ಅಕ್ರಮ ಕೆಮ್ಮಿನ ಸಿರಪ್ ದಂಧೆ: ವಜಾಗೊಂಡ ಪೊಲೀಸ್ ಪೇದೆಯ 7 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಕಂಡು ಅಧಿಕಾರಿಗಳು ದಂಗು!
x

ವಜಾಗೊಂಡ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೆಬಲ್ ಅಲೋಕ್ ಪ್ರತಾಪ್ ಸಿಂಗ್ ಅವರ ಭವ್ಯ ನಿವಾಸ.

ಅಕ್ರಮ ಕೆಮ್ಮಿನ ಸಿರಪ್ ದಂಧೆ: ವಜಾಗೊಂಡ ಪೊಲೀಸ್ ಪೇದೆಯ 7 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಕಂಡು ಅಧಿಕಾರಿಗಳು ದಂಗು!

ಯುರೋಪಿಯನ್ ಶೈಲಿಯ ವಿನ್ಯಾಸ, ಸುರುಳಿ ಆಕಾರದ ಮೆಟ್ಟಿಲುಗಳು, ವಿಂಟೇಜ್ ದೀಪಗಳು ಮತ್ತು ಅತ್ಯಮೂಲ್ಯ ಪೀಠೋಪಕರಣಗಳಿಂದ ಕಂಗೊಳಿಸುತ್ತಿದ್ದ ಈ ಮನೆಯ ಒಟ್ಟು ಮೌಲ್ಯ ಸುಮಾರು 7 ಕೋಟಿ ರೂ. ಎಂದು ಅಂದಾಜಿಸಲಾಗಿದೆ.


Click the Play button to hear this message in audio format

ಅಕ್ರಮವಾಗಿ ಕೋಡಿನ್ ಮಿಶ್ರಿತ ಕೆಮ್ಮಿನ ಸಿರಪ್ (Cough Syrup) ಮಾರಾಟ ಮಾಡುತ್ತಿದ್ದ ದಂಧೆಯ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಪ್ರಕರಣದ ಆರೋಪಿಯಾಗಿರುವ ವಜಾಗೊಂಡ ಪೊಲೀಸ್ ಪೇದೆ ಅಲೋಕ್ ಪ್ರತಾಪ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಲಕ್ನೋದಲ್ಲಿರುವ ಅಲೋಕ್ ಅವರ ಬಂಗಲೆಯನ್ನು ಪ್ರವೇಶಿಸಿದ ಅಧಿಕಾರಿಗಳು, ಅಲ್ಲಿನ ವೈಭವೋಪರಿತ ಜೀವನಶೈಲಿಯನ್ನು ಕಂಡು ಕ್ಷಣಕಾಲ ಅವಾಕ್ಕಾಗಿದ್ದಾರೆ.

ಯುರೋಪಿಯನ್ ಶೈಲಿಯ ವಿನ್ಯಾಸ, ಸುರುಳಿ ಆಕಾರದ ಮೆಟ್ಟಿಲುಗಳು, ವಿಂಟೇಜ್ ದೀಪಗಳು ಮತ್ತು ಅತ್ಯಮೂಲ್ಯ ಪೀಠೋಪಕರಣಗಳಿಂದ ಕಂಗೊಳಿಸುತ್ತಿದ್ದ ಈ ಮನೆಯ ಒಟ್ಟು ಮೌಲ್ಯ ಸುಮಾರು 7 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಎರಡು ಅಂತಸ್ತಿನ ಬಂಗಲೆ

ಲಕ್ನೋ-ಸುಲ್ತಾನ್‌ಪುರ ಹೆದ್ದಾರಿಯ ಅಹ್ಮಮಾವು ಪ್ರದೇಶದಲ್ಲಿರುವ ಈ ಎರಡು ಅಂತಸ್ತಿನ ಬಂಗಲೆಯು ಬರೋಬ್ಬರಿ 7,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಮನೆಯ ಮುಂಭಾಗದಲ್ಲಿ ಎತ್ತರವಾದ ಪಿಲ್ಲರ್‌ಗಳು, ವಿಶಾಲವಾದ ಬಾಲ್ಕನಿಗಳಿಗೆ ಕಲಾತ್ಮಕ ರೈಲಿಂಗ್‌ಗಳು ಮತ್ತು ಒಳಭಾಗದಲ್ಲಿ ದುಬಾರಿ ಪೇಂಟಿಂಗ್‌ ಹಾಗೂ ಹೈ-ಎಂಡ್ ಫಿಟ್ಟಿಂಗ್‌ಗಳನ್ನು ಅಳವಡಿಸಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಕೇವಲ ಮನೆಯ ಒಳಾಂಗಣ ವಿನ್ಯಾಸಕ್ಕಾಗಿಯೇ 1.5 ರಿಂದ 2 ಕೋಟಿ ರೂ. ಖರ್ಚು ಮಾಡಲಾಗಿದ್ದು, ಭೂಮಿಯ ಬೆಲೆ ಹೊರತುಪಡಿಸಿ ಕಟ್ಟಡದ ನಿರ್ಮಾಣಕ್ಕೇ ಸುಮಾರು 5 ಕೋಟಿ ರೂ. ವೆಚ್ಚವಾಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಾಳಿಯ ವೇಳೆ ಪ್ರಾದಾ ಮತ್ತು ಗುಸ್ಸಿ (Gucci) ಬ್ರ್ಯಾಂಡ್‌ನ ಹ್ಯಾಂಡ್‌ಬ್ಯಾಗ್‌ಗಳು, ರಾಡೋ ವಾಚ್‌ಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎರಡು ಬಾರಿ ವಜಾಗೊಂಡಿದ್ದರು

ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದ ಅಲೋಕ್ ಪ್ರತಾಪ್ ಸಿಂಗ್, ಈ ಹಿಂದೆಯೂ ಎರಡು ಬಾರಿ ಸೇವೆಯಿಂದ ವಜಾಗೊಂಡಿದ್ದರು. 2006ರಲ್ಲಿ ಲೂಟಿ ಮಾಡಿದ 4 ಕೆಜಿ ಚಿನ್ನದ ಪ್ರಕರಣದಲ್ಲಿ ಮೊದಲ ಬಾರಿಗೆ ಬಂಧಿತರಾಗಿದ್ದ ಅವರು, ನಂತರ ಖುಲಾಸೆಗೊಂಡು ಸೇವೆಗೆ ಮರಳಿದ್ದರು. ಆದರೆ 2019ರಲ್ಲಿ ಮತ್ತೆ ಅಮಾನತುಗೊಂಡ ಬಳಿಕ ಅವರು ಈ ಅಕ್ರಮ ಕಾಫ್ ಸಿರಪ್ ದಂಧೆಗೆ ಇಳಿದಿದ್ದರು ಎನ್ನಲಾಗಿದೆ.

ರಾಜಕೀಯ ಮತ್ತು ಪೊಲೀಸ್ ವಲಯದಲ್ಲಿರುವ ತಮ್ಮ ಹಳೆಯ ಸಂಪರ್ಕಗಳನ್ನು ಬಳಸಿಕೊಂಡು, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಸಗಟು ರೂಪದಲ್ಲಿ ಕೆಮ್ಮಿನ ಸಿರಪ್ ಸರಬರಾಜು ಮಾಡುವ ಜಾಲವನ್ನು ಇವರು ನಿಯಂತ್ರಿಸುತ್ತಿದ್ದರು. ಪ್ರಸ್ತುತ ಡಿಸೆಂಬರ್ 2 ರಂದು ಎಸ್‌ಟಿಎಫ್ ಪೊಲೀಸರಿಂದ ಬಂಧಿತರಾಗಿರುವ ಅವರು ಲಕ್ನೋ ಜೈಲನಲ್ಲಿದ್ದಾರೆ.

ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡಬಾರದ ಕೋಡಿನ್ ಅಂಶವಿರುವ ಕೆಮ್ಮಿನ ಸಿರಪ್‌ಗಳನ್ನು ಅಮಲು ಪದಾರ್ಥವಾಗಿ ಬಳಸಲಾಗುತ್ತಿದೆ. ಇಂತಹ ಔಷಧಗಳನ್ನು ಅಕ್ರಮವಾಗಿ ದಾಸ್ತಾನು ಮತ್ತು ವಿತರಣೆ ಮಾಡುತ್ತಿದ್ದ ಜಾಲವನ್ನು ಭೇದಿಸಲು ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿದೆ. ಇದುವರೆಗೆ ರಾಜ್ಯಾದ್ಯಂತ 4.5 ಕೋಟಿ ರೂ. ಮೌಲ್ಯದ 3.5 ಲಕ್ಷ ಬಾಟಲಿ ಕಾಫ್ ಸಿರಪ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, 32 ಜನರನ್ನು ಬಂಧಿಸಲಾಗಿದೆ. ಈ ದಂಧೆಯ ಪ್ರಮುಖ ಆರೋಪಿ ಶುಭಮ್ ಜೈಸ್ವಾಲ್ ದುಬೈಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಆತನ ತಂದೆ ಭೋಲಾ ಜೈಸ್ವಾಲ್ ಅವರನ್ನು ವಶಕ್ಕೆ ಪಡೆಯಲಾಗಿದೆ.

Read More
Next Story