
ಹೈಪರ್ಲೂಪ್ ಪಾಡ್ಗಳು (ಎಐ ರಚಿತ ಚಿತ್ರ)
Hyperloop | ಬೆಂಗಳೂರಿನಿಂದ ಚೆನ್ನೈಗೆ ಕೇವಲ 30 ನಿಮಿಷ? ಹೈಪರ್ ಲೂಪ್ ಟೆಸ್ಟ್ ಟ್ರ್ಯಾಕ್ ಅಭಿವೃದ್ಧಿ
ಈ ತಂತ್ರಜ್ಞಾನದ ವಾಹನದ ಮೂಲಕ ಪ್ರಯಾಣಿಕರು ಗಂಟೆಗೆ 1000 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಸಾಗಬಹುದು. ಒತ್ತಡದ ಟ್ಯೂಬ್ಗಳ ಮೂಲಕ ಪ್ರಯಾಣಿಕರನ್ನು ಪಾಡ್ಗಳಲ್ಲಿ ಕಳುಹಿಸಲಾಗುತ್ತದೆ.
ಐಐಟಿ ಮದ್ರಾಸ್, ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಭಾರತದ ಮೊದಲ ಹೈಪರ್ ಲೂಪ್ ಟೆಸ್ಟ್ ಟ್ರ್ಯಾಕ್ ಅನ್ನು ಅಭಿವೃದ್ಧಿಪಡಿಸಿದೆ. ಇದೇನಾದರೂ ಕಾರ್ಯರೂಪಕ್ಕೆ ಬಂದರೆ, ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಕೇವಲ 30 ನಿಮಿಷಕ್ಕೆ ಇಳಿಸಲಿದೆ.
ಪ್ರಸ್ತುತ ಎರಡು ನಗರಗಳ ನಡುವೆ 'ವಂದೇ ಭಾರತ್' ರೈಲು ಅತಿ ವೇಗದ ರೈಲು ಸಂಚಾರ ಮಾಡುತ್ತದೆ. ಮೆಟ್ರೋಪಾಲಿಟನ್ ನಗರಗಳ ನಡುವಿನ ಪ್ರಯಾಣಕ್ಕೆ ಐದೂವರೆ ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಅತ್ಯಾಧುನಿಕ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ, ಈ ನಗರಗಳ ನಡುವಿನ ಪ್ರಯಾಣದ ಸಮಯವನ್ನು 30 ನಿಮಿಷಗಳಿಗೆ ಇಳಿಸಲಿದೆ.
ಹೈಪರ್ ಲೂಪ್ ಟ್ರ್ಯಾಕ್ ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಳ್ಳಬೇಕಾಗುತ್ತದೆ. ಕಡಿಮೆ ಒತ್ತಡದ ಟ್ಯೂಬ್ಗಳ ಒಳಗೆ ಪ್ರಯಾಣಿಕರು ಇರುವ ಪಾಡ್ಗಳು ಗಂಟೆಗೆ 1,000 ಕಿ.ಮೀ. ವೇಗದಲ್ಲಿ ಸಾಗುವಂತೆ ಮಾಡಬೇಕಾಗುತ್ತದೆ.
ರೈಲ್ವೆಯಿಂದ ಅನುದಾನ
ಐಐಟಿ ಮದ್ರಾಸ್ನಲ್ಲಿ ಹಲವು ಪರೀಕ್ಷೆಗೆ ಒಳಗಾಗಿ ಅಂತರ-ನಗರ ಸಾರಿಗೆಗೆ ಸೂಕ್ತ ಎಂದು ಸಾಬೀತಾದ ಬಳಿಕ ಭಾರತೀಯ ರೈಲ್ವೆ ,ವಾಣಿಜ್ಯ ಬಳಕೆಯ ಹೈಪರ್ ಲೂಪ್ ಬಳಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಪರೀಕಾರ್ಥ 422 ಮೀಟರ್ ಉದ್ದದ ಈ ಟೆಸ್ಟ್ ಟ್ರ್ಯಾಕ್ ಅನ್ನು ಐಐಟಿ ಮದ್ರಾಸ್ ಕ್ಯಾಂಪಸ್ನಲ್ಲಿ ನಿರ್ಮಿಸಲಾಗಿದ್ದು, ರೈಲ್ವೆ ಸಚಿವಾಲಯದ ಆರ್ಥಿಕ ನೆರವು ಪಡೆದುಕೊಂಡಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೈಪರ್ ಲೂಪ್ ಅಭಿವೃದ್ಧಿಯ ಬಗ್ಗೆ ಹಲವು ಮಾಹಿತಿಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. " ಈ ಸಹಯೋಗ ಸಾರಿಗೆ ಕ್ಷೇತ್ರದಲ್ಲಿ ವಿನೂತನ ಅವಕಾಶ,'' ಎಂದು ಹೇಳಿದ್ದಾರೆ.
ಐಐಟಿ ಮದ್ರಾಸ್ಗೆ ಈ ಯೋಜನೆಗಾಗಿ ಎರಡು ಬಾರಿ 10 ಲಕ್ಷ ಡಾಲರ್ ಅನುದಾನ ನೀಡಲಾಗಿದೆ. ಅದೇ ಮೊತ್ತದ ಮೂರನೇ ಅನುದಾನ ಕೂಡ ಕೊಡಲಾಗಿದೆ. ಐಐಟಿ ಮದ್ರಾಸ್ನಲ್ಲಿ ಹೈಪರ್ ಲೂಪ್ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ಈ ಅನುದಾನದ ಉದ್ದೇಶ.
ಹೈಪರ್ ಲೂಪ್ ಎಂದರೇನು?
ಹೈಪರ್ ಲೂಪ್ ಒಂದು ಸುಧಾರಿತ ಸಾರಿಗೆ ವ್ಯವಸ್ಥೆಯಾಗಿದ್ದು, ನಿರ್ವಾತ ಕೊಳವೆಗಳ ಒಳಗೆ ವಿದ್ಯುತ್ಕಾಂತೀಯವಾಗಿ ಲೆವಿಟೇಟಿಂಗ್ ಪಾಡ್ಗಳು ಸಂಚರಿಸುವಂತೆ ಮಾಡಲಾಗುತ್ತದೆ. ಈ ಕೊಳವೆಗಳ ಒಳಗೆ ಗಾಳಿಯ ಪ್ರತಿರೋಧ ಮತ್ತು ಘರ್ಷಣೆ ಇಲ್ಲದ ಕಾರಣ ಹೈಪರ್ ಲೂಪ್ ಪಾಡ್ಗಳು ವಿಮಾನಗಳಿಗಿಂತ ದುಪ್ಪಟ್ಟು ವೇಗದಲ್ಲಿ ಸಾಗುತ್ತದೆ.
ಈ ರೀತಿಯ ವ್ಯವಸ್ಥೆಯನ್ನು ಇತರ ಸಾರಿಗೆ ವಿಧಾನಗಳಿಗೆ ಹೋಲಿಸಿದರೆ ಕಡಿಮೆ ಶಕ್ತಿ ಬಳಸಿಕೊಂಡು ನಿರ್ವಹಿಸಬಹುದು. ಅಂತರ್ನಿರ್ಮಿತ ಶಕ್ತಿಯ ಮೂಲಕ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಲು ಸಾಧ್ಯವಿದೆ.
ಹೈಪರ್ ಲೂಪ್ ತಂತ್ರಜ್ಞಾನವನ್ನು ವಿಶ್ವದ ಹಲವಾರು ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ತಜ್ಞರ ಪ್ರಕಾರ, ಹೈಪರ್ ಲೂಪ್, ಕಡಿಮೆ ಶಕ್ತಿ ಬಳಸಿಕೊಂಡು ವಿಮಾನಕ್ಕಿಂತ ಎರಡು ಪಟ್ಟು ವೇಗದಲ್ಲಿ ಸಾಗುತ್ತದೆ. ಹೈಪರ್ ಲೂಪ್ ತಂತ್ರಜ್ಞಾನವನ್ನು ಈಗಾಗಲೇ ವಿಶ್ವದಾದ್ಯಂತ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಳಸಲಾಗುತ್ತಿದೆ.