ಕೇಜ್ರಿವಾಲ್ ಅನಾರೋಗ್ಯ: ಇಂಡಿಯ ಒಕ್ಕೂಟದಿಂದ  30ರಂದು ಪ್ರತಿಭಟನೆ
x
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್

ಕೇಜ್ರಿವಾಲ್ ಅನಾರೋಗ್ಯ: ಇಂಡಿಯ ಒಕ್ಕೂಟದಿಂದ 30ರಂದು ಪ್ರತಿಭಟನೆ

ಕೇಜ್ರಿವಾಲ್ ಅವರ ಬಂಧನ ಮತ್ತು ಅವರ ಆರೋಗ್ಯಕ್ಕೆ ಅಪಾಯ ವಿರುದ್ಧ ಇಂಡಿಯ ಒಕ್ಕೂಟದ ಎಲ್ಲ ಪಕ್ಷಗಳು ಜುಲೈ 30ರಂದು ಪ್ರತಿಭಟಿಸಲಿವೆ ಎಂದು ಎಎಪಿ ನಾಯಕಿ ಅತಿಶಿ ಹೇಳಿದ್ದಾರೆ.


ತಿಹಾರ್ ಜೈಲಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ವಿಷಯವನ್ನು ಪ್ರಸ್ತಾಪಿಸಲು ಜುಲೈ 30 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಆಪ್‌ ಗುರುವಾರ (ಜುಲೈ 25) ತಿಳಿಸಿದೆ.

ಕೇಜ್ರಿವಾಲ್ ಅವರನ್ನು ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಜೂನ್ 3 ಮತ್ತು ಜುಲೈ 7 ರ ನಡುವೆ ಅವರ ಸಕ್ಕರೆ ಮಟ್ಟ 26 ಬಾರಿ ಕುಸಿದಿದೆ ಎಂದು ವೈದ್ಯಕೀಯ ವರದಿಯನ್ನು ಉಲ್ಲೇಖಿಸಿದೆ. ʻಕೇಂದ್ರ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಕೇಜ್ರಿವಾಲ್ ಅವರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಇಂಡಿಯ ಒಕ್ಕೂಟ ಜುಲೈ 30 ರಂದು ಜಂತರ್ ಮಂತರ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಲಿದೆ,ʼ ಎಂದು ಎಎಪಿ ಹೇಳಿದೆ.

ದೆಹಲಿ ಜನರ ವಿರುದ್ಧ ಬಿಜೆಪಿ ಪಿತೂರಿ: ಪತ್ರಿಕಾಗೋಷ್ಠಿಯಲ್ಲಿ, ಎಎಪಿ ನಾಯಕಿ ಅತಿಶಿ ಅವರನ್ನುಈ ಬಗ್ಗೆ ಕೇಳಿದಾಗ, ʻಬಿಜೆಪಿ ದೆಹಲಿಯ ಜನರ ವಿರುದ್ಧ ಪಿತೂರಿ ನಡೆಸುತ್ತಿದೆ. ಇದು ದೆಹಲಿ ಜನರ ಕೆಲಸವನ್ನು ನಿಲ್ಲಿಸುತ್ತಿದೆ; ದೆಹಲಿ ಜನರ ಹಣವನ್ನು ನಿಲ್ಲಿಸುತ್ತಿದೆ. ದೆಹಲಿಯ ಜನರಿಗಾಗಿ ಕೆಲಸ ಮಾಡಿದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ಬಿಜೆಪಿ ಬಂಧಿಸಿದೆ,ʼ ಎಂದು ಆರೋಪಿಸಿದ್ದಾರೆ.

ʻಕೇಜ್ರಿವಾಲ್ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆಯಬಹುದು ಎಂದು ಬಿಜೆಪಿಗೆ ತಿಳಿದಾಗ, ಅವರನ್ನು ಸಿಬಿಐನಿಂದ ಬಂಧಿಸಿದರು,ʼ ಎಂದು ಅತಿಶಿ ದೂರಿದರು.

ಸಿಎಂ ದೇಹ ತೂಕ ಕುಸಿತ: ʻಕಳೆದ 30 ವರ್ಷಗಳಿಂದ ಕೇಜ್ರಿವಾಲ್‌ ಅವರಿಗೆ ಮಧುಮೇಹ ಇದೆ. ಬಂಧನದಲ್ಲಿ ಅವರ ತೂಕ 8.5 ಕೆಜಿ ಕಡಿಮೆಯಾಗಿದೆ. ದೇಹದ ಸಕ್ಕರೆ ಮಟ್ಟವನ್ನು ಗ್ಲುಕೋಮೀಟರ್ ಅಂಕಿಅಂಶವನ್ನು ಎಲ್‌ಜಿ ಮತ್ತು ಕೇಂದ್ರದೊಂದಿಗೆ ಹಂಚಿಕೊಳ್ಳಲಾಗಿದೆ. ಕೇಜ್ರಿವಾಲ್ ಅವರ ಸಕ್ಕರೆ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ ಎನ್ನುವುದು ಅವರಿಗೆ ತಿಳಿದಿದೆ, ʼಎಂದು ಹೇಳಿದರು.

ʻಬಿಜೆಪಿಗೆ ವಿಷಯ ತಿಳಿದಿದ್ದರೂ, ಸಿಬಿಐ ಅವರನ್ನು ಬಂಧಿಸಿತು. ಅವರ ಆರೋಗ್ಯ ಶಾಶ್ವತವಾಗಿ ಹಾಳಾಗಲಿ ಎಂದು ಬಿಜೆಪಿ ಬಯಸಿದೆ. ಇಂಡಿಯ ಒಕ್ಕೂಟದ ಪಕ್ಷಗಳು ಕೇಜ್ರಿವಾಲ್ ಅವರ ಬಂಧನ ಮತ್ತು ಅವರ ಆರೋಗ್ಯಕ್ಕೆ ಅಪಾಯದ ವಿರುದ್ಧ ಪ್ರತಿಭಟಿಸುತ್ತವೆ, ʼಎಂದು ಅವರು ಹೇಳಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು ಮತ್ತು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ, ಸಿಬಿಐ ಪ್ರಕರಣದಲ್ಲಿ ಅವರು ತಿಹಾರ್‌ ಜೈಲಿನಲ್ಲಿದ್ದಾರೆ.

Read More
Next Story