ಮಹಿಳೆ ರಫೇಲ್ ಯುದ್ಧ ವಿಮಾನ ಹಾರಿಸುವುದಾದರೆ ಸೇನೆಯ ಕಾನೂನು ಶಾಖೆಯಲ್ಲಿ ಪ್ರಾತಿನಿಧ್ಯ ಏಕಿಲ್ಲ;  ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಪ್ರಶ್ನೆ
x

ಸುಪ್ರೀಂ ಕೋರ್ಟ್

ಮಹಿಳೆ ರಫೇಲ್ ಯುದ್ಧ ವಿಮಾನ ಹಾರಿಸುವುದಾದರೆ ಸೇನೆಯ ಕಾನೂನು ಶಾಖೆಯಲ್ಲಿ ಪ್ರಾತಿನಿಧ್ಯ ಏಕಿಲ್ಲ; ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಪ್ರಶ್ನೆ

ಜೆಎಜಿ ಹುದ್ದೆಗಳಲ್ಲಿ ಲಿಂಗ ಅನುಪಾತ ಪಾಲಿಸದ ಕೇಂದ್ರ ಸರ್ಕಾರ ಹಾಗೂ ಸೇನೆಯ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ನಡೆಸಿತು. 'ಒಬ್ಬ ಮಹಿಳೆ ವಾಯುಸೇನೆಯಲ್ಲಿ ರಫೇಲ್ ಹಾರಿಸಲು ಸಾಧ್ಯವಾದರೆ, ಅವರನ್ನು ಸೇನೆಯಲ್ಲಿ ಜೆಎಜಿ ಹುದ್ದೆಗೆ ನೇಮಿಸುವುದರಲ್ಲಿ ಏನು ಸಮಸ್ಯೆ ಇದೆ' ಎಂದು ಪೀಠ ಪ್ರಶ್ನಿಸಿತು.


ಭಾರತೀಯ ಸೇನೆಯಲ್ಲಿ ರಫೇಲ್‌ನಂತಹ ಯುದ್ಧ ವಿಮಾನಗಳನ್ನು ಮಹಿಳೆಯರೇ ಹಾರಿಸಬಹುದಾದರೆ ಸೇನೆಯ ಜಡ್ಜ್‌ ಅಡ್ವೋಕೇಟ್‌ ಜನರಲ್‌ (ಜೆಎಜಿ) ಶಾಖೆಯಲ್ಲಿ ಲಿಂಗ ಸಮಾನ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳು ಕಡಿಮೆ ಇರುವುದು ಏಕೆ ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ಮಹಿಳಾ ಅಧಿಕಾರಿಗಳಾದ ಅರ್ಷನೂರ್ ಕೌರ್ ಮತ್ತು ಆಸ್ತಾ ತ್ಯಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠವು, ಅರ್ಜಿದಾರರು(ಮಹಿಳಾ ಅಧಿಕಾರಿಗಳು) ಪುರುಷ ಅಧಿಕಾರಿಗಳಿಗಿಂತ ಉತ್ತಮ ಶ್ರೇಣಿ ಹೊಂದಿದ್ದರೂ ಅವರನ್ನು ಯಾಕೆ ಜೆಎಜಿ ಶಾಖೆಗೆ ಆಯ್ಕೆ ಮಾಡಲಿಲ್ಲ ಎಂದು ಕೇಳಿದೆ.

ಜೆಎಜಿ ಶಾಖೆಯ ಮೆರಿಟ್ ಪಟ್ಟಿಯಲ್ಲಿ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನಗಳನ್ನು ಪಡೆದಿದ್ದೇವೆ. ಆದರೆ, ಒಟ್ಟು 6 ಹುದ್ದೆಗಳಲ್ಲಿ ಕೇವಲ 3 ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿದ್ದರೂ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಮಹಿಳೆಯರಿಗೆ ಮೀಸಲಾಗಿದ್ದ ಮೂರು ಹುದ್ದೆಗಳಿಗೆ ಕಡಿಮೆ ಶ್ರೇಯಾಂಕದ ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅರ್ಹ ಮಹಿಳಾ ಅಭ್ಯರ್ಥಿಗಳನ್ನು ಜೆಎಜಿಯಿಂದ ಹೊರಗಿಡಲಾಗಿದೆ ಎಂದು ಅರ್ಷನೂರ್ ಕೌರ್ ಮತ್ತು ಆಸ್ತಾ ತ್ಯಾಗಿ ದೂರಿದ್ದರು.

'ಒಬ್ಬ ಮಹಿಳೆ ರಫೇಲ್ ಹಾರಿಸಲು ಸಾಧ್ಯವಾದರೆ...'

ನ್ಯಾಯಮೂರ್ತಿ ದೀಪಂಕರ್ ದತ್ತ ಅವರ ಪೀಠವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿತು. 'ಒಬ್ಬ ಮಹಿಳೆ ವಾಯುಸೇನೆಯಲ್ಲಿ ರಫೇಲ್ ಹಾರಿಸಲು ಸಾಧ್ಯವಾದರೆ, ಅವರನ್ನು ಸೇನೆಯಲ್ಲಿ ಜೆಎಜಿ ಹುದ್ದೆಗೆ ನೇಮಿಸುವುದರಲ್ಲಿ ಏನು ಸಮಸ್ಯೆ ಇದೆ' ಎಂದು ಪೀಠ ಪ್ರಶ್ನಿಸಿತು. ಜೆಎಜಿ ಹುದ್ದೆಗಳು ಲಿಂಗ ತಟಸ್ಥ ಎಂದು ಹೇಳಲಾಗುತ್ತದೆ. ಹಾಗಾದರೆ ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಏಕೆ ಮೀಸಲಿಡಲಾಗಿದೆ ಎಂದು ನ್ಯಾಯಾಲಯ ಕೇಳಿದೆ.

'ಲಿಂಗ ತಟಸ್ಥತೆ ಎಂದರೆ 50:50 ಅಲ್ಲ'

ಜೆಎಜಿ ಅಧಿಕಾರಿಗಳ ನೇಮಕಾತಿಗಾಗಿ ಲಭ್ಯವಿರುವ ತರಬೇತಿ ಕೋರ್ಸ್‌ಗೆ ಅರ್ಷನೂರ್ ಕೌರ್ ಅವರನ್ನು ಸೇರಿಸಿಕೊಳ್ಳುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು ಸೇನೆಗೆ ನಿರ್ದೇಶನ ನೀಡಿ, ಮಧ್ಯಂತರ ಪರಿಹಾರ ಕಲ್ಪಿಸಿತು.

ಜೆಎಜಿ ಹುದ್ದೆಗಳು ಲಿಂಗ ತಟಸ್ಥವಾಗಿವೆ. 2023 ರಿಂದ 50:50 ಅನುಪಾತ ಕಾಯ್ದುಕೊಳ್ಳಲಾಗಿದೆ ಎಂಬ ಸರ್ಕಾರದ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. 'ಲಿಂಗ ತಟಸ್ಥತೆ ಎಂದರೆ ಶೇ 50:50 ಅಲ್ಲ' ಎಂದು ನ್ಯಾಯಾಲಯ ಹೇಳಿದೆ. ಲಿಂಗ ತಟಸ್ಥತೆ ಎಂದರೆ ನೀವು ಯಾವುದೇ ಲಿಂಗವಾಗಿದ್ದರೂ ಪರವಾಗಿಲ್ಲ ಎಂದು ನ್ಯಾಯಾಲಯ ಹೇಳಿತು.

ವಿಚಾರಣೆ ಪೂರ್ಣಗೊಳಿಸಿದ ನಂತರ ನ್ಯಾಯಾಲಯವು ಎರಡೂ ಅರ್ಜಿಗಳ ಮೇಲಿನ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಜೆಎಜಿ( ಜಡ್ಜ್‌ ಅಡ್ವೋಕೇಟ್‌ ಜನರಲ್‌) ಏನು?

ಜೆಎಜಿ (ಜಡ್ಜ್‌ ಅಡ್ವೋಕೇಟ್‌ ಜನರಲ್‌) ಎಂಬ ಹುದ್ದೆಯು ಸೇನೆಯಲ್ಲಿ ಕಾನೂನು ಸಲಹೆ ನೀಡುವ ಕೆಲಸ ಮಾಡಲಿದೆ. ಅವರು ನ್ಯಾಯಾಲಯದ ವಿಚಾರಣೆಗಳಲ್ಲಿ ಸೇನೆಯನ್ನು ಪ್ರತಿನಿಧಿಸಲಿದ್ದಾರೆ. ಮಿಲಿಟರಿ ಕಾನೂನನ್ನು ಅವರು ಪಾಲಿಸುತ್ತಾರೆ. ನ್ಯಾಯಾಲಯ ಸಮರ ಮತ್ತು ಶಿಸ್ತು ಕ್ರಮಗಳನ್ನು ನಿರ್ವಹಿಸುತ್ತಾರೆ.

ಸೇನೆಯ ಸಮರ್ಥನೆ ಏನು?

ಭಾರತೀಯ ಸೇನೆಯು ಜೆಎಜಿ ನೀತಿಯನ್ನು ಸಮರ್ಥಿಸಿಕೊಂಡಿದೆ. ಜೆಎಜಿ ಅಧಿಕಾರಿಗಳು "ಭೂಸೇನೆಯ ಬೆಟಾಲಿಯನ್‌ಗಳಿಗೆ ಮಾತ್ರ ಸಂಬಂಧಿಸಿದ್ದಾರೆ. ಯುದ್ಧ ಪಾತ್ರಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ. ಈ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು 70:೩೦ ಅನುಪಾತದಲ್ಲಿ ನೀತಿ ರೂಪಿಸಲಾಗಿದೆ ಎಂದು ಸೇನೆ ಹೇಳಿದೆ. ಮೊದಲು ಶೇ.70 ರಷ್ಟು ಹುದ್ದೆಗಳು ಪುರುಷರು ಮತ್ತು ಶೇ.30 ರಷ್ಟು ಹುದ್ದೆಗಳು ಮಹಿಳೆಯರಿಗೆ ಮೀಸಲಿರಿಸಿದ್ದೆವು ಎಂದು ಹೇಳಿತ್ತು. ಈಗ ಈ ಅನುಪಾತದ ಕುರಿತಂತೆಯೇ ವಿವಾದ ಎದ್ದಿದೆ.

Read More
Next Story