ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮಮಂದಿರ ನೆಲಸಮ: ಪ್ರಧಾನಿ ಮೋದಿ
x

ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮಮಂದಿರ ನೆಲಸಮ: ಪ್ರಧಾನಿ ಮೋದಿ


ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿರುವ ರಾಮಮಂದಿರವನ್ನು ಧ್ವಂಸ ಮಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಶುಕ್ರವಾರ ಹೇಳಿದರು.

ʻಇಂಡಿಯ ಒಕ್ಕೂಟ ಅಸ್ಥಿರತೆ ಸೃಷ್ಟಿಸಲು ಚುನಾವಣೆಗೆ ಸ್ಪರ್ಧಿಸುತ್ತಿದೆ. ಚುನಾವಣೆ ಮುಂದುವರಿದಂತೆ ಕ್ರಮೇಣ ಕುಸಿಯುತ್ತಿದೆ. ತಮ್ಮ ಸರ್ಕಾರ ಹ್ಯಾಟ್ರಿಕ್ ಸಾಧಿಸಲಿದೆ. ಹೊಸ ಸರ್ಕಾರವು ಬಡವರು, ಯುವಜನರು, ಮಹಿಳೆಯರು ಮತ್ತು ರೈತರಿಗಾಗಿ ಅನೇಕ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಅದಕ್ಕಾಗಿ ಬಾರಾಬಂಕಿ ಮತ್ತು ಮೋಹನ್‌ಲಾಲ್‌ಗಂಜ್‌ನ ಜನರಿಂದ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ,ʼ ಎಂದು ಹೇಳಿದರು.

ʻಜೂನ್ 4 ದೂರವಿಲ್ಲ.ಇಡೀ ದೇಶ ಮತ್ತು ಜಗತ್ತಿಗೆ ಮೋದಿ ಸರ್ಕಾರ ಹ್ಯಾಟ್ರಿಕ್ ಬಾರಿಸಲಿದೆ ಎಂದು ಗೊತ್ತಿದೆ. ಒಂದು ಕಡೆ ರಾಷ್ಟ್ರೀಯ ಹಿತಾಸಕ್ತಿಗೆ ಮೀಸಲಾದ ಬಿಜೆಪಿ-ಎನ್‌ಡಿಎ ಮೈತ್ರಿ ಇದೆ ಮತ್ತು ಇನ್ನೊಂದೆಡೆ ದೇಶದಲ್ಲಿ ಅಸ್ಥಿರತೆ ಸೃಷ್ಟಿಸುವ ಇಂಡಿಯ ಮೈತ್ರಿಕೂಟವಿದೆ,ʼ ಎಂದು ಹೇಳಿದರು.

ʻನಿಮಗೆ ಕೆಲಸ ಮಾಡುವ ಮತ್ತು ಒಳ್ಳೆಯದನ್ನು ಮಾಡುವ ಸಂಸದರು ಬೇಕು. ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಂಸದ ಬೇಕೇ ಹೊರತು ಐದು ವರ್ಷ ಕಾಲ ಮೋದಿಯನ್ನು ನಿಂದಿಸುವವರಲ್ಲ. ಇದಕ್ಕಾಗಿ ನಿಮಗೆ ಇರುವುದು ಒಂದೇ ಆಯ್ಕೆ - ಕಮಲ. ನೀವು ಕ್ಷಿಪ್ರ ಅಭಿವೃದ್ಧಿಯನ್ನು ಬಯಸಿದಲ್ಲಿ ಅದನ್ನು ಪ್ರಬಲ ಸರ್ಕಾರ ಮಾತ್ರ ನೀಡಬಹುದುʼ ಎಂದರು.

ರಾಮಮಂದಿರ ನೆಲಸಮ: ʻರಾಮನವಮಿಯಂದು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರು ರಾಮಮಂದಿರ ನಿಷ್ಪ್ರಯೋಜಕ ಎಂದು ಹೇಳಿದ್ದರು. ರಾಮ ಮಂದಿರ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಅವರಿಗೆ ಅವರ ಕುಟುಂಬ ಮತ್ತು ಅಧಿಕಾರ ಮಾತ್ರ ಮುಖ್ಯ. ಎಸ್‌ಪಿ-ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಾಲರಾಮನನ್ನು ಟೆಂಟ್‌ಗೆ ಕಳುಹಿಸುತ್ತಾರೆ ಮತ್ತು ದೇವಸ್ಥಾನವನ್ನು ಬುಲ್ಡೋಜ್ ಮಾಡುತ್ತಾರೆ,ʼ ಎಂದರು. ಅಯೋಧ್ಯೆಯ ರಾಮ ಮಂದಿರವನ್ನು ಸರಿಯಾಗಿ ನಿರ್ಮಿಸದ ಕಾರಣ ಅದು ನಿಷ್ಪ್ರಯೋಜಕ(ಬೇಕಾರ್) ಎಂದು ಎಸ್‌ಪಿ ನಾಯಕ ರಾಮ್ ಗೋಪಾಲ್ ಯಾದವ್ ಇತ್ತೀಚೆಗೆ ‌ಹೇಳಿದ್ದರು.

ಅಖಿಲೇಶ್, ಮಮತಾ ಟೀಕೆ: ʻಎಸ್‌ಪಿ ಮತ್ತು ಕಾಂಗ್ರೆಸ್‌ಗೆ ಮತ ಬ್ಯಾಂಕ್‌ಗಿಂತ ದೊಡ್ಡದು ಯಾವುದೂ ಇಲ್ಲ. ಇದನ್ನು ಹೇಳಿದಾಗ ಅವರು ನಿದ್ರೆ ಕಳೆದುಕೊಂಡು, ನಿಂದನೆ ಪ್ರಾರಂಭಿಸುತ್ತಾರೆ. ಎಸ್‌ಪಿ-ಕಾಂಗ್ರೆಸ್ ಓಲೈಕೆಗೆ ಶರಣಾಗಿವೆ. ಮೋದಿ ಸತ್ಯ ಹೇಳುತ್ತಿರುವಾಗ, ಹಿಂದೂ-ಮುಸ್ಲಿಂ ವಿಭಜನೆ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ತ್ರಿವಳಿ ತಲಾಖ್ ಕಾನೂನಿನ ಬಗ್ಗೆ ಸಂತೋಷಗೊಂಡಿರುವ ತಾಯಂ ದಿರು ಮತ್ತು ಸಹೋದರಿಯರು ಬಿಜೆಪಿಯನ್ನು ಆಶೀರ್ವದಿಸುತ್ತಿದ್ದಾರೆ,ʼಎಂದು ಹೇಳಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿ, ʻಇಲ್ಲಿನ ಸಮಾಜವಾದಿ ಯುವರಾಜ, ಈಗ ಹೊಸ ಚಿಕ್ಕ ಮ್ಮನ ಆಶ್ರಯ ಪಡೆದಿದ್ದಾರೆ. ಹೊಸ ಚಿಕ್ಕಮ್ಮ ಬಂಗಾಳದಲ್ಲಿದ್ದಾರೆ. ಅವರೀಗ ಹೊರಗಿನಿಂದ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆʼ ಎಂದು ಮೋದಿ ಹೇಳಿದರು. ಅಖಿಲೇಶ್‌ ಈ ಹಿಂದೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ತಮ್ಮ 'ಬುವಾ' (ಚಿಕ್ಕಮ್ಮ) ಎಂದು ಸಂಬೋಧಿಸುತ್ತಿದ್ದರು.

ಇಂಡಿಯ ಒಕ್ಕೂಟದ ದ್ವಂದ್ವ: ಪಂಜಾಬ್‌ನಲ್ಲಿ ಇಂಡಿಯ ಒಕ್ಕೂಟದ ಪಾಲುದಾರರಾದ ಎಎಪಿ ಮತ್ತು ಕಾಂಗ್ರೆಸ್ ನಡುವಿನ ಸ್ಪರ್ಧೆಯನ್ನು ಪ್ರಸ್ತಾಪಿಸಿದರು. ರಾಯ್‌ ಬರೇಲಿಯ ಜನರು ದೇಶದ ಪ್ರಧಾನಿಯನ್ನು ಆಯ್ಕೆ ಮಾಡಲು ಹೊರಟಿದ್ದಾರೆ ಎಂಬ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ʻಇದನ್ನುಕೇಳಿ ಸಮಾಜವಾದಿ ಯುವರಾಜನ ಹೃದಯ ಒಡೆದುಹೋಯಿತು. ಕಣ್ಣೀರು ಬರಲಿಲ್ಲ; ಆದರೆ, ಅವರ ಹೃದಯದ ಆಸೆಗಳೆಲ್ಲವೂ ಕೊಚ್ಚಿಕೊಂಡು ಹೋದವು,ʼ ಎಂದು ಕುಟುಕಿದರು.

ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರನ್ನು ಗುರಿಯಾಗಿಸಿಕೊಂಡು, ʻಅನಾರೋಗ್ಯದ ನೆಪದಲ್ಲಿ ಜೈಲಿನಿಂದ ಹೊರಬಂದಿ ರುವ ಬಿಹಾರದ ಮೇವು ಹಗರಣದ ಚಾಂಪಿಯನ್, ಮುಸ್ಲಿಮರಿಗೆ ಸಂಪೂರ್ಣ ಮೀಸಲು ನೀಡಬೇಕು ಎಂದು ಹೇಳುತ್ತಿದ್ದಾರೆ. ಇದರಿಂದ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದವರಿಗೆ ಏನೂ ಸಿಗುವುದಿಲ್ಲ,ʼ ಎಂದರು.

ʻಸಂವಿಧಾನ ರಚನೆಯಾದಾಗ ಧರ್ಮದ ಆಧಾರದ ಮೇಲೆ ಮೀಸಲು ಇಲ್ಲ ಎಂದು ನಿರ್ಧರಿಸಲಾಗಿತ್ತು. ಕಾಂಗ್ರೆಸ್ ಕರ್ನಾಟಕದಲ್ಲಿ ಧರ್ಮದ ಆಧಾರದ ಮೇಲೆ ಮೀಸಲು ನೀಡಿದೆ. ಒಬಿಸಿಗಳಿಗೆ ನೀಡಿದ ಮೀಸಲಿನ ದೊಡ್ಡ ಭಾಗವನ್ನು ಕಸಿದುಕೊಳ್ಳಲಾಗಿದೆ,ʼ ಎಂದರು. ʻರಾಮನ ಕೆಲಸ (ರಾಮ್ ಕಾಜ್)ದಿಂದ ರಾಷ್ಟ್ರದ ಕೆಲಸ (ರಾಷ್ಟ್ರ ಕಾಜ್)ದ ಸಮಯ ಇದು. ರಾಮನ ಕೆಲಸಕ್ಕೆ 400 ಸ್ಥಾನ ಕೇಳುತ್ತಿದ್ದೇನೆʼ ಎಂದು ಹೇಳಿದರು.

ಬಾರಾಬಂಕಿಯಲ್ಲಿ ಕಾಂಗ್ರೆಸ್‌ನ ತನುಜ್ ಪುನಿಯಾ ಮತ್ತು ಬಿಜೆಪಿಯ ರಾಜರಾಣಿ ರಾವತ್ ನಡುವೆ ಪೈಪೋಟಿ ಏರ್ಪಟ್ಟಿದೆ. ತನುಜ್ ಪುನಿಯಾ ಅವರು ಬಾರಾಬಂಕಿ ಕ್ಷೇತ್ರದ ಮಾಜಿ ಸಂಸದ ಪಿ.ಎಲ್. ಪುನಿಯಾ ಅವರ ಪುತ್ರ.

Read More
Next Story