
ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಭಾರತೀಯ ವಾಯುಪಡೆಯ ಜೆಟ್ ಅಪಘಾತಕ್ಕೀಡಾಗಿದೆ.
ರಾಜಸ್ಥಾನದಲ್ಲಿ ಜಾಗ್ವಾರ್ ಯುದ್ಧ ವಿಮಾನ ಪತನ: ಇಬ್ಬರು ಪೈಲಟ್‌ಗಳು ಸಾವು
ವಿಮಾನವು ಸೂರತ್‌ಗಢ ವಾಯುನೆಲೆಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಪೈಲಟ್ ಒಬ್ಬರ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಭಾರತೀಯ ವಾಯುಪಡೆಯ (IAF) ಜೆಟ್ ಅಪಘಾತಕ್ಕೀಡಾಗಿದೆ. ರಾಜಸ್ಥಾನದ ಚುರು ಎಂಬಲ್ಲಿ ವಿಮಾನ ಪತನಗೊಂಡಿದೆ. ಜಾಗ್ವಾರ್ ಯುದ್ಧ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನವು ಸೂರತ್‌ಗಢ ವಾಯುನೆಲೆಯಿಂದ ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ರಾಜಸ್ಥಾನದ ಜೋಧ್‌ಪುರ ಮತ್ತು ಬಿಕಾನೇರ್‌ನಲ್ಲಿ ವಾಯು ನೆಲೆಗಳಿವೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಗುಜರಾತ್‌ನ ಜಾಮ್‌ನಗರ ಬಳಿ ವಾಯುಪಡೆಯ ಜಾಗ್ವಾರ್ ಫೈಟರ್ ವಿಮಾನ ಪತನಗೊಂಡಿತ್ತು. ಪೈಲಟ್‌ಗಳಲ್ಲಿ ಒಬ್ಬರಾದ ಸಿದ್ಧಾರ್ಥ್ ಯಾದವ್ ಎಂಬುವರು ಇನ್ನೊಬ್ಬರ ಜೀವ ಉಳಿಸಲು ಹೋಗಿ ಮೃತಪಟ್ಟಿದ್ದರು. ಅಂದು ತರಬೇತಿ ಕಾರ್ಯಾಚರಣೆ ಸಮಯದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಜೆಟ್ ಪತನವಾಗಿತ್ತು.
2025 ಫೆಬ್ರುವರಿಯಲ್ಲಿ ಮಹಾರಾಷ್ಟ್ರದ ಶಿವಪುರಿಯಲ್ಲಿ ಮೀರಜ್ ಯುದ್ಧ ವಿಮಾನ ಪತನವಾಗಿತ್ತು. ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಪ್ಯಾರಾಚೂಟ್ ಮೂಲಕ ಕೆಳಗಿಳಿದಿದ್ದರು. ಅಪಘಾತದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.