ಇಂಡಿಯ ಒಕ್ಕೂಟದಿಂದ 'ಮುಜ್ರಾ': ಮೋದಿ
ಬಿಕ್ರಮ್ (ಬಿಹಾರ), ಮೇ 25- ಇಂಡಿಯ ಒಕ್ಕೂಟ ಮುಸ್ಲಿಂ ಮತಬ್ಯಾಂಕ್‌ಗಾಗಿ ಗುಲಾಮಗಿರಿ ಮತ್ತು ‘ಮುಜ್ರಾ’ ನಡೆಸುತ್ತಿದ್ದು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲು ದೋಚುವ ಪ್ರಯತ್ನಗಳನ್ನು ತಡೆಯುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಜ್ಞೆ ಮಾಡಿದ್ದಾರೆ.
ಪಾಟ್ನಾದಿಂದ ಸುಮಾರು 40 ಕಿಮೀ ದೂರದಲ್ಲಿರುವ ಪಾಟಲಿಪುತ್ರ ಲೋಕಸಭೆ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳು ಕೋಟಾದಿಂದ ವಂಚಿತರಾಗಲು ಆರ್‌ಜೆಡಿ ಮತ್ತು ಕಾಂಗ್ರೆಸ್ ಕಾರಣ ಎಂದು ದೂಷಿಸಿದರು.
ʻಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ದಿಕ್ಕು ನೀಡಿದ ಭೂಮಿ ಬಿಹಾರ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹಕ್ಕುಗಳನ್ನು ಕಸಿದುಕೊ ಳ್ಳುವ ಮತ್ತು ಅದನ್ನು ಮುಸ್ಲಿಮರಿಗೆ ನೀಡುವ ಇಂಡಿಯ ಒಕ್ಕೂಟದ ಯೋಜನೆಗಳನ್ನು ವಿಫಲಗೊಳಿಸುತ್ತೇನೆ ಎಂದು ಘೋಷಿಸಲು ಬಯ ಸುತ್ತೇನೆ. ಅವರು ಗುಲಾಮರಾಗಿ ಉಳಿದುಕೊಂಡು, ತಮ್ಮ ಮತ ಬ್ಯಾಂಕ್ ನ್ನು ಮೆಚ್ಚಿಸಲು ಮುಜ್ರಾ ನಡೆಸಬಹುದುʼ, ಎಂದು ಹೇಳಿದರು. ಹಲವು ಮುಸ್ಲಿಂ ಗುಂಪುಗಳನ್ನು ಒಬಿಸಿಗಳ ಪಟ್ಟಿಗೆ ಸೇರಿಸುವ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ತಳ್ಳಿಹಾಕಿದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಅವರು ಉಲ್ಲೇಖಿಸಿದರು.
ರಾಮ್ ಕೃಪಾಲ್ ಯಾದವ್ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದ ಅವರು, ʻಹಲವರು ಭಗವಾನ್ ರಾಮನೊಂದಿಗೂ ಜಗಳ ಆಡುತ್ತಾರೆ; ಅವರು ರಾಮ್ ಕೃಪಾಲ್ ಹೆಸರು ಕೇಳಿದರೆ ಮುಖಗಂಟಿಕ್ಕುತ್ತಾರೆ,ʼ ಎಂದು ಟೀಕಿಸಿದರು.
ಸ್ಥಳೀಯ ಸಿಹಿತಿಂಡಿ ಮನೇರ್ ಕಾ ಲಡ್ಡೂ ಹೆಸರು ಉಲ್ಲೇಖಿಸಿ, ʻಜೂನ್ 4 ಕ್ಕೆ ಸಿಹಿ ಸಿದ್ಧಮಾಡಿಟ್ಟುಕೊಳ್ಳಿ. ನಿಮ್ಮ ಮತ ಮಹತ್ವದ್ದು.ಕೇವಲ ನಿಮ್ಮ ಸಂಸದರನ್ನು ಆಯ್ಕೆ ಮಾಡಲು ಅಲ್ಲ; ಪ್ರಧಾನಿಯನ್ನು ಆಯ್ಕೆ ಮಾಡಲು ಕೂಡ,ʼ ಎಂದು ಹೇಳಿದರು.
ʻಎಲ್‌ಇಡಿ ಬಲ್ಬ್‌ಗಳ ಯುಗದಲ್ಲಿ ಇಡೀ ಬಿಹಾರವನ್ನು ಕತ್ತಲೆಯಲ್ಲಿಟ್ಟು, ತಮ್ಮ ಮನೆಯನ್ನು ಮಾತ್ರ ಬೆಳಗಿಸುವ ಲಾಟೀನಿನೊಂದಿಗೆ ತಿರುಗುತ್ತಿದ್ದಾರೆ,ʼ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಹೆಸರಿಸದೆ ಲೇವಡಿ ಮಾಡಿದರು.
ಲಾಲು ಪ್ರಸಾದ್ ಅವರ ಹಿರಿಯ ಪುತ್ರಿ ಮಿಸಾ ಭಾರತಿ ಸತತ ಮೂರನೇ ಬಾರಿಗೆ ಪಾಟಲಿಪುತ್ರದಿಂದ ಸ್ಪರ್ಧಿಸುತ್ತಿದ್ದಾರೆ.