I threw slippers at the judge as per Gods order. No regrets: Lawyer Rakesh Kishore
x

ವಕೀಲ ರಾಕೇಶ್‌ ಕಿಶೋರ್

ದೇವರ ಆದೇಶದಂತೆ ನ್ಯಾಯಮೂರ್ತಿಗೆ ಚಪ್ಪಲಿ ಎಸೆದಿದ್ದೇನೆ ಪಶ್ಚಾತ್ತಾಪವಿಲ್ಲ: ವಕೀಲ ರಾಕೇಶ್ ಕಿಶೋರ್

ಖಜುರಾಹೋದಲ್ಲಿರುವ ಜವಾರಿ ದೇವಸ್ಥಾನದ ವಿಷ್ಣು ಮೂರ್ತಿಯ ತಲೆಯನ್ನು ಪುನರ್‌ನಿರ್ಮಿಸುವಂತೆ ಸಲ್ಲಿಸಲಾದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದಾಗ ಸಿಜಿಐ ಗವಾಯಿ ಮಾಡಿದ ಟೀಕೆಗಳು ತಮಗೆ ನೋವುಂಟುಮಾಡಿದವು ಎಂದು ಹೇಳಿದ್ದಾರೆ.


Click the Play button to hear this message in audio format

ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಚಪ್ಪಲಿ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿದ್ದಾರೆ. ತಾನು ದೇವರ ಆದೇಶದಂತೆ ವರ್ತಿಸಿದ್ದೇನೆ ಎಂದು ಹೇಳಿದ ಅವರು, ಕ್ಷಮೆಯಾಚನೆ ಮಾಡುವ ಪ್ರಶ್ನೆಯೇ ಇಲ್ಲವೆಂದಿದ್ದಾರೆ.

ಮಂಗಳವಾರ ಎಎನ್‌ಐಗೆ ಮಾತನಾಡಿದ ರಾಕೇಶ್ ಕಿಶೋರ್, ಖಜುರಾಹೋದಲ್ಲಿರುವ ಜವಾರಿ ದೇವಸ್ಥಾನದ ವಿಷ್ಣು ಮೂರ್ತಿಯ ತಲೆಯನ್ನು ಪುನರ್‌ನಿರ್ಮಿಸುವಂತೆ ಸಲ್ಲಿಸಲಾದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದಾಗ ಸಿಜಿಐ ಗವಾಯಿ ಮಾಡಿದ ಟೀಕೆಗಳು ತಮಗೆ ನೋವುಂಟುಮಾಡಿದವು ಎಂದು ಹೇಳಿದ್ದಾರೆ. "ನ್ಯಾಯಮೂರ್ತಿ ಗವಾಯಿ, 'ದೇಗುಲದ ದೇವರನ್ನೇ ಪ್ರಾರ್ಥಿಸಿ ತಲೆಯನ್ನು ಮರಳಿ ಪಡೆಯಿರಿ' ಎಂದು ವ್ಯಂಗ್ಯವಾಗಿ ಹೇಳಿದ್ದರು. ಇದರಿಂದ ನಾನು ಖಿನ್ನನಾದೆ," ಎಂದರು.

ಇತರ ಧರ್ಮಗಳಿಗೆ ಕೊಟ್ಟ ನ್ಯಾಯದ ಉದಾಹರಣೆ

ಹಲ್ದ್ವಾನಿಯಲ್ಲಿ ರೈಲ್ವೆ ಭೂಮಿಯಲ್ಲಿ ನಡೆದ ಅತಿಕ್ರಮಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ವಿಧಿಸಿದ ತಡೆ ಆದೇಶ ಹಾಗೂ ನುಪುರ ಶರ್ಮಾ ಕುರಿತ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ಅಭಿಪ್ರಾಯವನ್ನು ಉಲ್ಲೇಖಿಸಿದ ಕಿಶೋರ್, “ಸನಾತನ ಧರ್ಮದ ವಿಷಯಗಳಲ್ಲಿ ಮಾತ್ರ ಕಠಿಣತೆ ತೋರಲಾಗುತ್ತದೆ. ಜಲ್ಲಿಕಟ್ಟು ಅಥವಾ ದಹಿಹಾಂಡಿ ಎತ್ತರದ ವಿಚಾರಗಳಲ್ಲೂ ನ್ಯಾಯಾಲಯದ ತೀರ್ಪುಗಳು ನೋವುಂಟುಮಾಡಿವೆ,” ಎಂದರು.

ಕಿಶೋರ್ ತಮ್ಮ ನಡೆಗೆ ಯಾವುದೇ ವಿಷಾದವಿಲ್ಲವೆಂದು ಹೇಳಿದ್ದು, “ನಾನು ಯಾವುದೇ ಮಾದಕ ವಸ್ತುವಿನ ಪ್ರಭಾವದಲ್ಲಿ ಇರಲಿಲ್ಲ. ಇದು ನನ್ನ ಪ್ರತಿಕ್ರಿಯೆ, ದೇವರ ಇಚ್ಛೆಯಂತೆ ವರ್ತಿಸಿದ್ದೇನೆ. ದೇವರು ಬಯಸಿದರೆ ಜೈಲಿಗೆ ಹೋಗುತ್ತೇನೆ ಅಥವಾ ಗಲ್ಲಿಗೇರುತ್ತೇನೆ,” ಎಂದರು.

ಬಾರ್ ಕೌನ್ಸಿಲ್ ಅಮಾನತ್ ಆದೇಶದ ವಿರುದ್ಧ

ಬಾರ್ ಕೌನ್ಸಿಲ್ ತಮಗೆ ವಿಧಿಸಿದ ಅಮಾನತ್ ಆದೇಶವೂ ಕಾನೂನುಬಾಹಿರ ಎಂದು ಕಿಶೋರ್ ಆರೋಪಿಸಿದ್ದಾರೆ. ವಕೀಲರ ಕಾಯ್ದೆಯ ಸೆಕ್ಷನ್ 35 ಪ್ರಕಾರ ಶಿಸ್ತಿನ ಸಮಿತಿ ರಚಿಸಿ, ಲಿಖಿತ ನೋಟಿಸ್ ನೀಡಿದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು. “ನನ್ನ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಇದೀಗ ನಾನು ನನ್ನ ಕಕ್ಷಿದಾರರ ಹಣ ಹಿಂತಿರುಗಿಸಬೇಕಾಗಿದೆ. ಆದರೂ ಕ್ಷಮೆಯಾಚನೆ ಮಾಡುವ ಪ್ರಶ್ನೆಯೇ ಇಲ್ಲ,” ಎಂದು ರಾಕೇಶ್ ಕಿಶೋರ್ ಸ್ಪಷ್ಟಪಡಿಸಿದರು.

Read More
Next Story