
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ; ಇಂದೇ ಕೊನೆಯ ದಿನ
ಸೆಪ್ಟೆಂಬರ್ 15ರ ಕೊನೆಯ ದಿನದಂದು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷಗಳು ಎದುರಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ತಾಂತ್ರಿಕ ದೋಷಗಳಿಂದಾಗಿ ಸೋಮವಾರ (ಸೆಪ್ಟೆಂಬರ್ 15) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಸಾಧ್ಯವಾಗದವರು ಇಂದೇ (ಸೆಪ್ಟೆಂಬರ್ 16) ಸಲ್ಲಿಸಬಹುದು. 2025-26ನೇ ಸಾಲಿನ ಐಟಿಆರ್ ಸಲ್ಲಿಸಲು ಸರ್ಕಾರವು ಗಡುವನ್ನು ಒಂದು ದಿನ ವಿಸ್ತರಿಸಿದೆ.
ಕೊನೆಯ ದಿನದಂದು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ದೋಷಗಳು ಕಂಡುಬಂದಿದ್ದರಿಂದ ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸಲು ಅಡಚಣೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಗಡುವನ್ನು ಮಂಗಳವಾರದವರೆಗೆ ವಿಸ್ತರಿಸಲಾಗಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಎಕ್ಸ್‌ನಲ್ಲಿ (X) ಮಾಡಿದ ಪೋಸ್ಟ್ ಪ್ರಕಾರ, ಸೆಪ್ಟೆಂಬರ್ 15ರವರೆಗೆ ದಾಖಲೆಯ 7.3 ಕೋಟಿಗೂ ಹೆಚ್ಚು ಐಟಿಆರ್‌ಗಳು ಸಲ್ಲಿಕೆಯಾಗಿದ್ದು, ಇದು ಕಳೆದ ವರ್ಷದ 7.28 ಕೋಟಿಗಿಂತ ಹೆಚ್ಚಾಗಿದೆ. "ಹೆಚ್ಚಿನ ಜನರಿಗೆ ಐಟಿಆರ್ ಸಲ್ಲಿಸಲು ಅನುಕೂಲವಾಗುವಂತೆ, ಗಡುವನ್ನು ಒಂದು ದಿನ (ಸೆಪ್ಟೆಂಬರ್ 16, 2025) ವಿಸ್ತರಿಸಲಾಗಿದೆ," ಎಂದು ಸಿಬಿಡಿಟಿ ತಿಳಿಸಿದೆ.
ಕೊನೆಯ ದಿನ ಭಾರೀ ದಟ್ಟಣೆ
2025-26ನೇ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದರಿಂದ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಭಾರೀ ದಟ್ಟಣೆ ಉಂಟಾಗಿತ್ತು. ಜೊತೆಗೆ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಮುಂಗಡ ತೆರಿಗೆ ಪಾವತಿಸಲು ಕೂಡ ಇದೇ ಕೊನೆಯ ದಿನವಾಗಿತ್ತು.
ಬ್ರೌಸರ್ ಸಮಸ್ಯೆಗಳನ್ನು ಪರಿಹರಿಸಲು ಆದಾಯ ತೆರಿಗೆ ಇಲಾಖೆಯು ಸೋಮವಾರ ತಡರಾತ್ರಿ ಮಾರ್ಗದರ್ಶಿಯೊಂದನ್ನು ಹಂಚಿಕೊಂಡಿತ್ತು. ಆದಾಗ್ಯೂ, ಜನರು ಈ ಹಂತಗಳನ್ನು ಅನುಸರಿಸಿದ ನಂತರವೂ ತಾಂತ್ರಿಕ ದೋಷಗಳು ಎದುರಾಗಿದ್ದವು.
ತೆರಿಗೆ ಪಾವತಿಸುವಾಗ ಮತ್ತು ವಾರ್ಷಿಕ ಮಾಹಿತಿ ಹೇಳಿಕೆ (AIS) ಡೌನ್‌ಲೋಡ್ ಮಾಡುವಾಗ ಐ-ಟಿ ಪೋರ್ಟಲ್‌ನಲ್ಲಿ ದೋಷಗಳು ಎದುರಾಗುತ್ತಿವೆ ಎಂದು ಹಲವಾರು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ವ್ಯಕ್ತಿಗಳು ಕಳೆದ ಎರಡು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದರು.