
ಕರ್ತವ್ಯ ಪಥದಲ್ಲಿ ಭಾರತದ ಶಕ್ತಿ ಪ್ರದರ್ಶನ; ವಿಕಸಿತ ಭಾರತಕ್ಕೆ ಸಂಕಲ್ಪ
ಭಾರತೀಯ ಸೇನಾ ಇತಿಹಾಸದಲ್ಲಿ ಗಣರಾಜ್ಯೋತ್ಸವ ಆಚರಣೆ ಸುವರ್ಣಾಕ್ಷರಗಳಲ್ಲಿ ಬರೆಯುವಂತೆ ಜರುಗಿದೆ. ಇದೇ ಮೊದಲ ಬಾರಿಗೆ ಸಿಆರ್‌ಪಿಎಫ್ ಪಡೆಯ ಪುರುಷ ಸೈನಿಕರ ತುಕಡಿಯನ್ನು ಮಹಿಳಾ ಕಮಾಂಡೆಂಟ್ ಮುನ್ನಡೆಸಿದ್ದು ಇತಿಹಾಸ ಸೃಷ್ಟಿಸಿದೆ.
ದೇಶಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ದೆಹಲಿಯ ಐತಿಹಾಸಿಕ 'ಕರ್ತವ್ಯ ಪಥ'ದಲ್ಲಿ ನಡೆದ ಸಮಾರಂಭವು ಸುಸಜ್ಜಿತ ಸೇನಾ ಸಾಮರ್ಥ್ಯ ಮತ್ತು ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಸಾರಿವಂತೆ ಕಂಗೊಳಿಸಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಬಾರಿಯ ಗಣರಾಜ್ಯೋತ್ಸವವು ಕೇವಲ ಆಚರಣೆಯಾಗಿರದೆ, 'ವಿಕಸಿತ ಭಾರತ'ದ ಸಂಕಲ್ಪಕ್ಕೆ ಸಾಕ್ಷಿಯಾಯಿತು.
ಈ ಬಾರಿಯ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಗಣರಾಜ್ಯೋತ್ಸವದ ವಿದೇಶಿ ಅತಿಥಿಗಳಾಗಿ ಭಾಗವಹಿಸಿದರು. ಇದು ಯುರೋಪಿಯನ್ ಒಕ್ಕೂಟದೊಂದಿಗೆ ಭಾರತ ಹೊಂದಿರುವ ಸಂಬಂಧದ ಧ್ಯೋತಕವಾಗಿದೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ವಂದೇ ಮಾತರಂ ಸಂಭ್ರಮ
ಈ ವರ್ಷದ ಆಚರಣೆಯು 'ಸ್ವತಂತ್ರ ಕಾ ಮಂತ್ರ: ವಂದೇ ಮಾತರಂ' ಮತ್ತು 'ಸಮೃದ್ಧಿ ಕಾ ಮಂತ್ರ: ಆತ್ಮನಿರ್ಭರ ಭಾರತ' ಎಂಬ ಘೋಷವಾಕ್ಯಗಳಡಿ ನಡೆಯಿತು. ವಿಶೇಷವಾಗಿ, ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ 'ವಂದೇ ಮಾತರಂ' ಗೀತೆಯ 150ನೇ ವರ್ಷಾಚರಣೆಯು ಇಡೀ ಸಮಾರಂಭದ ಕೇಂದ್ರಬಿಂದುವಾಗಿತ್ತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಗಿದ್ದ ಈ ಗೀತೆಯು ಇಂದು ಪ್ರಗತಿಯ ಧ್ಯೋತಕವಾಗಿ ಮೊಳಗಿತು. ಧ್ವಜಾರೋಹಣದ ನಂತರ ವಾದ್ಯತಂಡದ ಮೂಲಕ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದು ದೇಶಭಕ್ತಿಯ ಅಲೆ ಎಬ್ಬಿಸಿತು.
ಕರ್ತವ್ಯ ಪಥದಲ್ಲಿ ನಡೆದ 90 ನಿಮಿಷಗಳ ಪಥಸಂಚಲನವು ಭಾರತೀಯ ಸೇನೆಯ ಆಧುನಿಕತೆ ಮತ್ತು ಶಕ್ತಿಯನ್ನು ಪ್ರದರ್ಶಿಸಿತು. ಇದರಲ್ಲಿ 'ಆಪರೇಷನ್ ಸಿಂಧೂರ್'ನ ಪ್ರತಿರೂಪ ಗಮನಾರ್ಹವಾಗಿತ್ತು. ದೇಶದ ಮೂರೂ ಸೈನ್ಯಗಳು (ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ) ಜಂಟಿಯಾಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದ ಕಾರ್ಯಾಚರಣೆಯನ್ನು ಪ್ರದರ್ಶಿಸಲಾಯಿತು. ಇದು ಭಾರತದ ಭದ್ರತಾ ನೀತಿ ಮತ್ತು ಶತ್ರುಗಳಿಗೆ ನೀಡುವ ಖಡಕ್ ಸಂದೇಶವನ್ನು ಸ್ಪಷ್ಟಪಡಿಸಿತು. ಇನ್ನು ಆಗಸದಲ್ಲಿ ಯುದ್ಧ ವಿಮಾನಗಳು ರಾಷ್ಟ್ರಧ್ವಜದ ವಿನ್ಯಾಸವನ್ನು ಮೂಡಿಸಿದ ರೀತಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಹೊಸ ಇತಿಹಾಸದ ನಿರ್ಮಾಣ
ಭಾರತೀಯ ಸೇನಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ಪ್ರಸಂಗಕ್ಕೆ ಈ ಸಾಲಿನ ಪರೇಡ್ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ 140ಕ್ಕೂ ಅಧಿಕ ಪುರುಷ ಸೈನಿಕರ ತುಕಡಿಯನ್ನು ಮಹಿಳಾ ಕಮಾಂಡೆಂಟ್ ಮುನ್ನಡೆಸಿದರು. ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಅವರ ನೇತೃತ್ವದ ಈ ತುಕಡಿಯು 'ನಾರಿ ಶಕ್ತಿ' ಕೇವಲ ಘೋಷಣೆಯಲ್ಲ, ಅದು ವಾಸ್ತವ ಎಂಬುದನ್ನು ಸಾಬೀತುಪಡಿಸಿತು. ಇದು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಸಮಾನ ಅವಕಾಶ ಮತ್ತು ಗೌರವಕ್ಕೆ ಧ್ಯೋತಕವಾಗಿದೆ.
ಪ್ರಾಣಿ ಸಂಕುಲದ ವಿಶೇಷ ಪಾತ್ರ
ಈ ಬಾರಿಯ ಪರೇಡ್‌ನಲ್ಲಿ 'ಅನಿಮಲ್ ಕಂಟಿನ್ ಜೆಂಟ್' (ಪ್ರಾಣಿ ತುಕಡಿ) ಪಾಲ್ಗೊಂಡಿದ್ದು ಮತ್ತೊಂದು ವಿಶೇಷ ಆಕರ್ಷಣೆಯಾಗಿತ್ತು. ಯುದ್ಧ ಮತ್ತು ತುರ್ತು ಪರಿಸ್ಥಿತಿಗಳಲ್ಲಿ, ಅದರಲ್ಲೂ ವಿಶೇಷವಾಗಿ ಹಿಮಾಲಯದಂತಹ ಕಠಿಣ ಭೂಪ್ರದೇಶಗಳಲ್ಲಿ ಪ್ರಾಣಿಗಳು ಸಲ್ಲಿಸುವ ಸೇವೆಯನ್ನು ಇಲ್ಲಿ ಸ್ಮರಿಸಲಾಯಿತು. ಈ ತುಕಡಿಯಲ್ಲಿ ಎರಡು ಬ್ಯಾಕ್ಟ್ರಿಯನ್ ಒಂಟೆಗಳು, ನಾಲ್ಕು ರಾಪ್ಟರ್‌ಗಳು, ನಾಲ್ಕು ಝನ್ಸ್ಕಾರ್ ಪೋನಿಗಳು ಮತ್ತು ಭಾರತೀಯ ತಳಿಯ ಸೇನಾ ಶ್ವಾನಗಳು ಭಾಗವಹಿಸಿದ್ದವು. ಇದು ಪ್ರಕೃತಿ ಮತ್ತು ಸೈನ್ಯದ ನಡುವಿನ ಅವಿನಾಭಾವ ಸಂಬಂಧವನ್ನು ಸಾರಿತು.
ಸಾಂಸ್ಕೃತಿಕ ಸ್ತಬ್ಧಚಿತ್ರಗಳ ವೈಭವ
ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಭಾರತದ 'ವೈವಿಧ್ಯತೆಯಲ್ಲಿ ಏಕತೆ' ಬಿಂಬಿಸಿದವು. ಗುಜರಾತ್‌ನ ಸಬರಮತಿ ಆಶ್ರಮದ ಸ್ತಬ್ಧಚಿತ್ರವು ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಸಾರಿತು. ತಮಿಳುನಾಡಿನ ರಾಜ್ಯದ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟುವಿನ ಸಾಹಸವನ್ನು ತೆರೆದಿಟ್ಟಿತು. ಛತ್ತೀಸ್‌ಘಡದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಸ್ತಬ್ಧಚಿತ್ರವು ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ಜನಾಂಗದ ಪಾತ್ರವನ್ನು ನೆನಪಿಸಿತು. ಇದರೊಂದಿಗೆ ವಿವಿಧ ಸಚಿವಾಲಯಗಳ ಯೋಜನೆಗಳು ಮತ್ತು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಸ್ತಬ್ಧಚಿತ್ರಗಳು ಸರ್ಕಾರದ ದೂರದೃಷ್ಟಿಯನ್ನು ಪ್ರತಿಬಿಂಬಿಸಿದವು.
ಶುಭಾಂಶು ಶುಕ್ಲಾಗೆ ಅಶೋಕ್ ಚಕ್ರ
ಸಮಾರಂಭದ ಅತ್ಯಂತ ಭಾವುಕ ಮತ್ತು ಹೆಮ್ಮೆಯ ಕ್ಷಣವೆಂದರೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ 'ಅಶೋಕ ಚಕ್ರ' ಪ್ರಶಸ್ತಿ ಪ್ರದಾನ ಮಾಡಿದ್ದು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ ಶುಕ್ಲಾ ಅವರ ಸಾಧನೆಯು ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಮುನ್ನಡೆಗೆ ಸಾಕ್ಷಿಯಾಗಿದೆ. ಒಬ್ಬ ಸೈನಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿ ಪಡೆಯುವುದು ಯುವ ಪೀಳಿಗೆಗೆ ದೊಡ್ಡ ಸ್ಫೂರ್ತಿಯಾಗಿದೆ.
77ನೇ ಗಣರಾಜ್ಯೋತ್ಸವವು ಭಾರತವು ಒಂದು ಕಡೆ ತನ್ನ ಇತಿಹಾಸ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತಲೇ, ಮತ್ತೊಂದೆಡೆ ಆಧುನಿಕ ತಂತ್ರಜ್ಞಾನ ಮತ್ತು ಸೇನಾ ಶಕ್ತಿಯಲ್ಲಿ ಜಾಗತಿಕ ಮಟ್ಟಕ್ಕೆ ಏರುತ್ತಿರುವುದನ್ನು ತೋರಿಸಿಕೊಟ್ಟಿದೆ.

