Election 2024| ಬುಲ್ಡೋಜರ್ ಹೇಳಿಕೆಗೆ ಖಂಡನೆ: ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ: ಇಂಡಿಯ ಒಕ್ಕೂಟ
ಮುಂಬೈ, ಮೇ 18: ʻಧಾರ್ಮಿಕ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಎಲ್ಲಾ ನಾಗರಿಕರ ಸ್ವಾತಂತ್ರ್ಯ ಮತ್ತು ದೇಶವು ಸಂವಿಧಾನದ ಅನ್ವಯ ನಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಇಂಡಿಯ ಒಕ್ಕೂಟದ ಮುಖಂಡರು ಶನಿವಾರ ಹೇಳಿದ್ದಾರೆ. ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದರೆ ಅಯೋಧ್ಯೆ ರಾಮಮಂದಿರವನ್ನು ನೆಲಸಮ ಮಾಡಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಮುಂಬೈನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರು ಮಾತನಾಡಿದರು.
ಕಾಂಗ್ರೆಸ್ ಎಂದಿಗೂ ಮಾಡದ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಇಂಡಿಯ ಒಕ್ಕೂಟದ ಸರ್ಕಾರ ಪೂರ್ಣಗೊಳಿಸಲಿದೆ ಎಂದು ಠಾಕ್ರೆ ಹೇಳಿದರು. ʻದೇವಾಲಯ ಮಾತ್ರವಲ್ಲ: ಎಲ್ಲ ಧರ್ಮಗಳ ಪೂಜಾ ಸ್ಥಳಗಳನ್ನು ರಕ್ಷಿಸುವುದು ತಮ್ಮ ಸರ್ಕಾರದ ಕರ್ತವ್ಯʼ ಎಂದು ಪವಾರ್ ಹೇಳಿದರು.
ʻಸಂವಿಧಾನದ ಆಶಯದಂತೆ ಮೀಸಲು ಉಳಿಯುತ್ತದೆ. ನಾವು ಯಾರ ಮೇಲೂ ಬುಲ್ಡೋಜರ್ ಬಳಸಿಲ್ಲ.ಕಾಂಗ್ರೆಸ್ ಎಂದಿಗೂ ಮಾಡದ ಅಥವಾ ಕಾರ್ಯಗತಗೊಳಿಸದ ವಿಷಯಗಳ ಬಗ್ಗೆ ಸುಳ್ಳು ಹೇಳುವುದು ಮತ್ತು ಜನರನ್ನು ಪ್ರಚೋದಿಸುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆʼ ಎಂದು ಖರ್ಗೆ ಹೇಳಿದರು. 370ನೇ ವಿಧಿ ಕುರಿತ ಪ್ರಶ್ನೆಗೆ, ʻನಾನು ಮೋದಿಗೆ ಉತ್ತರಿಸುವವನಲ್ಲ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಜಾರಿಗೊಳಿಸುತ್ತೇವೆʼ ಎಂದು ಖರ್ಗೆ ಹೇಳಿದರು. ʻಪ್ರಧಾನಿ ಹೋದಲ್ಲೆಲ್ಲ ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ನಮ್ಮ ಸರ್ಕಾರ ಆಹಾರ ಭದ್ರತಾ ಕಾಯಿದೆ ಜಾರಿಗೆ ತಂದಿದ್ದು, ಅದನ್ನು ಜಾರಿಗೆ ತರಲು ಬದ್ಧವಾಗಿದೆ. 10 ಕೆಜಿ ಉಚಿತ ಪಡಿತರ ನೀಡುತ್ತೇವೆ,ʼ ಎಂದರು. ʻನನ್ನ 53 ವರ್ಷಗಳ ರಾಜಕೀಯ ಜೀವನದಲ್ಲಿ ಜನರನ್ನು ಪ್ರಚೋದಿಸುವ ಮತ್ತು ಸಮಾಜವನ್ನು ಒಡೆಯುವ ಪ್ರಧಾನಿಯನ್ನು ನಾನು ನೋಡಿಲ್ಲ. ವಿರೋಧ ಪಕ್ಷಗಳನ್ನು ಒಡೆಯಲು ಬೆದರಿಕೆ, ಬ್ಲ್ಯಾಕ್‌ಮೇಲ್ ಮತ್ತು ಆಮಿಷ ಒಡ್ಡುವ ತಂತ್ರಗಳನ್ನು ಬಳಸಲಾಗಿದೆ,ʼ ಎಂದು ಖರ್ಗೆ ಹೇಳಿದರು.
ಇಂಡಿಯ ಒಕ್ಕೂಟ ಸರ್ಕಾರವನ್ನು ಬೆಂಬಲಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿಕೆ ಮತ್ತು ಬಂಗಾಳ ಸಿಎಂ ಅವರನ್ನು ನಂಬಲು ಸಾಧ್ಯವಿಲ್ಲ ಮತ್ತು ಅವರು ಬಿಜೆಪಿಯೊಂದಿಗೆ ಹೋಗಬಹುದು ಎಂಬ ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ʻಮಮತಾ ಬ್ಯಾನರ್ಜಿ ಅವರು ಒಕ್ಕೂಟದಲ್ಲಿ ಇದ್ದಾರೆ. ಅಧೀರ್ ರಂಜನ್ ಚೌಧರಿ ಅವರು ನಿರ್ಧಾರ ತೆಗೆದುಕೊಳ್ಳುವುದಿಲ್ಲ; ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಒಪ್ಪದಿರುವವರು ಹೊರಗೆ ಹೋಗುತ್ತಾರೆ,ʼ ಎಂದು ಖರ್ಗೆ ಹೇಳಿದರು.
ತಮ್ಮ ಪಕ್ಷವನ್ನು ʻನಕಲಿʼ ಶಿವಸೇನೆ ಎಂದು ಕರೆದಿದ್ದಕ್ಕಾಗಿ ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಠಾಕ್ರೆ, ʻಬಿಜೆಪಿ ಆರ್‌ಎಸ್‌ಎಸ್ ಅನ್ನು 'ನಕ್ಲಿ ಸಂಘ' ಎಂದು ಕರೆಯುತ್ತದೆ. ಇಂಡಿಯ ಒಕ್ಕೂಟ ಹಲವು ಪ್ರಧಾನ ಮಂತ್ರಿಗಳ ಮುಖಗಳನ್ನು ಹೊಂದಿದೆ. ಆದರೆ, ಬಿಜೆಪಿಗೆ ಇರುವುದು ಒಬ್ಬರು ಮತ್ತು ಅವರು ಕೂಡ ಕಾರ್ಯನಿರ್ವಹಿಸುತ್ತಿಲ್ಲ,ʼ ಎಂದರು. ʻಜೂನ್ 4 ರಂದು ಜುಮ್ಲಾ ಯುಗ ಕೊನೆಗೊಳ್ಳಲಿದೆ. ಇಂಡಿಯ ಒಕ್ಕೂಟ ಅಧಿಕಾರಕ್ಕೆ ಬಂದಾಗ ಅಚ್ಚೇ ದಿನ್ ಬರುತ್ತದೆ ಎಂದು ಠಾಕ್ರೆ ಹೇಳಿದರು.
ವರ್ಷಾಂತ್ಯ ನಡೆಯಲಿರುವ ವಿಧಾನಸಭೆ ಚುನಾವಣೆ ಬಗ್ಗೆ ಕೇಳಿದಾಗ, ʻಚುನಾವಣೆಯನ್ನು ಹೆಚ್ಚು ಶಕ್ತಿಯುತವಾಗಿ ಮತ್ತು ಒಗ್ಗಟ್ಟಿನಿಂದ ಎದುರಿಸಲಾಗುತ್ತದೆ. ಇಂಡಿಯ ಒಕ್ಕೂಟ ಗೆಲ್ಲುತ್ತದೆ,ʼ ಎಂದು ಠಾಕ್ರೆ ಹೇಳಿದರು.