
ಒಂದು ಏಟು ಹೊಡೆದರೆ, ಹತ್ತು ಹೊಡೆತ ತಿನ್ನಬೇಕಾಗುತ್ತದೆ: ಕಂಗನಾ ರಣಾವತ್
'ನಾನು ಜಗಳ ಪ್ರಾರಂಭಿಸುವುದಿಲ್ಲ. ಆದರೆ, ನೀವು ನನಗೆ ಒಮ್ಮೆ ಹೊಡೆದರೆ, ಅನೇಕ ಬಾರಿ ಹೊಡೆಯುತ್ತೇನೆʼ ಎಂದು ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಅವರು ಬುಧವಾರ (ಮೇ 15) ಹೇಳಿದ್ದಾರೆ.
ಜೂನ್ 1 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ನೀಡಿದ ಸಂದರ್ಶನದಲ್ಲಿ ʻನನ್ನ ಗೆಲುವು ನನ್ನ ಜೀವನದ ಅತ್ಯಂತ ದೊಡ್ಡ ತಿರುವು ಆಗಬಹುದುʼ ಎಂದು ಹೇಳಿದರು.
ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರ ಟೀಕೆಗೆ ಪ್ರತಿಕ್ರಿಯಿಸಿ, ʻವಿಷಯಾಧರಿತವಾಗಿ ಚುನಾವಣೆ ಎದುರಿಸಬೇಕು. ಆದರೆ, ಅವಹೇಳನಕಾರಿ ಪದ ಬಳಸಿದರೆ, ಅದೇ ರೀತಿಯ ಮಾತು ಕೇಳಲು ಸಿದ್ಧವಾಗಬೇಕುʼ ಎಂದು ಹೇಳಿದರು.
ʻನಾನು ಯಾರಿಗಾದರೂ ಸವಾಲು ಹಾಕಬಲ್ಲೆ. ನಾನು ಜಗಳಕ್ಕೆ ಹೋಗುವುದಿಲ್ಲ. ಆದರೆ, ಜಗಳಕ್ಕೆ ಬಂದರೆ ಸುಮ್ಮನೆ ಇರುವುದಿಲ್ಲ. ನನಗೆ ಒಂದು ಏಟು ಹೊಡೆದರೆ, ಹಲವು ಏಟು ತಿನ್ನಲು ಸಿದ್ಧವಿರಬೇಕಾಗುತ್ತದೆ,ʼ ಎಂದರು.
ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರಿನಾತೆ ಅವರ ಎಕ್ಸ್ ಹ್ಯಾಂಡಲ್‌ನಿಂದ ಅವಹೇಳನಕಾರಿ ಟೀಕೆ ಮಾಡಲಾಗಿತ್ತು. ತಮ್ಮ ಖಾತೆಗೆ ಪ್ರವೇಶ ಹೊಂದಿರುವ ಬೇರೊಬ್ಬರು ಈ ಪೋಸ್ಟ್ ಮಾಡಿದ್ದಾರೆ ಎಂದು ಸುಪ್ರಿಯಾ ಹೇಳಿ, ಪೋಸ್ಟ್ ತೆಗೆದುಹಾಕಿದ್ದರು.
ಕಂಗನಾ ಅವರು ರಾಹುಲ್ ಗಾಂಧಿ ಮತ್ತು ವಿಕ್ರಮಾದಿತ್ಯ ಸಿಂಗ್ ಅವರನ್ನು ʻಬಡಾ ಪಪ್ಪು ಮತ್ತು ಛೋಟಾ ಪಪ್ಪುʼ ಹಾಗೂ ಸಿಂಗ್ ಅವ ರನ್ನು ಸುಳ್ಳುಗಾರ ಮತ್ತು ನಿಲುವು ಬದಲಿಸುವವನು ಎಂದು ಕರೆದು, ಕಾಂಗ್ರೆಸ್ ನಾಯಕರ ಕೋಪಕ್ಕೆ ತುತ್ತಾಗಿದ್ದರು.
ಗೋಮಾಂಸ ಸೇವನೆ ಬಗ್ಗೆ ಕಂಗನಾ ಅವರ ಹಳೆಯ ಸಂದರ್ಶನವನ್ನು ಉಲ್ಲೇಖಿಸಿದ್ದ ಸಿಂಗ್, ʻಆಕೆಗೆ ಬುದ್ಧಿ ನೀಡಬೇಕೆಂದು ಭಗವಾನ್ ರಾಮನನ್ನು ಪ್ರಾರ್ಥಿಸುತ್ತೇನೆ ಮತ್ತು ಆಕೆ ದೇವಭೂಮಿ ಹಿಮಾಚಲದಿಂದ ಬಾಲಿವುಡ್‌ಗೆ ಶುದ್ಧವಾಗಿ ಹಿಂತಿರುಗುತ್ತಾಳೆ ಎಂದು ಭಾವಿಸು ತ್ತೇನೆ. ಆಕೆಗೆ ಹಿಮಾಚಲದ ಜನರ ಬಗ್ಗೆ ಏನೂ ತಿಳಿದಿಲ್ಲದ ಕಾರಣ ಚುನಾವಣೆಯಲ್ಲಿ ಗೆಲ್ಲುವುದಿಲ್ಲʼ ಎಂದು ಹೇಳಿದ್ದರು.
ಸಿಂಗ್ ಅವರು ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ, ರಾಂಪುರ ಬುಷೇರ್ ರಾಜ ಮನೆತನಕ್ಕೆ ಸೇರಿದವರು.
ʻಮೋದಿಯವರ ಗ್ಯಾರಂಟಿ ಕೆಲಸ ಮಾಡುವ ಏಕೈಕ ಗ್ಯಾರಂಟಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಕಲಿಯುಗದಲ್ಲಿ ಕೆಲಸ ಮಾಡುವ ಏಕೈಕ ಗ್ಯಾರಂಟಿ ಮೋದಿಯ ಗ್ಯಾರಂಟಿ ಎಂದು ಜನ ಹೇಳುತ್ತಿದ್ದಾರೆ. ಹಿಮಾಚಲ ಪ್ರದೇಶವು 400 ಸೀಟುಗಳ ಗುರಿಗೆ ಕೊಡುಗೆ ನೀಡುತ್ತದೆ. ರಾಜ್ಯದಲ್ಲಿ ಬಿಜೆಪಿ ಎಲ್ಲಾ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆʼ ಎಂದು ಕಂಗನಾ ಹೇಳಿದರು.