I Can’t Replace Skilled Trades, But India’s Education System Isn’t Preparing Youth: Raghuram Rajan
x

ಆರ್‌ಬಿಐ ಮಾಜಿ ಗರ್ವನರ್‌ ರಘುರಾಮ್‌ ರಾಜನ್‌

ಕೃತಕಬುದ್ಧಿಮತ್ತೆಯಿಂದ ಕೌಶಲ್ಯ ಆಧಾರಿತ ಉದ್ಯೋಗಗಳಿಗೆ ಕುತ್ತಿಲ್ಲ: ಆರ್​ಬಿಐ ಮಾಜಿ ಗವರ್ನರ್​ ರಘುರಾಮ್ ರಾಜನ್

ನನಗೆ ಫ್ರೆಂಚ್ ಅಥವಾ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಬೇಕಿಲ್ಲ, ಬದಲಾಗಿ ಆಧುನಿಕ ಪ್ಲಂಬಿಂಗ್‌ನಲ್ಲಿ ತಾಂತ್ರಿಕ ಕೋರ್ಸ್ ಮಾಡಲು ನಾನು ಸಂತೋಷಪಡುತ್ತೇನೆ," ಎಂದು ರಘುರಾಮ್ ರಾಜನ್ ಅವರು ಉದಾಹರಣೆ ನೀಡಿದ್ದಾರೆ.


Click the Play button to hear this message in audio format

ಕೃತಕ ಬುದ್ಧಿಮತ್ತೆ (AI) ಎಷ್ಟೇ ಮುಂದುವರಿದರೂ ಕೈಚಳಕ ಮತ್ತು ತಾಂತ್ರಿಕ ಕೌಶಲ್ಯ ಅಗತ್ಯವಿರುವ ಉದ್ಯೋಗಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ, ಭಾರತದ ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಅಂತಹ ಉದ್ಯೋಗಗಳಿಗೆ ಯುವಜನತೆಯನ್ನು ಸಜ್ಜುಗೊಳಿಸುವಲ್ಲಿ ವಿಫಲವಾಗುತ್ತಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಕಳವಳ ವ್ಯಕ್ತಪಡಿಸಿದ್ದಾರೆ.

ಉದ್ಯಮಿ ಕುಶಾಲ್ ಲೋಧಾ ಅವರೊಂದಿಗಿನ ಪಾಡ್‌ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ರಾಜನ್, ಭಾರತವು ಎಐ ಚಾಲಿತ ಭವಿಷ್ಯದತ್ತ ವೇಗವಾಗಿ ಸಾಗುತ್ತಿದ್ದರೂ, ನಮ್ಮ ಕಾರ್ಯಪಡೆಗೆ (Workforce) ಸೂಕ್ತ ತರಬೇತಿಯ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಪದವಿಗಿಂತ ಪ್ರಾಯೋಗಿಕ ಕೌಶಲ್ಯ ಮುಖ್ಯ"

ಕೇವಲ ಶೈಕ್ಷಣಿಕ ಪದವಿಗಳ ಬೆನ್ನತ್ತುವ ಬದಲು ಪ್ರಾಯೋಗಿಕ ಕೌಶಲ್ಯಗಳ ಕಡೆಗೆ ಗಮನ ಹರಿಸುವಂತೆ ರಾಜನ್ ಸಲಹೆ ನೀಡಿದ್ದಾರೆ. "ಎಐ ಯುಗದಲ್ಲಿಯೂ ಪ್ಲಂಬರ್ (ಕೊಳಾಯಿಗಾರ) ಕೆಲಸಗಳು ಇಲ್ಲವಾಗುವುದಿಲ್ಲ. ಕೆಲವು ಕೆಲಸಗಳಿಗೆ ಮನುಷ್ಯರ ಕೈಚಳಕದ ಅಗತ್ಯವಿದ್ದೇ ಇರುತ್ತದೆ. ನನಗೆ ಫ್ರೆಂಚ್ ಅಥವಾ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಬೇಕಿಲ್ಲ, ಬದಲಾಗಿ ಆಧುನಿಕ ಪ್ಲಂಬಿಂಗ್‌ನಲ್ಲಿ ತಾಂತ್ರಿಕ ಕೋರ್ಸ್ ಮಾಡಲು ನಾನು ಸಂತೋಷಪಡುತ್ತೇನೆ," ಎಂದು ಅವರು ಉದಾಹರಣೆ ನೀಡಿದ್ದಾರೆ.

ಶಿಕ್ಷಣ ವ್ಯವಸ್ಥೆಯ ವೈಫಲ್ಯ

ವಿಮಾನದ ಎಂಜಿನ್ ರಿಪೇರಿ ಅಥವಾ ಪ್ಲಂಬಿಂಗ್‌ನಂತಹ ಕೆಲಸಗಳು ಆಟೊಮೇಷನ್‌ಗೆ (ಯಾಂತ್ರೀಕರಣ) ಸುಲಭವಾಗಿ ಸಿಲುಕುವುದಿಲ್ಲ. ಆದರೆ, ಇಂತಹ ಅತ್ಯಗತ್ಯ ಕೆಲಸಗಳಿಗೆ ಬೇಕಾದ ಗಣಿತ, ವಿಜ್ಞಾನ ಮತ್ತು ಸಂವಹನದಂತಹ ಮೂಲಭೂತ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ವಿಫಲವಾಗುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ. ಕೇವಲ ಸಿದ್ಧಾಂತವಲ್ಲದೆ, ಅಪ್ರೆಂಟಿಸ್‌ಶಿಪ್ (ತರಬೇತಿ) ಮತ್ತು ಕೌಶಲ್ಯ ಆಧಾರಿತ ವೃತ್ತಿಗಳಿಗೆ ಹೆಚ್ಚಿನ ಗೌರವ ನೀಡುವ ಪಠ್ಯಕ್ರಮದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

"ಒಬ್ಬ ಪ್ಲಂಬರ್ ಆಗಲು ಕೂಡ ಉದ್ಯಮಶೀಲತೆಯ ಅಗತ್ಯವಿದೆ. ನಿಮ್ಮ ಸೇವೆಗೆ ಎಷ್ಟು ದರ ನಿಗದಿಪಡಿಸಬೇಕು, ವೆಚ್ಚಗಳೇನು ಎಂಬ ಅರಿವು ಇರಬೇಕಾಗುತ್ತದೆ," ಎಂದು ರಾಜನ್ ಹೇಳಿದ್ದಾರೆ.

ಬಾಲ್ಯದಲ್ಲೇ ಎಡವಟ್ಟು: ಅಪೌಷ್ಟಿಕತೆಯ ಆತಂಕ

ಕೇವಲ ಶಿಕ್ಷಣವಷ್ಟೇ ಅಲ್ಲ, ಬಾಲ್ಯದ ಬೆಳವಣಿಗೆಯ ಹಂತದಲ್ಲಿನ ಪೌಷ್ಟಿಕಾಂಶದ ಕೊರತೆಯು ಭಾರತದ ದೀರ್ಘಕಾಲೀನ ಆರ್ಥಿಕ ಭವಿಷ್ಯಕ್ಕೆ ಮಾರಕವಾಗಿದೆ ಎಂದು ರಾಜನ್ ಎಚ್ಚರಿಸಿದ್ದಾರೆ. "ನಾವು ನಮ್ಮ ಮಕ್ಕಳನ್ನು ಬಾಲ್ಯದಲ್ಲೇ ಸೋಲಿಸುತ್ತಿದ್ದೇವೆ," ಎಂದ ಅವರು, ಅಪೌಷ್ಟಿಕತೆಯಿಂದಾಗಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಇದು ಭವಿಷ್ಯದ ಆಧುನಿಕ ಉದ್ಯೋಗಗಳಿಗೆ ಅವರು ಹೊಂದಿಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ ಎಂದು ಹೇಳಿದ್ದಾರೆ.

ವಿಕ್ಷಿತ್ ಭಾರತ್ ಕನಸಿಗೆ ಅಡ್ಡಿ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ (ವಿಕ್ಷಿತ್ ಭಾರತ್) ಮಾಡುವ ಗುರಿಯ ಬಗ್ಗೆ ಪ್ರಸ್ತಾಪಿಸಿದ ಅವರು, "ದೇಶದ ಶೇ. 35 ರಷ್ಟು ಉದ್ಯೋಗಿಗಳು ಅನಿಶ್ಚಿತ ಸ್ಥಿತಿಯಲ್ಲಿದ್ದರೆ ಈ ಗುರಿ ತಲುಪುವುದು ಕಷ್ಟ," ಎಂದು ಹೇಳಿದ್ದಾರೆ. ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ದೀರ್ಘಕಾಲೀನ ಪರಿಹಾರಕ್ಕೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read More
Next Story