ದೆಹಲಿಯಲ್ಲಿ ಎಲ್‌ಡಿಎಫ್‌ ಪ್ರತಿಭಟನೆಗೆ ʼಇಂಡಿಯಾʼ ಒಕ್ಕೂಟದ ಬೆಂಬಲ
x
ಕೇರಳ ಸಿಎಂ ಪಿಣರಾಯಿ ವಿಜಯನ್‌

ದೆಹಲಿಯಲ್ಲಿ ಎಲ್‌ಡಿಎಫ್‌ ಪ್ರತಿಭಟನೆಗೆ ʼಇಂಡಿಯಾʼ ಒಕ್ಕೂಟದ ಬೆಂಬಲ

ರಾಜ್ಯವನ್ನು ಕೇಂದ್ರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಎಲ್‌ಡಿಎಫ್ ನಡೆಸಲಿರುವ ಪ್ರತಿಭಟನೆಯಲ್ಲಿ INDIA ಮೈತ್ರಿಕೂಟದ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಎಲ್‌ಡಿಎಫ್ ತಿಳಿಸಿದೆ.


ಹೊಸದಿಲ್ಲಿ, ಫೆ.6: ರಾಜ್ಯವನ್ನು ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ನಾಳೆ (ಫೆಬ್ರವರಿ 8) ದೆಹಲಿಯ ಜಂತರ್‌ ಮಂತರ್‌ನಲ್ಲಿ ಕೇರಳದ ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ನಡೆಸುತ್ತಿರುವ ಪ್ರತಿಭಟನೆಯಲ್ಲಿ INDIA ಮೈತ್ರಿಕೂಟದ ನಾಯಕರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಎಲ್‌ಡಿಎಫ್ ತಿಳಿಸಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಮುಖಂಡರನ್ನು ಆಹ್ವಾನಿಸಲಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಬಿನೋಯ್ ವಿಶ್ವಂ ಅವರು ಹೇಳಿದ್ದಾರೆ.

ಕೇರಳ ಮುಖ್ಯಮಂತ್ರಿ ವಿಜಯನ್, ರಾಜ್ಯದ ಸಂಸದರು, ಶಾಸಕರು ಸೇರಿದಂತೆ ಇತರರು ಪಾಲ್ಗೊಳ್ಳುವ ಪ್ರತಿಭಟನೆಯಲ್ಲಿ ಡಿಎಂಕೆ, ಎನ್‌ಸಿಪಿ ಮತ್ತು ಆರ್‌ಜೆಡಿ ನಾಯಕರು ಜೊತೆಯಾಗುವ ಸಾಧ್ಯತೆಯಿದೆ ಎಂದು ವಿಶ್ವಂ ತಿಳಿಸಿದ್ದಾರೆ.

ಆದರೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಮೈತ್ರಿಕೂಟವು (ಯುಡಿಎಫ್) ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ನಿರಾಕರಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಮಂಗಳವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದು, ಹಣಕಾಸಿನ ಫೆಡರಲಿಸಂ ಅನ್ನು ಕಾಪಾಡಲು ಕೇರಳ ನಡೆಸಲಿರುವ ಪ್ರತಿಭಟನೆಗೆ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

ರಾಜ್ಯಗಳ ಕಾರ್ಯನಿರ್ವಹಣೆ ಮತ್ತು ಹಣಕಾಸಿನ ಸ್ವಾಯತ್ತತೆಯ ಬಗ್ಗೆ ಕೇಂದ್ರವು ಮಾಡುತ್ತಿರುವ ತಾರತಮ್ಯದ ವಿರುದ್ಧದ ಪ್ರತಿಭಟನೆಗೆ ಬೆಂಬಲ ಘೋಷಿಸಿದ ಸಿಎಂ ಸ್ಟಾಲಿನ್ ಅವರಿಗೆ ಕೇರಳ ಸಿಎಂ ಧನ್ಯವಾದ ಅರ್ಪಿಸಿದ್ದಾರೆ.

ʼನಾವು ನ್ಯಾಯಯುತವಾದ ಪಾಲು ಪಡೆಯಲು ಕೇರಳದ ಧ್ವನಿಯನ್ನು ಎತ್ತುತ್ತಿದ್ದೇವೆ. ರಾಷ್ಟ್ರೀಯ ಸಂಪನ್ಮೂಲಗಳನ್ನು ಹಂಚಿಕೊಳ್ಳುವಾಗ, ಒಕ್ಕೂಟ ರಚನೆಯಲ್ಲಿ ಪ್ರತಿ ರಾಜ್ಯವು ತಮ್ಮ ಪಾಲನ್ನು ಪಡೆಯುವ ಹಕ್ಕನ್ನು ಹೊಂದಿದೆ" ಎಂದು ವಿಶ್ವಂ ಪ್ರತಿಪಾದಿಸಿದ್ದಾರೆ.

"ಕೇಂದ್ರ ಸರ್ಕಾರವು 2021-22 ರಿಂದ ಪೂರ್ವಾನ್ವಯವಾಗುವಂತೆ ರಾಜ್ಯದ ಸಾಲದ ಮಿತಿಯನ್ನು ಕಡಿಮೆ ಮಾಡಿದೆ, ಹಣಕಾಸು ಆಯೋಗದ ಅನುಮೋದಿತ ಶಿಫಾರಸುಗಳನ್ನು ಸಹ ಮೀರಿಸಿದೆ" ಎಂದು ಎಲ್‌ಡಿಎಫ್‌ ಹೇಳಿದೆ.

"ಕೇರಳ ಕ್ಯಾಬಿನೆಟ್ ಸಂಸದರು ಮತ್ತು ಶಾಸಕರೊಂದಿಗೆ ದೆಹಲಿಯ ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಭಾರತದ ಒಕ ರಚನೆಯಲ್ಲಿ ಎಲ್ಲಾ ರಾಜ್ಯಗಳ ಹಕ್ಕುಗಳಿಗಾಗಿ ಈ ಪ್ರಜಾಸತ್ತಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎನ್‌ಡಿಎಯೇತರ ಸಿಎಂಗಳನ್ನು ಕೂಡಾ ಆಹ್ವಾನಿಸಲಾಗಿದೆ" ಎಂದು ಅವರು ಹೇಳಿದರು.

ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಡಳಿತಾರೂಢ ಕಾಂಗ್ರೆಸ್ ಕೂಡ ತೆರಿಗೆ ಮತ್ತು ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಬುಧವಾರ ದೆಹಲಿಯಲ್ಲಿ ಪ್ರತಿಭಟನೆ ಆರಂಭಿಸಿದೆ.

Read More
Next Story