
ಗಂಭೀರ್ ಭಾರತಕ್ಕೆ ಉತ್ತಮ ಕೋಚ್ ಆಗುತ್ತಾರೆ: ಗಂಗೂಲಿ
ಮುಂಬೈ, ಜೂನ್ 1- ಗೌತಮ್ ಗಂಭೀರ್ ಅವರು ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ʻಉತ್ತಮ ಕೋಚ್ʼ ಆಗುತ್ತಾರೆ ಎಂದು ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಶನಿವಾರ ಹೇಳಿದ್ದಾರೆ.
ಬ್ಲೂ ಓಷನ್ ಕಾರ್ಪೊರೇಷನ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿ, ಮುಂಬರುವ ಟಿ 20 ವಿಶ್ವಕಪ್‌ನಲ್ಲಿ ದೇಶದ ಅವಕಾಶ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ʻದೇಶದಲ್ಲಿ ಸಾಕಷ್ಟು ಪ್ರತಿಭೆಗಳಿರುವುದರಿಂದ, ರಾಷ್ಟ್ರೀಯ ತಂಡಕ್ಕೆ ಭಾರತೀಯ ತರಬೇತುದಾರರು ಬೇಕು,ʼ ಎಂದು ಬಿಸಿಸಿಐ ಮಾಜಿ ಅಧ್ಯಕ್ಷರೂ ಆದ ಗಂಗೂಲಿ ಹೇಳಿದರು.
'ಭಾರತೀಯ ಕೋಚ್‌ಗೆ ಒಲವು': ʻನಾನು ಭಾರತೀಯ ತರಬೇತುದಾರನ ಪರವಾಗಿದ್ದೇನೆ. ಏಕೆಂದರೆ, ನಮ್ಮ ದೇಶದಲ್ಲಿ ಅಗಾಧ ಪ್ರತಿಭೆಗಳಿವೆ. ಭಾರತೀಯ ಕ್ರಿಕೆಟ್‌ಗೆ ಅದ್ಭುತ ಸೇವೆ ಸಲ್ಲಿಸಿದ ಉನ್ನತ ಕೌಶಲದ ಆಟಗಾರರು ಇದ್ದು, ಅವರು ವ್ಯವಸ್ಥೆಯ ಭಾಗವಾಗಬೇಕು,ʼ ಎಂದು ಗಂಗೂಲಿ ಹೇಳಿದರು.
ಗಂಭೀರ್ ಈ ಸ್ಥಾನಕ್ಕೆ ಸೂಕ್ತರೇ ಎಂಬ ಪ್ರಶ್ನೆಗೆ, ʻಅವರು ಅರ್ಜಿ ಸಲ್ಲಿಸಿದ್ದಾರೆಯೇ? ನನಗೆ ಗೊತ್ತಿಲ್ಲ. ಮೊದಲು ಅವರು ಅರ್ಜಿ ಸಲ್ಲಿಸಬೇಕು ಮತ್ತು ಆನಂತರ ಮಾತ್ರ ಅವರಿಗೆ ಸ್ಥಾನ ಕೆಲಸ ಪಡೆಯುತ್ತಾರೆ. ಮೇ 27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಬಿಸಿಸಿಐ ಗಡುವು ವಿಸ್ತರಿಸುವ ಹಕ್ಕು ಹೊಂದಿದೆ. ಅವರು ಅರ್ಜಿ ಸಲ್ಲಿಸಿದರೆ ಮತ್ತು ಬಯಸಿದರೆ, ಅವರು ಉತ್ತಮ ಅಭ್ಯರ್ಥಿಯಾಗುತ್ತಾರೆ,ʼ ಎಂದು ಹೇಳಿದರು. ʻಐಪಿಎಲ್ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್‌ನ ಮೆಂಟರ್ ಆಗಿ ಗಂಭೀರ್ ಅವರ ಆಟದ ವೈಖರಿ ಎಲ್ಲರೂ ನೋಡಿದ್ದಾರೆ. ಅವರ ಹಸಿವು, ಉತ್ಸಾಹ ಮತ್ತು ಗೆಲ್ಲುವ ಬಯಕೆಯನ್ನುನೀವು ನೋಡಬಹುದು,ʼ ಎಂದರು.
ಟಿ20 ವಿಶ್ವ ಕಪ್- ಭಾರತ ಪ್ರಬಲ ಸ್ಪರ್ಧಿ: ʻಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಉತ್ತಮ ಅವಕಾಶಗಳಿವೆ. ಆದರೆ, ತಂಡವು ಭಯಪಡದೆ ಆಡಬೇಕು. ತಂಡದಲ್ಲಿ ಅಗಾಧ ಪ್ರತಿಭೆಗಳಿವೆ; ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾ ರ್ ಯಾದವ್, ರಿಷಭ್ ಪಂತ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಸಂಜು ಸ್ಯಾಮ್ಸನ್ ಅವರನ್ನು ಹೊಂದಿರುವ ತಂಡವಿದು,ʼ ಎಂದು ಹೇಳಿದರು.
ವಿರಾಟ್, ರೋಹಿತ್‌ಗೆ ಬೆಂಬಲ: ಭಾರತದ ಇನ್ನಿಂಗ್ಸ್‌ನ್ನು ರೋಹಿತ್ ಮತ್ತು ಕೊಹ್ಲಿ ಆರಂಭಿಸುವುದನ್ನು ಗಂಗೂಲಿ ಬೆಂಬಲಿಸಿದರು. ʻವಿರಾಟ್ ಮತ್ತು ರೋಹಿತ್ ಇನ್ನಿಂಗ್ಸ್ ಆರಂಭಿಸಬೇಕು. ವಿರಾಟ್ ಐಪಿಎಲ್‌ನಲ್ಲಿ ಅದ್ಭುತ ಆಟವಾಡಿದ್ದಾರೆ. ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಹೊಸ ಕ್ರೀಡಾಂಗಣ. ಅಡಿಲೇಡ್‌ನಿಂದ ಪಿಚ್ ತರಲಾಗಿದೆ ಎಂದು ಕೇಳಲ್ಪಟ್ಟಿದ್ದೇನೆ. ಅಮೆರಿಕಕ್ಕೆ ಈ ಪಿಚ್‌ಗಳನ್ನು ತರಲು ಐಸಿಸಿ ಸಾಕಷ್ಟು ಹಣ ಖರ್ಚು ಮಾಡಿದೆ. ಈ ಪಿಚ್‌ಗಳು ಬ್ಯಾಟಿಂಗ್ ಸ್ನೇಹಿ ಆಗಿದ್ದು, ಹೆಚ್ಚು ಬದಲಾಗುವುದಿಲ್ಲ. ಆದ್ದರಿಂದ ಪಿಚ್ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ,ʼ ಎಂದು ವಿವರಿಸಿದರು.
ಪಾಕಿಸ್ತಾನಕ್ಕಿಂತ ಬಲಿಷ್ಟ: ಭಾರತವು ಪಾಕಿಸ್ತಾನಕ್ಕಿಂತ ಬಲಿಷ್ಟ ತಂಡ. ಜೂನ್ 9 ರಂದು ಉಭಯ ತಂಡಗಳು ಆಟವಾಡಿದಾಗ, ಸಾಂಪ್ರದಾಯಿಕ ಎದುರಾಳಿಗಳು ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಪಾಕಿಸ್ತಾನದ ವಿರುದ್ಧದ ನಮ್ಮ ದಾಖಲೆ ಬಹಳ ಉತ್ತಮವಾಗಿದೆ. ಅವರು ಭಾರತಕ್ಕೆ ಬಂದಾಗ ಅಹಮದಾಬಾದ್‌ನಲ್ಲಿ ಸೋಲಿಸಿದ್ದೇವೆ,ʼ ಎಂದರು.
ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಅಭಿಯಾನದ ಕೊನೆಯಲ್ಲಿ ರಾಹುಲ್ ದ್ರಾವಿಡ್ ಕೆಳಗಿಳಿಯಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಭಾರತದ ಕೋಚ್‌ಗೆ ಆದ್ಯತೆ ನೀಡುವುದಾಗಿ ಸುಳಿವು ನೀಡಿದ್ದರು.