ಆರೋಗ್ಯ- ಜೀವವಿಮೆ ಕಂತುಗಳ ಮೇಲೆ ಜಿಎಸ್‌ಟಿ: ಇಂಡಿಯ ಒಕ್ಕೂಟದಿಂದ ಪ್ರತಿಭಟನೆ
x
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ, ಶರದ್ ಪವಾರ್, ಸುದೀಪ್ ಬಂಧೋಪಾಧ್ಯಾಯ, ಟಿ.ಆರ್. ಬಾಲು ಮತ್ತು ಇನ್ನಿತರ ವಿರೋಧ ಪಕ್ಷದ ಸಂಸದರು ಆರೋಗ್ಯ /ವೈದ್ಯಕೀಯ ವಿಮೆಗೆ ಶೇ.18 ರಷ್ಟು ಜಿಎಸ್‌ಟಿ ತೆಗೆದುಹಾಕಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಆರೋಗ್ಯ- ಜೀವವಿಮೆ ಕಂತುಗಳ ಮೇಲೆ ಜಿಎಸ್‌ಟಿ: ಇಂಡಿಯ ಒಕ್ಕೂಟದಿಂದ ಪ್ರತಿಭಟನೆ

ಜೀವ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ 'ಗಬ್ಬರ್ ಸಿಂಗ್ ತೆರಿಗೆ' ಅಮಾನವೀಯ. ಲೂಟಿ ಮಾಡುವ ಬಿಜೆಪಿಯ ನೀತಿಗೆ ಮತ್ತೊಂದು ಖಂಡನೀಯ ಉದಾಹರಣೆ ಎಂದು ಖರ್ಗೆ ಅವರು ಎಕ್ಸ್‌ ನಲ್ಲಿ ಬರೆದಿದ್ದಾರೆ.


ಹೊಸದಿಲ್ಲಿ: ಜೀವ ವಿಮೆ ಮತ್ತು ಆರೋಗ್ಯ ವಿಮೆ ಕಂತುಗಳ ಮೇಲಿನ ಶೇ. 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಿಂಪಡೆಯುವಂತೆ ಒತ್ತಾಯಿಸಿ ಇಂಡಿಯ ಒಕ್ಕೂಟದ ಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದವು.

ಟಿಎಂಸಿ, ಕಾಂಗ್ರೆಸ್, ಎಎಪಿ ಮತ್ತು ಎನ್‌ಸಿಪಿ (ಎಸ್‌ಸಿ) ಮತ್ತಿತರ ಪಕ್ಷಗಳ ಸಂಸದರು ಸಂಸತ್ತಿನ ಮಕರ ದ್ವಾರಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಕುಳಿತು ‘ತೆರಿಗೆ ಭಯೋತ್ಪಾದನೆ’ ಎಂಬ ಫಲಕಗಳನ್ನುಪ್ರದರ್ಶಿಸಿದರು. ಜೀವ ಮತ್ತು ಆರೋಗ್ಯ ವಿಮೆ ಕಂತುಗಳ ಮೇಲಿನ ಜಿಎಸ್‌ಟಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ʻಇಂದು ಸಂಸತ್ತಿನ ಆವರಣದಲ್ಲಿ ಇಂಡಿಯ ಒಕ್ಕೂಟದ ಪಕ್ಷಗಳು ಆರೋಗ್ಯ ಮತ್ತು ಜೀವ ವಿಮೆ ಕಂತುಗಳ ಮೇಲಿನ ಶೇ. 18 ಜಿಎಸ್‌ಟಿಯನ್ನು ತಕ್ಷಣವೇ ತೆಗೆದುಹಾಕಲು ಒತ್ತಾಯಿಸಿದವು. ಈ ಸುಲಿಗೆ ನಮ್ಮ ಜನರು, ವಿಶೇಷವಾಗಿ ಮಧ್ಯಮ ವರ್ಗಗಳ ಮೇಲೆ ತೀವ್ರ ಹೊಡೆತ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ʻಮೋದಿ ಸರ್ಕಾರದ ತೆರಿಗೆ ನೀತಿಗಳ ಹೊರೆಯಿಂದ ಮಧ್ಯಮ ವರ್ಗ ಹೆಣಗಾಡುತ್ತಿದೆ. ದೇಶದ ವೈದ್ಯಕೀಯ ಹಣದುಬ್ಬರ ದರ 2024 ರಲ್ಲಿ ಏಷ್ಯಾದಲ್ಲಿ ಅತಿ ಹೆಚ್ಚು-ಶೇ.14! ಅದರ ಮೇಲೆ, ಜೀವ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ 'ಗಬ್ಬರ್ ಸಿಂಗ್ ತೆರಿಗೆ' ಅಮಾನವೀಯ. ಲೂಟಿ ಮಾಡುವ ಬಿಜೆಪಿಯ ನೀತಿಗೆ ಮತ್ತೊಂದು ಖಂಡನೀಯ ಉದಾಹರಣೆ,ʼ ಎಂದು ಖರ್ಗೆ ಅವರು ಬರೆದಿದ್ದಾರೆ.

ರಾಹುಲ್ ಗಾಂಧಿ, ʻಮೋದಿ ಸರ್ಕಾರ ಆರೋಗ್ಯ ವಿಮೆ ಕಂತುಗಳ ಮೇಲಿನ ತೆರಿಗೆಯಿಂದ 24,000 ಕೋಟಿ ರೂ. ಸಂಗ್ರಹಿಸಿದೆ. ಪ್ರತಿ ವಿಪತ್ತಿ ನಲ್ಲೂ ತೆರಿಗೆ ಅವಕಾಶ ಹುಡುಕುವುದು ಬಿಜೆಪಿ ಸರ್ಕಾರದ ಸಂವೇದನಾರಹಿತ ಚಿಂತನೆಗೆ ಪುರಾವೆಯಾಗಿದೆ. ಆರೋಗ್ಯ ಮತ್ತು ಜೀವ ವಿಮೆಯನ್ನು ಜಿಎಸ್‌ಟಿ ಮುಕ್ತಗೊಳಿಸಬೇಕು,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ʻಜೀವ ಮತ್ತು ವೈದ್ಯಕೀಯ ವಿಮೆ ಕಂತುಗಳ ಮೇಲಿನ ಜಿಎಸ್‌ಟಿ ವಿರುದ್ಧ ಇಂಡಿಯ ಒಕ್ಕೂಟದ ಪ್ರತಿಭಟನೆ ಸಮರ್ಥನೀಯ,ʼ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದರು ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ವಿತ್ತ ಸಚಿವೆಗೆ ಪತ್ರ ಬರೆದಿದ್ದು,ʼಜೀವನದ ಅನಿಶ್ಚಿತತೆಗಳಿಗೆ ತೆರಿಗೆ ವಿಧಿಸುತ್ತದೆ ಮತ್ತು ಉದ್ಯಮದ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ,ʼ ಎಂದು ಹೇಳಿದ್ದಾರೆ.

Read More
Next Story