐ-ಎಂಎಲ್ ಐದು ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.

1991ರಲ್ಲಿ ಸಿಪಿಐನ ವಿಜಯ್ ಕುಮಾರ್ ಯಾದವ್ ಅವರು ನಳಂದ ಲೋಕಸಭೆ ಕ್ಷೇತ್ರದಿಂದ ಹಾಗೂ 1989ರಲ್ಲಿ ಸಿಪಿಐ-ಎಂಎಲ್ ಅಭ್ಯರ್ಥಿ ರಾಮೇಶ್ವರ ಪ್ರಸಾದ್ ಅರ್ರಾ ಕ್ಷೇತ್ರದಿಂದ ಗೆದ್ದಿದ್ದರು.

ನಂತರದ ಚುನಾವಣೆಗಳಲ್ಲಿ ಬಚ್ವಾರಾ ವಿಧಾನಸಭೆ ಕ್ಷೇತ್ರದ ಮೂರು ಅವಧಿಯ ಶಾಸಕ, ಸಿಪಿಐ ಅಭ್ಯರ್ಥಿ ಅವಧೇಶ್ ಕುಮಾರ್ ರೈ ಅವರು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ಬೇಗುಸರಾಯ್ ನಲ್ಲಿ ಮತ್ತು ಸಿಪಿಎಂ ಅಭ್ಯರ್ಥಿ ಸಂಜಯ್ ಕುಮಾರ್ ಅವರು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ಯ ರಾಜೇಶ್ ವರ್ಮಾ ಅವರನ್ನು ಖಗಾರಿಯಾದಲ್ಲಿ ಎದುರಿಸಿದರು. ಈ ಕ್ಷೇತ್ರಗಳಲ್ಲಿ ಮೂರು ಮತ್ತು ನಾಲ್ಕನೇ ಹಂತದಲ್ಲಿ ಮತದಾನ ನಡೆದಿದೆ.

ಜಾತಿ ಸಂಯೋಜನೆ: ಜೂನ್ 1 ರಂದು ಮತದಾನ ನಡೆಯಲಿರುವ ಅರ್ರಾ, ಕರಕಟ್ ಮತ್ತು ನಳಂದ ಕ್ಷೇತ್ರಗಳಿಂದ ಸಿಪಿಐ ಎಂಎಲ್ ಸ್ಪರ್ಧಿಸುತ್ತಿದೆ. ಅರ್ರಾದಲ್ಲಿ ಸುದಾಮ ಪ್ರಸಾದ್ ಅವರು ಮಾಜಿ ಗೃಹ ಕಾರ್ಯದರ್ಶಿ ಮತ್ತು ಸಚಿವ ಆರ್.ಕೆ. ಸಿಂಗ್‌ ಅವರಿಗೆ ಸವಾಲು ಹಾಕುತ್ತಿದ್ದಾರೆ. ಕಾರಕಟ್‌ನಲ್ಲಿ ಸಿಪಿಐ ಎಂಎಲ್ ಅಭ್ಯರ್ಥಿ ರಾಜಾರಾಂ ಸಿಂಗ್ ಕುಶ್ವಾಹ ಅವರು ಮಾಜಿ ಕೇಂದ್ರ ಸಚಿವ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ನಾಯಕ ಉಪೇಂದ್ರ ಕುಶ್ವಾಹ ವಿರುದ್ಧ ಹಾಗೂ ನಿತೀಶ್‌ ಕುಮಾರ್‌ ಅವರ ತವರು ನಳಂದದಲ್ಲಿ ಸಿಪಿಐ-ಎಂಎಲ್ ಸಂದೀಪ್ ಸೌರಭ್ ಅವರು ದಳ (ಯು) ಅಭ್ಯರ್ಥಿ ಮತ್ತು ಮೂರು ಅವಧಿಯ ಸಂಸದ ಕೌಶಲೇಂದ್ರ ಕುಮಾರ್ ವಿರುದ್ಧ ಸೆಣೆಸುತ್ತಿದ್ದಾರೆ.

ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ)ಗಳ ಮೈತ್ರಿ ನಂತರ ಈ ಬಾರಿ ರೂಪುಗೊಂಡ ನಿರ್ಣಾಯಕ ಜಾತಿ ಸಂಯೋಜನೆ ಮೇಲೆ ಎಡ ಪಕ್ಷಗಳು ಭರವಸೆ ಇರಿಸಿಕೊಂಡಿವೆ.

ಕಳೆದ ವರ್ಷ ನಿತೀಶ್ ಕುಮಾರ್-ತೇಜಸ್ವಿ ಯಾದವ್ ಸರ್ಕಾರ ಬಿಡುಗಡೆ ಮಾಡಿದ ಜಾತಿ ಅಂಕಿಅಂಶಗಳ ಪ್ರಕಾರ, ಇಂಡಿಯ ಒಕ್ಕೂಟವು ಶೇ. 14 ರಷ್ಟಿರುವ ಯಾದವರು, ಮುಸ್ಲಿಮರು(ಶೇ. 18), ಕುಶ್ವಾಹಗಳು (ಶೇ. 6) ಮತ್ತು ಮಲ್ಲಾಹ್ (ಮೀನುಗಾರರ ಸಮುದಾಯ, ಶೇ. 6)ಗಳನ್ನು ನೆಚ್ಚಿಕೊಂಡಿದೆ.

ಲಾಲು ಮಾಸ್ಟರ್ ಸ್ಟ್ರೋಕ್: ಚಾಣಾಕ್ಷತೆ ಮತ್ತು ಸಾಮಾಜಿಕ ಇಂಜಿನಿಯರಿಂಗ್‌ಗೆ ಹೆಸರುವಾಸಿಯಾಗಿರುವ ಲಾಲು ಪ್ರಸಾದ್ ಯಾದವ್ ಅವರು ಆರ್‌ಜೆಡಿಯಿಂದ ಮೂವರು ಕುಶ್ವಾಹ (ಕೋರಿಗಳು) ‌ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್, ಸಿಪಿಎಂ, ಸಿಪಿಐ ಎಂಎಲ್ ಮತ್ತು ವಿಐಪಿ ಕೂಡ ತಲಾ ಒಬ್ಬರು ಕುಶ್ವಾಹ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ.

ವ್ಯತಿರಿಕ್ತವಾಗಿ ಬಿಜೆಪಿ ಕುಶ್ವಾಹ ಸಮುದಾಯದ ಯಾವುದೇ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ.ಜೆಡಿಯು ಮೂವರನ್ನು ಹಾಗೂ ಆರ್‌ಎಲ್‌ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರು ಕಾರಕಟ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಲಾಲು ಪ್ರಸಾದ್ ಅವರ ಚಾಣಾಕ್ಷ ನಡೆಯಿಂದ ಕಳೆದ 25 ವರ್ಷಗಳಿಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪೋಷಿಸಿದ ಲವ-ಕುಶ (ಕುರ್ಮಿ-ಕುಶ್ವಾಹ) ಸಂಯೋಜನೆ ದುರ್ಬಲಗೊಂಡಿದೆ. ಕುಶ್ವಾಹ ಮತಬ್ಯಾಂಕ್ ಇಂಡಿಯ ಒಕ್ಕೂಟದತ್ತ ಸರಿಯುತ್ತಿದೆ.

ಮೀನುಗಾರ ಸಮುದಾಯದಲ್ಲಿ ಗಣನೀಯ ಬೆಂಬಲ ಹೊಂದಿರುವ ವಿಐಪಿ ಮುಖ್ಯಸ್ಥ ಮುಖೇಶ್ ಸಹಾನಿಯವರನ್ನೂ ಲಾಲು ಸೆಳೆದುಕೊಂಡಿದ್ದಾರೆ. ಈ ಸಮುದಾಯ ಶೇ. 6 ರಷ್ಟಿದೆ.

ಎಡ ಪಕ್ಷಗಳ ಮತ: ಆರ್‌ಜೆಡಿಯ ಮುಸ್ಲಿಂ-ಯಾದವ ಮತಬ್ಯಾಂಕ್ ಜೊತೆಗೆ ಸಿಪಿಐಎಂಎಲ್, ಬಿಹಾರದ ಮಧ್ಯ ಮತ್ತು ದಕ್ಷಿಣ ಭಾಗ ಗಳಲ್ಲಿ ತನ್ನದೇ ಮತಗಳನ್ನು ಹೊಂದಿದೆ. ಇದು 1970-1990 ರ ದಶಕದ ನಡುವೆ ಸಶಸ್ತ್ರ ನಕ್ಸಲ್ ಚಳವಳಿಯ ಕೇಂದ್ರವಾಗಿತ್ತು. ಮೀನುಗಾರರ ಸಮುದಾಯ ಮತ್ತು ಕುಶ್ವಾಹಗಳ ಮತಗಳಿಂದ ಸೋನ್ ಮತ್ತು ಗಂಗಾ ನದಿಗಳ ನಡುವೆ ಇರುವ ಕರಕಟ್ ಮತ್ತು ಅರ್ರಾ ಕ್ಷೇತ್ರಗಳಲ್ಲಿ ಸಿಪಿಐ-ಎಂಎಲ್ ಅಭ್ಯರ್ಥಿಗಳ ಅವಕಾಶವನ್ನು ಉಜ್ವಲಗೊಂಡಿದೆ.

1995 ರ ಚುನಾವಣೆಯಲ್ಲಿ ಅವಿಭಜಿತ ಬಿಹಾರದಲ್ಲಿ (ಜಾರ್ಖಂಡ್ ರಚನೆಗೆ ಮುನ್ನ) 324 ಶಾಸಕರ ವಿಧಾನಸಭೆಯಲ್ಲಿ ಸಿಪಿಐ 26, ಸಿಪಿಐಎಂಎಲ್ ಆರು, ಸಿಪಿಎಂ ಮತ್ತು ಮಾರ್ಕ್ಸ್‌ವಾದಿ ಸಮನ್ವಯ ಸಮಿತಿ (ಎಂಸಿಸಿ) ತಲಾ ಎರಡು ಸ್ಥಾನ ಗೆದ್ದಿದ್ದವು.

ನಿರಂತರ ಕುಸಿತ: 2000 ರಲ್ಲಿ ಸಿಪಿಐ ಎಂಎಲ್ ಆರು, ಸಿಪಿಐ ಐದು ಮತ್ತು ಸಿಪಿಎಂ ಎರಡು ಸ್ಥಾನ ಗಳಿಸುವುದರೊಂದಿಗೆ ಕುಸಿತ ಆರಂಭಗೊಂಡಿತು. ಜಾರ್ಖಂಡ್ ಪ್ರತ್ಯೇಕಗೊಂಡ ಬಳಿಕ ಫೆಬ್ರವರಿ 2005 ರ ವಿಧಾನಸಭೆ ಚುನಾವಣೆಯಲ್ಲಿ 243 ಸದಸ್ಯರಲ್ಲಿ ಸಿಪಿಐ ಎಂಎಲ್‌ ಏಳು, ಸಿಪಿಐ ಮೂರು ಮತ್ತು ಸಿಪಿಎಂ ಒಂದು ಸ್ಥಾನ ಗಳಿಸಿತು. ಅಕ್ಟೋಬರ್ 2005 ರಲ್ಲಿ ಸಿಪಿಐ ಎಂಎಲ್‌ ಐದು, ಸಿಪಿಐ ಮೂರು ಮತ್ತು ಸಿಪಿಎಂ ಒಂದು ಸ್ಥಾನ ಗಳಿಸಿತು. 2010ರಲ್ಲಿ ಸಿಪಿಐ ಕೇವಲ ಒಂದು ಸ್ಥಾನ ಮತ್ತು 2015 ರಲ್ಲಿ ಸಿಪಿಐ-ಎಂಎಲ್ ಮೂರು ಸ್ಥಾನ ಗೆದ್ದಿತು.

ಮೈತ್ರಿಯಿಂದ ಬಲ ವರ್ಧನೆ: 2019 ರ ಲೋಕಸಭೆ ಚುನಾವಣೆ ನಂತರ, ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿಯಿಂದ ಎಡ ಪಕ್ಷಗಳ ಕಾರ್ಯಕ್ಷಮತೆ ಸುಧಾರಿಸಿದೆ. 2020 ರ ವಿಧಾನಸಭೆ ಚುನಾವಣೆಯಲ್ಲಿ 29 ಸ್ಥಾನಗಳಲ್ಲಿ ಎಡ ಒಕ್ಕೂಟ 16 ಸ್ಥಾನ ಗೆದ್ದಿತು(ಸಿಪಿಐ ಎಂಎಲ್ ಸ್ಪರ್ಧಿಸಿದ 19 ಸ್ಥಾನಗಳಲ್ಲಿ 12, ಸಿಪಿಐ ಮತ್ತು ಸಿಪಿಎಂ ತಲಾ ಎರಡು ಸ್ಥಾನ). ಅರ್ರಾ ಲೋಕಸಭೆಯಡಿ ಬರುವ ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ಐದು ಆರ್‌ಜೆಡಿ ಮತ್ತು ಸಿಪಿಐಎಂಎಲ್ ವಶದಲ್ಲಿವೆ. ಕಾರಕಟ್ ಮತ್ತು ಔರಂಗಾಬಾದ್ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಈ ಪಕ್ಷಗಳು ಗೆಲುವು ಸಾಧಿಸಿವೆ. ಇವೆರಡರಲ್ಲೂ 2009ರ ಬಳಿಕ ಎನ್‌ಡಿಎ ಗೆಲ್ಲುತ್ತಿದೆ.

2019 ರಲ್ಲಿ ಬಿಜೆಪಿ ಅಭ್ಯರ್ಥಿ ಆರ್‌.ಕೆ. ಸಿಂಗ್ 5.66 ಲಕ್ಷ ಮತ ಗಳಿಸಿ, ಪ್ರತಿಸ್ಪರ್ಧಿ ಸಿಪಿಐ-ಎಂಎಲ್‌ ನ ರಾಜು ಯಾದವ್ ಅವರನ್ನು 1.47 ಲಕ್ಷ ಮತಗಳ ಅಂತರದಿಂದ ಸೋಲಿಸಿದರು.

ಮತ ವಿಭಜನೆ ಇಲ್ಲ: ʻಸೀಟು ಹಂಚಿಕೆ ಹಿಂದಿನ ಉಪಾಯವೆಂದರೆ ಎನ್‌ಡಿಎ ಅಭ್ಯರ್ಥಿ ವಿರುದ್ಧ ಒಬ್ಬ ಇಂಡಿಯ ಒಕ್ಕೂಟದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು. ಇದರಿಂದ ಮತಗಳ ವಿಭಜನೆ ತಪ್ಪುತ್ತದೆ,ʼ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ರಾಮ್ ನರೇಶ್ ಪಾಂಡೆ ಹೇಳಿದ್ದಾರೆ. ಆದರೆ, ಆರ್‌ಜೆಡಿ ಮತ್ತು ಎಡ ಪಕ್ಷಗಳಿಗಿಂತ ಕಾಂಗ್ರೆಸ್‌ನ ಸಂಘಟನಾ ಶಕ್ತಿ ದುರ್ಬಲವಾಗಿದೆ.

1970 ಮತ್ತು 1980ರ ದಶಕದಲ್ಲಿನ ಹತ್ಯಾಕಾಂಡಗಳು ಮತ್ತು ಪ್ರತೀಕಾರ ಹತ್ಯೆಗಳು ಈಗ ಇಲ. ಆದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ವಿಭಜನೆ ಇನ್ನೂ ಉಳಿದುಕೊಂಡಿದೆ. ಸಿಪಿಐ ಎಂಎಲ್‌ ಕುರಿತು ಮೇಲ್ಜಾತಿಗಳು ಮತ್ತು ಕೆಲವು ಮಧ್ಯವರ್ತಿ ಜಾತಿಗಳಲ್ಲಿ ಭಯ ಉಳಿದುಕೊಂಡಿದೆ.

ʻಆರ್‌ಜೆಡಿ, ಸಿಪಿಐ ಎಂಎಲ್, ವಿಐಪಿ ಮತ್ತು ಕಾಂಗ್ರೆಸ್‌ನ ಒಟ್ಟು ಮತಗಳು ಈ ಬಾರಿ ಬಿಜೆಪಿಯ ಮತಗಳನ್ನು ಮೀರಿಸುತ್ತದೆ. ನೇರ ಸ್ಪರ್ಧೆ ಇದೆ. ಆದರೆ, ಕಳೆದ ಚುನಾವಣೆಯಂತೆ ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು,ʼ ಎಂದು ಸಿಪಿಐ-ಎಂಎಲ್ ಕಾರ್ಯಕರ್ತ ಸಂತೋಷ್ ಸಹರ್ ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರೀಯತೆ ಕಾರ್ಡ್: ಬಿಜೆಪಿ ರಾಷ್ಟ್ರೀಯತೆ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮತ್ತು ಅರ್ರಾದಲ್ಲಿ ಅಭ್ಯರ್ಥಿ ಆರ್‌.ಕೆ. ಸಿಂಗ್ ಅವರ ಶುದ್ಧ ಇಮೇಜ್ ನ್ನು ನೆಚ್ಚಿಕೊಂಡಿದೆ. ಬಿಜೆಪಿಗೆ ಸಮಾಜದ ಸುಸ್ಥಿತಿಯಲ್ಲಿ ರುವ ವರ್ಗಗಳು ಮತ್ತು ಭೂಮಾಲೀಕರ ಸಂಘಟನೆಯಾದ ರಣಬೀರ್ ಸೇನೆಯ ಕಾರ್ಯಕರ್ತರ ಬೆಂಬಲವೂ ಇದೆ.

ಕರಕಟ್‌ನಲ್ಲಿ ಭೋಜ್‌ಪುರಿ ಚಲನಚಿತ್ರ ನಟ-ಗಾಯಕ ಪವನ್ ಸಿಂಗ್ ಅವರ ಪ್ರವೇಶದಿಂದ ಉಪೇಂದ್ರ ಕುಶ್ವಾಹಾ ಮತ್ತು ರಾಜಾರಾಮ್ ಸಿಂಗ್ ಲೆಕ್ಕಾಚಾರ ತಾಳ ತಪ್ಪಿದೆ.

ಆಮೂಲಾಗ್ರ ಬದಲಾವಣೆ: ಲಾಲು ಪ್ರಸಾದ್ ಅವರ ಮಂಡಲ ರಾಜಕಾರಣದಿಂದ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ತಗ್ಗಿದೆ. ಅದೇ ಸಮಯದಲ್ಲಿ ಈ ಪ್ರದೇಶದ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಆಮೂಲಾಗ್ರವಾಗಿ ಬದಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ಕೂಲಿ ನೀಡಲಾಗುತ್ತಿದ್ದು, ಭೂರಹಿತ ಕೂಲಿಕಾರರ ಒಂದು ವರ್ಗ ಭೂಮಿ ಖರೀದಿಸಿದೆ.

ಮಾನವ ಜೀವಗಳ ಅಪಾರ ನಷ್ಟದಿಂದ ಜನರಿಗೆ 'ಶಾಂತಿಯುತ ಸಹಬಾಳ್ವೆ'ಯ ಪಾಠ ಮನವರಿಕೆಯಾಗಿದೆ; ಸಾಮಾಜಿಕವಾಗಿ ಮತ್ತು ಕಾನೂನಾತ್ಮಕವಾಗಿ ವಿವೇಕಯುತ ನಡೆಯನ್ನು ಗ್ರಹಿಸುವಷ್ಟು ಬದಲಾವಣೆ ಆಗಿದೆ.

Read More
Next Story