ಮತಗಳವು ಆರೋಪ: ಸಂಸತ್ ಆವರಣದಲ್ಲಿ ಇಂಡಿಯಾ ಕೂಟದ ಸಂಸದರಿಂದ ಪ್ರತಿಭಟನೆ
x

ಮತಗಳವು ಆರೋಪ: ಸಂಸತ್ ಆವರಣದಲ್ಲಿ 'ಇಂಡಿಯಾ' ಕೂಟದ ಸಂಸದರಿಂದ ಪ್ರತಿಭಟನೆ

ಸರ್ಕಾರ ಮತ್ತು ಚುನಾವಣಾ ಆಯೋಗ ಶಾಮೀಲಾಗಿ ಈ ಪರಿಷ್ಕರಣೆಯನ್ನು ನಡೆಸುತ್ತಿವೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ.


ಬಿಹಾರದಲ್ಲಿ ಚುನಾವಣಾ ಆಯೋಗವು ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಮತ್ತು ' ಮತಗಳವು ವಿರೋಧಿಸಿ 'ಇಂಡಿಯಾ' ಮೈತ್ರಿಕೂಟದ ಹಲವು ಸಂಸದರು ಶುಕ್ರವಾರ ಸಂಸತ್ ಭವನದ ಸಂಕೀರ್ಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಹಾಗೂ ಡಿಎಂಕೆ ಮತ್ತು ಎಡಪಕ್ಷಗಳ ಸಂಸದರು ಸಂಸತ್ತಿನ ಮಕರ ದ್ವಾರದ ಬಳಿ ಜಮಾಯಿಸಿ, 'ಎಸ್​ಐಆರ್​ ' ಅನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. "ಎಸ್​ಐಆರ್​ ಎಂದರೆ ಸದ್ದಿಲ್ಲದ ಅದೃಶ್ಯ ರಿಗ್ಗಿಂಗ್ (Silent Invisible Rigging)" ಮತ್ತು "ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ" ಎಂಬಂತಹ ಬ್ಯಾನರ್ ಹಾಗೂ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ, ಮತದಾರರನ್ನು ಅವರ ಹಕ್ಕಿನಿಂದ ವಂಚಿತಗೊಳಿಸಲು ಸರ್ಕಾರ ಮತ್ತು ಚುನಾವಣಾ ಆಯೋಗ ಶಾಮೀಲಾಗಿ ಈ ಪರಿಷ್ಕರಣೆಯನ್ನು ನಡೆಸುತ್ತಿವೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಗುರುವಾರವಷ್ಟೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾಡಿದ್ದ 'ವೋಟ್ ಚೋರಿ' ಆರೋಪಗಳನ್ನು ಪ್ರತಿಧ್ವನಿಸುವ ಭಿತ್ತಿಪತ್ರಗಳು ಕೂಡ ಪ್ರತಿಭಟನೆಯಲ್ಲಿ ಕಂಡುಬಂದವು.

ಕಳೆದ 13 ದಿನಗಳಿಂದ ವಿಪಕ್ಷಗಳು ಈ ವಿಷಯವಾಗಿ ಪ್ರತಿಭಟನೆ ನಡೆಸುತ್ತಿದ್ದು, ಬಿಹಾರದ 'ಎಸ್​​ಐಆರ್​' ವಿಷಯವು ಸಂಸತ್ತಿನ ಉಭಯ ಸದನಗಳಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದೆ. ಈ ವಿವಾದದಿಂದಾಗಿ ಜುಲೈ 21ರಂದು ಆರಂಭವಾದ ಮುಂಗಾರು ಅಧಿವೇಶನದ ಕಲಾಪಗಳು ಬಹುತೇಕ ಸ್ತಬ್ಧಗೊಂಡಿವೆ.

Read More
Next Story