ಇಂಗ್ಲೆಂಡ್‌: ಭಾರತೀಯ ಮೂಲದ ಕನ್ಸರ್ವೇಟಿವ್‌ ಮುಖಂಡರು ವಲಸಿಗರನ್ನು ಹೊರಹಾಕಲು ಬಯಸುತ್ತಾರೆ!
x
ಸುಯೆಲ್ಲಾ ಬ್ರೆವರ್‌ಮನ್, ರಿಷಿ ಸುನಕ್ ಮತ್ತು ಪ್ರೀತಿ ಪಟೇಲ್

ಇಂಗ್ಲೆಂಡ್‌: ಭಾರತೀಯ ಮೂಲದ ಕನ್ಸರ್ವೇಟಿವ್‌ ಮುಖಂಡರು ವಲಸಿಗರನ್ನು ಹೊರಹಾಕಲು ಬಯಸುತ್ತಾರೆ!

ಸುಯೆಲ್ಲಾ ಬ್ರೆವರ್‌ಮನ್, ರಿಷಿ ಸುನಕ್ ಮತ್ತು ಪ್ರೀತಿ ಪಟೇಲ್ ಅವರು ರುವಾಂಡಾ ಮಸೂದೆಯ ದೊಡ್ಡ ಪ್ರತಿಪಾದಕರು. ಯುಕೆ ಸುಪ್ರೀಂ ಕೋರ್ಟ್ ಅಸುರಕ್ಷಿತ ಎಂದು ಕರೆದಿರುವ ದೇಶವಾದ ರುವಾಂಡಾಕ್ಕೆ ಅಕ್ರಮ ವಲಸಿಗರು ಮತ್ತು ಆಶ್ರಯ ಬೇಡುವವರನ್ನು ಗಡೀಪಾರು ಮಾಡುವುದನ್ನು ಬೆಂಬಲಿಸುತ್ತಾರೆ.


ಇಂಗ್ಲೆಂಡಿನಲ್ಲಿ ಜುಲೈ 4 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ರಮ ಮತ್ತು ಅಕ್ರಮ ವಲಸೆ ಪ್ರಮುಖ ವಿಷಯವಾಗಿದೆ. ಅಭಿಪ್ರಾಯ ಸಂಗ್ರಹಗಳ ಪ್ರಕಾರ ಅಧಿಕಾರವನ್ನು ಕಳೆದುಕೊಳ್ಳಲಿರುವ ಕನ್ಸರ್ವೇಟಿವ್ ಪಕ್ಷ, ತನ್ನ 14 ವರ್ಷಗಳ ಆಡಳಿತ ಅವಧಿಯಲ್ಲಿ ವಲಸೆಯನ್ನು ಕಡಿಮೆ ಮಾಡುವ ಭರವಸೆ ನೀಡಿತ್ತು. ಭಾರತೀಯ ಮೂಲದ ರಿಷಿ ಸುನಕ್ ಅವರು ಬ್ರಿಟಿಷ್ ಪ್ರಧಾನಿಯಾದಾಗ ಅವರು ಮಾಡಿದ ಐದು ಪ್ರತಿಜ್ಞೆಗಳಲ್ಲಿ ಒಂದು ವಲಸೆ ಕಡಿಮೆಗೊಳಿಸುವುದಾಗಿತ್ತು.

ಕಳೆದ ದಶಕದಿಂದೀಚೆಗೆ ಇಂಗ್ಲೆಂಡಿಗೆ ವಲಸೆ ಹೋಗುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚು ಇದೆ. ಅವರು ಸಕ್ರಮ ಮತ್ತು ಅಕ್ರಮ ವಲಸೆಯ ಎರಡೂ ಪಟ್ಟಿಗಳಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅದರಲ್ಲಿ ವಿದ್ಯಾರ್ಥಿಗಳು, ಕೆಲಸದ ಪರವಾನಗಿ ಪಡೆದವರು ಮತ್ತು ಅವಧಿ ಮೀರಿದ ವೀಸಾ ಹೊಂದಿರುವವರು ಇದ್ದಾರೆ. ಇಂಗ್ಲಿಷ್ ಕಾಲುವೆಯನ್ನು ದಾಟುವ ಸಣ್ಣ ದೋಣಿಗಳಲ್ಲಿಯೂ ಅವರು ಇರುತ್ತಾರೆ. ಆದ್ದರಿಂದ, ವಲಸೆ ನೀತಿಯಲ್ಲಿನ ಯಾವುದೇ ಬದಲಾವಣೆಯು ಭಾರತೀಯರ ಮೇಲೆ ನೇರ ಪರಿಣಾಮ ಬೀರುತ್ತದೆ.

ರುವಾಂಡಾ ಬಿಲ್: ಚುನಾವಣೆಯನ್ನು ಘೋಷಿಸುವ ಮೊದಲು ಬ್ರಿಟಿಷ್ ಸಂಸತ್ತಿನಲ್ಲಿ ವಿವಾದಾತ್ಮಕ ರುವಾಂಡಾ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಮಸೂದೆಯು ಅಕ್ರಮ ವಲಸಿಗರು ಮತ್ತು ಆಶ್ರಯ ಪಡೆದವರನ್ನುಯುಕೆ ಸುಪ್ರೀಂ ಕೋರ್ಟ್ ಅಸುರಕ್ಷಿತ ಎಂದು ಹೇಳಿರುವ ರುವಾಂಡಾಕ್ಕೆ ಗಡಿಪಾರು ಮಾಡುತ್ತದೆ.

ಇಂಗ್ಲೆಂಡಿನಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಸಾವಿರಾರು ಮೈಲು ದೂರದಲ್ಲಿರುವ ಪೂರ್ವ ಆಫ್ರಿಕಾದ ದೇಶಕ್ಕೆ ಕಳುಹಿಸುವ ಯೋಜನೆಯು ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರವೊಂದು ತನ್ನ ವಲಸೆ ಸಮಸ್ಯೆಯನ್ನು ಹೊರಗುತ್ತಿಗೆಗೆ ನೀಡುವ ಒಂದು ಅನನ್ಯ ಪ್ರಯತ್ನವಾಗಿದೆ. ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ, ತಮ್ಮ 'ವಲಸಿಗ' ಸಮಸ್ಯೆಯನ್ನು ಬಗೆಹರಿಸಲು ಮಾರ್ಗಗಳನ್ನು ಹುಡುಕುತ್ತಿರುವ ಇತರ ದೇಶಗಳಿಗೆ ಹೊಸ ಮಾದರಿಯೊಂದನ್ನು ನೀಡಲಿದೆ.

ರುವಾಂಡಾ ಉಪಕ್ರಮದ ವ್ಯಂಗ್ಯವೇನೆಂದರೆ, ಈ ಮಸೂದೆ ಜಾರಿಗೆ ಹೆಚ್ಚು ಶ್ರಮಿಸಿದ ಮೂವರು ಸ್ವತಃ ಯುಕೆಗೆ ವಲಸೆ ಬಂದವರು; ಪ್ರಧಾನ ಮಂತ್ರಿ ರಿಷಿ ಸುನಕ್, ಮಾಜಿ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್‌ಮನ್ ಮತ್ತು ಗೃಹ ಕಚೇರಿಯಲ್ಲಿ ಅವರ ಹಿಂದಿನ ಅಧಿಕಾರಿ ಪ್ರೀತಿ ಪಟೇಲ್. ̤ ಈ ಮೂವರು ಕನ್ಸರ್ವೇಟಿವ್ ರಾಜಕಾರಣಿಗಳು ಬ್ರಿಟನ್‌ಗೆ ವಲಸೆ ಬಂದ ಭಾರತೀಯರ ಮಕ್ಕಳು. ಉತ್ತಮ ಜೀವನವನ್ನು ಹುಡುಕಿಕೊಂಡು ಇಂಗ್ಲೆಂಡಿಗೆ ಬಂದ ತಮ್ಮ ಪೋಷಕರಂತಹ ಜನರ ಬಗ್ಗೆ ಇವರು ಯಾವುದೇ ಸಹಾನುಭೂತಿ ಹೊಂದಿಲ್ಲ.

ಪ್ರೀತಿ ಪಟೇಲ್ ಅವರ ಕಲ್ಪನೆ: 1960 ರ ದಶಕದಲ್ಲಿ ಇಂಗ್ಲೆಂಡಿನಲ್ಲಿ ರುವಾಂಡಾ ಮಸೂದೆಯಂಥ ಯಾವುದೇ ಕಾನೂನು ಇದ್ದಿದ್ದರೆ, ಈ ಮೂವರ ಪೋಷಕರಲ್ಲಿ ಯಾರೂ ಇಂಗ್ಲೆಂಡಿನಲ್ಲಿ ನೆಲೆಸಲು ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲರು ಯಾವುದೋ ಆಫ್ರಿಕದ ಅಥವಾ ಏಷ್ಯದ ದೇಶದಲ್ಲಿ ನರಳುತ್ತಿರಬೇಕಿತ್ತು ಮತ್ತು ಇತರ ವಲಸಿಗರು ಬ್ರಿಟನ್ ಅನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವುದುದನ್ನು ತಡೆಯುವ ಸ್ಥಿತಿಯಲ್ಲಿ ಅವರು ಇರುತ್ತಿರಲಿಲ್ಲ.

ರುವಾಂಡಾ ಆಶ್ರಯ ಯೋಜನೆಯು ಎರಡನೇ ತಲೆಮಾರಿನ ಭಾರತೀಯ ವಲಸಿಗರಾದ ಪ್ರೀತಿ ಪಟೇಲ್ ಅವರ ಕೂಸು. ಗುಜರಾತಿನಲ್ಲಿ ಜನಿಸಿದ ಪಟೇಲ್‌ ಅವರ ಅಜ್ಜಿ-ಅಜ್ಜ, ಭಾರತ ಸ್ವಾತಂತ್ರ್ಯ ಗಳಿಸುವ ಮುನ್ನ ಪೂರ್ವ ಆಫ್ರಿಕಾದ ಉಗಾಂಡಾಕ್ಕೆ ವಲಸೆ ಹೋದರು. ಆಕೆಯ ಪೋಷಕರಾದ ಸುಶೀಲ್ ಮತ್ತು ಅಂಜನಾ ಪಟೇಲ್ , 1960 ರ ದಶಕದಲ್ಲಿ ಉಗಾಂಡಾದ ಕಂಪಾಲಾದಿಂದ ಇಂಗ್ಲೆಂಡಿಗೆ ವಲಸೆ ಬಂದರು; ಲಂಡನ್ನಿನ ಹೊರಗಿರುವ ಹರ್ಟ್‌ಫೋರ್ಡ್‌ಶೈರ್‌ನಲ್ಲಿ ನೆಲೆಸಿದರು. 1972 ರಲ್ಲಿ ಯುಕೆಯಲ್ಲಿ ಜನಿಸಿದ ಪ್ರೀತಿ ಪಟೇಲ್, ಉತ್ತಮ ಜೀವನವನ್ನು ಹುಡುಕುತ್ತ ವಲಸೆ ಹೋಗುವವರಿಗೆ ಹೊಸಬರೇನಲ್ಲ.

ಮೋದಿ ಅಭಿಮಾನಿ: ಪ್ರೀತಿ ಪಟೇಲ್ ಅವರ ಸಂಸದೀಯ ವೃತ್ತಿಜೀವನ‌ 2010 ರಲ್ಲಿ ಪ್ರಾರಂಭವಾಯಿತು. ಅವರು ಎಸ್ಸೆಕ್ಸ್‌ನ ವಿಥಮ್‌ನ ಕನ್ಸರ್ವೇಟಿವ್ ಸ್ಥಾನದಿಂದ ಆಯ್ಕೆಯಾದರು. ಪಕ್ಷದ 'ಹೊಸ ಬಲಪಂಥೀಯ'ರ ಭಾಗವೆಂದು ಪರಿಗಣಿಸಲ್ಪಟ್ಟರು. 2015 ರಲ್ಲಿ ಬ್ರೆಕ್ಸಿಟ್ ಒಪ್ಪಂದದ ಸಮಯದಲ್ಲಿ 'ವೋಟ್ ಲೀವ್'ನ ಪ್ರಮುಖ ಪ್ರಚಾರಕಿಯಾದರು. ಇದರಿಂದ ಭವಿಷ್ಯದ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನಿಕಟವರ್ತಿಯಾದರು.

ಜುಲೈ 2019 ರಲ್ಲಿ ಪ್ರೀತಿ ಪಟೇಲ್ ಅವರನ್ನು ಬೋರಿಸ್‌ ಜಾನ್ಸನ್ ಗೃಹ ಕಾರ್ಯದರ್ಶಿಯಾಗಿ ನೇಮಿಸಿದರು.‌ ಅವರು ದೇಶದ ನಾಲ್ಕು ಪ್ರಮು ಖ ಕಚೇರಿಗಳಲ್ಲಿ ಒಂದರ ಮುಖ್ಯಸ್ಥರ ಸ್ಥಾನ ಹೊಂದಿರುವ ಭಾರತೀಯ ಮೂಲದ ಮೊದಲ ವ್ಯಕ್ತಿಯಾದರು.

ಮಾಜಿ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರನ್ನುಅನುಕರಿಸುವ ಪಟೇಲ್, ನರೇಂದ್ರ ಮೋದಿಯವರ ಅನುಯಾಯಿ. 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರನ್ನು ಟೀಕಿಸುವ ಏಕಪಕ್ಷೀಯ ವರದಿಯನ್ನು ಪ್ರಕಟಿಸಲಾಗಿದೆ ಎಂದು ಬಿಬಿಸಿಗೆ ದೂರು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಪಟೇಲ್ ಅವರಿಗೆ ಜನವರಿ 2015ರಲ್ಲಿ ಅಹಮದಾಬಾದ್‌ನಲ್ಲಿ 'ಜ್ಯುವೆಲ್ಸ್ ಆಫ್ ಗುಜರಾತ್' ಪ್ರಶಸ್ತಿಯನ್ನು ನೀಡಲಾಯಿತು.

ಹುದ್ದೆ ಕಳೆದುಕೊಂಡ‌ ಪಟೇಲ್: ಅವರು ಏಪ್ರಿಲ್ 2022 ರಲ್ಲಿ ರುವಾಂಡಾ ರಾಜಧಾನಿ ಕಿಗಾಲಿಗೆ ಭೇಟಿ ನೀಡಿ, ರುವಾಂಡಾ ಆಶ್ರಯ ಯೋಜನೆಗೆ ಸಹಿ ಹಾಕಿದರು. ವಲಸಿಗರನ್ನು 4,000 ಮೈಲು ದೂರದಲ್ಲಿರುವ ರುವಾಂಡಾಕ್ಕೆ ಚಾರ್ಟರ್ಡ್ ವಿಮಾನಗಳಲ್ಲಿ ಕಳುಹಿಸುವ ಅವರ ಯೋಜನೆಯನ್ನು ಹಲವು ಪ್ರತಿಷ್ಠಾನಗಳು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದರೂ, ಟೋರಿ ಬಲಪಂಥಿಯರಿಗೆ ಮೆಚ್ಚುಗೆ ಆಯಿತು.

ಆದರೆ, ರುವಾಂಡಾ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುನ್ನವೇ ಕೋವಿಡ್ ಸಮಯದಲ್ಲಿ ಡೌನಿಂಗ್ ಸ್ಟ್ರೀಟ್‌ನಲ್ಲಿ ಪಾರ್ಟಿ ಮಾಡಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ಜಾನ್ಸನ್ ರಾಜೀನಾಮೆ ನೀಡಬೇಕಾಯಿತು. ಇದರಿಂದ ಗೃಹ ಸಚಿವಾಲಯದಲ್ಲಿ ಪಟೇಲ್ ಅವರ ಅಧಿಕಾರ ಕೊನೆಗೊಂಡಿತು.

ಸುಯೆಲ್ಲಾ ಬ್ರೆವರ್‌ಮನ್: ಪಟೇಲ್ ಅವರ ಜಾಗಕ್ಕೆ ಬಂದವರು- ಎರಡನೇ ತಲೆಮಾರಿನ ಮತ್ತೊಬ್ಬ ಭಾರತೀಯ ವಲಸಿಗರಾದ ಸುಯೆಲ್ಲಾ‌ ಬ್ರೆವರ್‌ ಮನ್‌. ಸುಯೆಲ್ಲಾ ಅವರ ಮೊದಲ ಹೆಸರು- ಸ್ಯೂ ಎಲ್ಲೆನ್ ಫೆರ್ನಾಂಡಿಸ್ ; ಭಾರತೀಯ ಮೂಲದವರಾದ ಉಮಾ ಮತ್ತು ಕ್ರಿಸ್ಟೀ ಫರ್ನಾಂಡಿಸ್ ಅವರ ಪುತ್ರಿ. 1960 ರ ದಶಕದಲ್ಲಿಉಮಾ ಮಾರಿಷಸ್ ಮತ್ತು ಕ್ರಿಸ್ಟೀ ಫರ್ನಾಂಡಿಸ್ ಕೀನ್ಯಾದಿಂದ ಬ್ರಿಟನ್‌ಗೆ ವಲಸೆ ಬಂದರು. ಸುಯೆಲ್ಲಾ ಅವರ ತಾಯಿ ಉಮಾ, ಹಿಂದೂ ತಮಿಳು ಮಾರಿಷಸ್ ಮೂಲದವರು; ತಂದೆ ಕ್ರಿಸ್ಟಿ ಗೋವಾದ ಕ್ರಿಶ್ಚಿಯನ್. ಯುಕೆಗೆ ತೆರಳುವ ಮೊದಲು ಕೀನ್ಯಾಕ್ಕೆ ವಲಸೆ ಹೋಗಿದ್ದರು.

ಆದ್ದರಿಂದ, ಸೂಯೆಲ್ಲಾ ವಲಸೆಗೆ ಹೊಸಬರೇನಲ್ಲ.

ಪ್ರೀತಿ ಪಟೇಲ್‌ ಅವರನ್ನು ಬಲಪಂಥೀಯರು ಎಂದು ಯಾರಾದರೂ ಅಂದುಕೊಂಡಿದ್ದರೆ, ಅವರು ಸುಯೆಲ್ಲಾಅವರನ್ನು ಭೇಟಿಯಾಗಿಲ್ಲ ಎಂದು ಭಾವಿಸಬೇಕಾಗುತ್ತದೆ. ರುವಾಂಡಾ ಯೋಜನೆಯನ್ನು ಉಸಿರನ್ನಾಗಿ ಮಾಡಿಕೊಂಡ ಆಕೆ, ದೋಣಿಗಳಲ್ಲಿ ವಲಸೆ ಬರುವುದನ್ನು ನಿಲ್ಲಿಸುವುದನ್ನು ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಳು. ಅಕ್ರಮ ವಲಸಿಗರು ಮತ್ತು ಆಶ್ರಯಿಸುವವರಿಂದ ತುಂಬಿದ ವಿಮಾನ ಇಂಗ್ಲೆಂಡಿನಿಂದ ರುವಾಂಡಾಕ್ಕೆ ಹಾರುವ ದಿನ ತನ್ನ 'ಗೀಳು' ಮತ್ತು 'ಕನಸು' ಎಂದು ಹೇಳಿದಳು.

ನಿರಾಶ್ರಿತರ ಬಗ್ಗೆ ಕನಿಷ್ಠ ಸಹಾನುಭೂತಿಯಿಲ್ಲದ ಆಕೆ, ಅವರನ್ನು 'ಹಿಂಡುಗಳು' ಮತ್ತು 'ಅತಿಕ್ರಮಣ' ಎಂದು ಹೇಳಿದ್ದರು. ಅಂತಹ ʼದ್ವೇಷʼ ಹಾಗೂ ಜನಾಂಗೀಯತೆಯ ಪದ ಬಳಕೆ ಮಾಡಿದ್ದಕ್ಕೆ ತಮ್ಮದೇ ಕನ್ಸರ್ವೇಟಿವ್ ಪಕ್ಷದ ಸಂಸದರು ಮತ್ತು ಗೆಳೆಯರಿಂದ ಖಂಡಿಸಲ್ಪಟ್ಟಿದ್ದರು.

ಭಾರತದ ಅಭಿಮಾನಿಯಲ್ಲ: ಪ್ರೀತಿ ಪಟೇಲ್‌ ಅವರಂತೆ, ಸುಯೆಲ್ಲಾ ಕೂಡ ಭಾರತದ ಅಭಿಮಾನಿಯಲ್ಲ.ಅವರು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ವಿರುದ್ಧವಾಗಿದ್ದರು. ಇದರಿಂದ ಇಂಗ್ಲೆಂಡಿಗೆ ವಲಸೆ ಹೆಚ್ಚುತ್ತದೆ ಮತ್ತು ವೀಸಾ ಅವಧಿ ಮುಗಿದಿದ್ದರೂ ನೆಲೆಸಿ, ಅಕ್ರಮ ವಲಸಿಗರಾದವರು ಹೆಚ್ಚುತ್ತಾರೆ ಎಂದು ಹೇಳಿದರು. ಅವರೆಲ್ಲರನ್ನೂ ರುವಾಂಡಾಕ್ಕೆ ಕಳುಹಿಸಬೇಕೆಂದು ಹೇಳಿದ್ದರು.

ರುವಾಂಡಾ ಯೋಜನೆಯ ತ್ರಿಮೂರ್ತಿಗಳಲ್ಲಿ ಮೂರನೆಯವರು ರಿಷಿ ಸುನಕ್.

ರಿಷಿ ಸುನಕ್: ಬ್ರಿಟನ್ನಿನ ಮೊದಲ ವರ್ಣೀಯ ಪ್ರಧಾನಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ ಸುನಕ್ ಕೂಡ ವಲಸಿಗರ ಕೂಸು. ಅವರ ತಂದೆಯ ಅಜ್ಜ-ಅಜ್ಜಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರನ್‌ವಾಲಾದಿಂದ ಬಂದವರು ಮತ್ತು ತಾಯಿಯ ಅಜ್ಜ-ಅಜ್ಜಿ ಭಾರತದ ಪಂಜಾಬಿನ ಲುಧಿಯಾನದವರು. ಅವರ ಅಜ್ಜ-ಅಜ್ಜಿ ಪೂರ್ವ ಆಫ್ರಿಕಾಕ್ಕೆ ವಲಸೆ ಹೋದರು; ಸುನಕ್ ಅವರ ತಂದೆ ಯಶ್ವೀರ್ ಕೀನ್ಯಾದಲ್ಲಿ ಮತ್ತು ತಾಯಿ ಉಷಾ ತಾಂಜಾನಿಯಾದಲ್ಲಿ ಜನಿಸಿದರು.

ಸುನಕ್ ಕುಟುಂಬ 1960 ರ ದಶಕದಲ್ಲಿ ಯುಕೆಗೆ ಸ್ಥಳಾಂತರಗೊಂಡಿತು. ರಿಷಿ 1980 ರಲ್ಲಿ ದಕ್ಷಿಣ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದರು.

ಸುನಕ್ ಪ್ರಧಾನಿಯಾದ ಕೆಲವು ತಿಂಗಳುಗಳ ನಂತರ ಜನವರಿ 2023 ರಲ್ಲಿ ಇಂಗ್ಲಿಷ್ ಚಾನೆಲ್ ಅನ್ನು ದಾಟುವ ಸಣ್ಣ ದೋಣಿಗಳನ್ನು ತಡೆಯಲು ರುವಾಂಡಾ ಮಸೂದೆಯನ್ನು ಮುಂದೊತ್ತಿದರು.

ಜನಪ್ರಿಯತೆ ಕುಸಿತ: ಅಧಿಕಾರ ವಹಿಸಿಕೊಂಡ ಮೊದಲ ವರ್ಷದ ಅಂತ್ಯದ ವೇಳೆಗೆ ಸುನಕ್ ಅವರ ಸರ್ಕಾರ ಯಾವುದೇ ಪ್ರತಿಜ್ಞೆಗಳನ್ನು ಪೂರೈಸುವಲ್ಲಿ ವಿಫಲವಾಗಿತ್ತು. ಕನ್ಸರ್ವೇಟಿವ್ ಪಕ್ಷದ ಜನಪ್ರಿಯತೆ ಜೊತೆಗೆ ಅವರ ಸ್ವಂತ ಜನಪ್ರಿಯತೆಯೂ ಕುಸಿದಿದೆ. ರುವಾಂಡಾ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವುದನ್ನು ಪ್ರತಿಷ್ಠೆಯ ವಿಷಯವಾಗಿಸಿಕೊಂಡರು. ಅದಕ್ಕಿಂತ ಮುಖ್ಯವಾಗಿ, ಮುಂಬರುವ ಚುನಾವಣೆಯಲ್ಲಿ ಇದು ಅವರನ್ನು ರಕ್ಷಿಸಲಿದೆ ಎಂದು ಆಶಿಸಿದರು.

ಈ ಯೋಜನೆಯು ಬ್ರಿಟಿಷ್ ಬೊಕ್ಕಸಕ್ಕೆ 370 ದಶಲಕ್ಷ ಪೌಂಡ್‌ಗಳಷ್ಟು ದುಬಾರಿಯಾಗಿದ್ದು, ಇದು ಅಗತ್ಯವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ರುವಾಂಡಾ ಬ್ರಿಟಿಷ್ ವಲಸಿಗರನ್ನು ಭಾರಿ ಶುಲ್ಕ ಪಡೆದು ತೆಗೆದುಕೊಳ್ಳುತ್ತಿದೆ. ಮೊದಲ 300 ವಲಸಿಗರಿಗೆ 1.8 ದಶ ಲಕ್ಷ ಪೌಂಡ್‌ ವೆಚ್ಚ ಮಾಡಬೇಕಿದೆ. ಕೆಲವು ವಿಮಾನಗಳಲ್ಲಿ ವಲಸಿಗರನ್ನು ದೇಶದಿಂದ ಹೊರಗೆ ಕಳಿಸಿದರೆ, ಅಕ್ರಮವಾಗಿ ಪ್ರವೇಶಿಸುವರು ಹಿಂಜರಿಯುತ್ತಾರೆ ಎನ್ನುವುದು ರುವಾಂಡಾ ಯೋಜನೆಯ ಹಿಂದಿನ ತರ್ಕ.

ಕಾರ್ಮಿಕರು ಮತ್ತು ವಲಸೆ: ಮಸೂದೆ ʻನಿಷ್ಪರಿಣಾಮಕಾರಿ, ಅನಗತ್ಯವಾಗಿ ಕ್ರೂರ ಮತ್ತು ದುಬಾರಿʼ ಎಂದು ಟೀಕಿಸಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯೋಜನೆಯನ್ನು ಕೈಬಿಡುವುದಾಗಿ ಲೇಬರ್ ಪಕ್ಷ ಭರವಸೆ ನೀಡಿದೆ. ಬದಲಿಗೆ ಹೆಚ್ಚು ಮಾನವೀಯ ಮತ್ತು ಕ್ರಮಬದ್ಧವಾದ ವಲಸೆ ವ್ಯವಸ್ಥೆಯನ್ನು ತರುತ್ತೇವೆ ಎಂದು ಹೇಳಿದೆ.

ವಿಶ್ವ ಸಂಸ್ಥೆಯ ನಿರಾಶ್ರಿತರ ಕುರಿತ 1951 ಸಮಾವೇಶದ ಸ್ಥಾಪಕ ಸಹಿದಾರರಲ್ಲಿ ಯುಕೆ ಒಂದು. ದೇಶ ಈವರೆಗೆ ವಲಸಿಗರು ಮತ್ತು ಆಶ್ರಯ ಕೋರಿ ಬರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಕೊಳ್ಳುತ್ತಿದೆ. ಅವರನ್ನು ಘನತೆ, ಗೌರವ ಮತ್ತು ಮಾನವೀಯತೆಯಿಂದ ನಡೆಸಿಕೊಳ್ಳುತ್ತಿದೆ.

ಈ ಮೂವರು ಭಾರತೀಯ ಮೂಲದ ವಲಸಿಗರು ಈ ಮೌಲ್ಯಗಳಿಂದ ದೂರ ಸರಿದ ಮತ್ತು ಬ್ರಿಟಿಷ್ ನೀತಿ ನಿರೂಪಣೆಯಲ್ಲಿ ಅಸಂಬದ್ಧ ಮತ್ತು ಅಮಾನವೀಯ ದುಸ್ಸಾಹಸವನ್ನು ನಡೆಸಿದವರಾಗಿ ಇತಿಹಾಸದಲ್ಲಿ ದಾಖಲಾಗುತ್ತಾರೆ.

Read More
Next Story