ಜಮ್ಮು-ಕಾಶ್ಮೀರ ರಾಜ್ಯದ ಮರುಸ್ಥಾಪನೆ:ರಾಹುಲ್
ಜಮ್ಮು: ಇಂಡಿಯಾ ಒಕ್ಕೂಟದ ಪಾಲುದಾರರ ನೆರವಿನೊಂದಿಗೆ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನವನ್ನು ಮರುಸ್ಥಾಪಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದರು.
ಮೊದಲ ಹಂತದಲ್ಲಿ ಇತರ 25 ಕ್ಷೇತ್ರಗಳೊಂದಿಗೆ ಚುನಾವಣೆ ನಡೆಯಲಿರುವ ರಾಂಬನ್ ಜಿಲ್ಲೆಯ ಬನಿಹಾಲ್ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಸಂಗಲ್ದನ್‌ನಲ್ಲಿ ಮಾತನಾಡಿ, ಮುಂದಿನ ತಿಂಗಳು ತಮ್ಮ ಪಕ್ಷದ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಿಂದ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ವಿಕಾರ್ ರಸೂಲ್ ವಾನಿ ಸ್ಪರ್ಧಿಸಿದ್ದು, ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಸಾಜದ್ ಶಾಹೀನ್ ಮತ್ತು ಬಿಜೆಪಿಯ ಸಲೀಂ ಭಟ್ ಅವರ ವಿರುದ್ಧ ಸ್ಪರ್ಧಿಸಿದ್ದಾರೆ. ಮಾಜಿ ಸಚಿವ ವಾನಿ ಅವರು ಈ ಸ್ಥಾನದಿಂದ ಹ್ಯಾಟ್ರಿಕ್ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.
ʻವಿಧಾನಸಭೆ ಚುನಾವಣೆಗೆ ಮೊದಲು ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲು ನಾವು ಬಯಸಿದ್ದೆವು. ಆದರೆ, ಬಿಜೆಪಿ ಸಿದ್ಧವಿಲ್ಲ. ಮೊದಲು ಚುನಾವಣೆಯನ್ನು ನಡೆಸಬೇಕೆಂದು ಬಯಸಿದೆ. ಬಿಜೆಪಿ ಬಯಸಲಿ ಅಥವಾ ಇಲ್ಲದಿರಲಿ, ರಾಜ್ಯದ ಸ್ಥಾನಮಾನವನ್ನು ಖಚಿತಪಡಿಸುತ್ತೇವೆ,ʼ ಎಂದು ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯವೈಖರಿಯನ್ನು ಹಿಂದಿನ ರಾಜರೊಂದಿಗೆ ಹೋಲಿಸಿ, ದೇಶ 1947 ರಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಸ್ಥಾಪಿಸಿತು ಎಂದು ಹೇಳಿದರು. ʻಇಲ್ಲಿ ಒಬ್ಬ ರಾಜ ಕುಳಿತಿದ್ದಾನೆ. ಅವನನ್ನು ಎಲ್ಜಿ ಎಂದು ಹೆಸರಿಸಲಾಗಿದೆ. ಅವನು ನಿಮ್ಮ ಸಂಪತ್ತನ್ನು ತೆಗೆದುಕೊಂಡು, ಹೊರಗಿನ ಗುತ್ತಿಗೆದಾರರಿಗೆ ನೀಡುತ್ತಿದ್ದಾನೆ. ಒಂದು ವಿಷಯ ನೆನಪಿಡಿ; ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರ ರಚನೆಯಾಗಲಿದೆ,ʼ ಎಂದು ಹೇಳಿದರು.
ʻಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಲ್ಲ ಸರ್ಕಾರಿ ಖಾಲಿ ಹುದ್ದೆಗಳ ಭರ್ತಿ, ಅಭ್ಯರ್ಥಿಗಳ ವಯಸ್ಸನ್ನು 40 ವರ್ಷಕ್ಕೆ ಹೆಚ್ಚಿಸುವುದು ಮತ್ತು ದಿನಗೂಲಿಗಳನ್ನು ಕಾಯಂಗೊಳಿಸುವ ಭರವಸೆ ನೀಡಿದೆ. ಜಮ್ಮು-ಕಾಶ್ಮೀರದಲ್ಲಿ ಉತ್ಪಾದಿಸುವ ವಿದ್ಯುತ್ ನ್ನು ರಫ್ತು ಮಾಡಲಾಗುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ದೇಶದಲ್ಲಿ ದ್ವೇಷ, ಹಿಂಸಾಚಾರ ಮತ್ತು ಭಯವನ್ನು ಹರಡುತ್ತಿವೆ. ಎರಡು ಸಿದ್ಧಾಂತಗಳ ನಡುವೆ ಹೋರಾಟವಿದೆ,ʼ ಎಂದರು.
ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 8 ರಂದು ಮೂರು ಹಂತದಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮಾಡಿಕೊಂಡಿವೆ.