
ಜಂತರ್ ಮಂತರ್ ನಲ್ಲಿ ಇಂಡಿಯ ಒಕ್ಕೂಟದ ಪ್ರತಿಭಟನೆ: ಕೇಜ್ರಿವಾಲ್ ಬಿಡುಗಡೆಗೆ ಆಗ್ರಹ
ನವದೆಹಲಿ, ಜು.30- ಜಂತರ್ ಮಂತರ್‌ನಲ್ಲಿ ಸೇರಿದ್ದ ಇಂಡಿಯ ಬ್ಲಾಕ್ ನಾಯಕರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ದೆಹಲಿ ಸರ್ಕಾರದ ಕೆಲಸಕ್ಕೆ ಕೇಂದ್ರ ಅಡ್ಡಿಪಡಿಸುತ್ತಿದೆ. ಇದರಿಂದ ರಾಜಿಂದರ್ ನಗರದಲ್ಲಿ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಸಿಲುಕಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಸಂಭವಿಸಿತು ಎಂದು ದೂರಿದವು. ಎಎಪಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ʻಭಾರತ್ ಮಾತಾ ಕಿ ಜೈʼ ಮತ್ತು ʻಸರ್ವಾಧಿಕಾರವನ್ನು ಕೊನೆಗೊಳಿಸಿʼ ಎಂಬ ಘೋಷಣೆಗಳು ಮೊಳಗಿದವು.
ಸಿಪಿಐ(ಎಂಎಲ್) ಲಿಬರೇಶನ್ ನಾಯಕ ದೀಪಂಕರ್ ಭಟ್ಟಾಚಾರ್ಯ ಮಾತನಾಡಿ, ಹಿರಿಯ ಆಪ್ ನಾಯಕರಾದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ʻಪಿತೂರಿಯ ಭಾಗವಾಗಿʼ ಜೈಲಿಗೆ ಹಾಕಲಾಗಿದೆ. ರಾಜಿಂದರ್ ನಗರದ ಸಾವು ಸೇರಿದಂತೆ ದಿಲ್ಲಿಯ ಅರಾಜಕತೆಗೆ ಮೋದಿ ಸರಕಾರವೇ ಹೊಣೆ. ಈ ಅರಾಜಕತೆಯು ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಜೀವವನ್ನು ತೆಗೆದುಕೊಂಡಿತು,ʼ ಎಂದು ಹೇಳಿದರು.
ʻದೆಹಲಿಯ ಚುನಾಯಿತ ಮುಖ್ಯಮಂತ್ರಿ ಜೈಲಿನಲ್ಲಿದ್ದಾರೆ. ಉಮರ್ ಖಾಲಿದ್ ಮತ್ತು ಅನೇಕ ಕಾರ್ಯಕರ್ತರು ಸುಳ್ಳು ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಭೀಮಾ ಕೋರೆಗಾಂವ್ ಒಂದು ನಕಲಿ ಪ್ರಕರಣ. ಪಾದ್ರಿ ಸ್ಟ್ಯಾನ್ ಸ್ವಾಮಿ ಜೈಲಿನಲ್ಲೇ ಮೃತಪಟ್ಟರು. ಬಿಜೆಪಿ ನೇತೃತ್ವದ ಕೇಂದ್ರವು ತಮ್ಮನ್ನು ವಿರೋಧಿಸುವವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ,ʼ ಎಂದು ಹೇಳಿದರು.
ʻಹೇಮಂತ್ ಸೊರೆನ್ ಬಿಡುಗಡೆಯಾದರು. ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದರೂ, ಅವರನ್ನು ಜೈಲಿನಲ್ಲಿಡಲು ಸಂಚು ನಡೆಯುತ್ತಿದೆ. ಇದು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರ ಮತ್ತು ರಾಜಕೀಯ ಪಕ್ಷವನ್ನು ಮುಗಿಸುವ ಪಿತೂರಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಜನರು ಉತ್ತರ ಕೊಡಬೇಕು,ʼ ಎಂದು ಒತ್ತಾಯಿಸಿದರು.
ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಕೂಡ ದೆಹಲಿ ಮುಖ್ಯಮಂತ್ರಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ʻಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಪ್ರಜಾಪ್ರಭುತ್ವವು ಜನರಿಂದ ದೂರವಾಗಿದೆ. ಮೋದಿ ಸರ್ಕಾರವು ಬಳಸುತ್ತಿರುವ ಕೇಂದ್ರೀಯ ಸಂಸ್ಥೆಗಳ ಬಲಿಪಶುಗಳಲ್ಲಿ ಕೇಜ್ರಿವಾಲ್ ಒಬ್ಬರು. ನಾವು ಎಷ್ಟು ದಿನ ಇದನ್ನು ಸಹಿಸಿಕೊಳ್ಳುತ್ತೇವೆ? ಕೇಜ್ರಿವಾಲ್ ಅವರ ಆರೋಗ್ಯ ಹದಗೆಟ್ಟಿದೆ,ʼ ಎಂದು ಹೇಳಿದರು.
ಎಎಪಿ ದೆಹಲಿ ಸಂಚಾಲಕ ಗೋಪಾಲ್ ರೈ, ʻಕೇಜ್ರಿವಾಲ್ ಅವರಿಗೆ ವಿಚಾರಣೆ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಆದರೆ, ಅವರನ್ನು ಜೈಲಿನಲ್ಲಿಡಲು ಸಂಚು ರೂಪಿಸಲಾಗಿದೆ. ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿಗೆ ಯಾರು ಹೊಣೆ?,ʼ ಎಂದು ಹೇಳಿದರು.
ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಲೋಕಸಭೆಯ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಪ್ರಮೋದ್ ತಿವಾರಿ ಅವರು, ಸುನೀತಾ ಕೇಜ್ರಿವಾಲ್ ಅವರನ್ನು ʻಪ್ರತಿರೋಧದ ಸಂಕೇತʼ ಎಂದು ಕರೆದರು.
ʻಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪರವಾಗಿ ನಾವು ಎಎಪಿ ಮತ್ತು ಕೇಜ್ರಿವಾಲ್ ಅವರಿಗೆ ನೈತಿಕ ಬೆಂಬಲ ನೀಡಲು ಬಂದಿದ್ದೇವೆ. ಕೇಜ್ರಿವಾಲ್ ಅವರನ್ನು ಅಕ್ರಮ ಮತ್ತು ಅಸಂವಿಧಾನಿಕ ರೀತಿಯಲ್ಲಿ ಬಂಧಿಸಿರುವುದು ಬಿಜೆಪಿಯ ಕೆಟ್ಟ ಉದ್ದೇಶವನ್ನು ತೋರಿಸುತ್ತದೆ,ʼ ಎಂದು ಆರೋಪಿಸಿದರು.