I am a disciplined soldier of the party, I will not blackmail D.K. Shivakumar
x

ಡಿಸಿಎಂ ಡಿ.ಕೆ. ಶಿವಕುಮಾರ್‌

ನಾನು ಪಕ್ಷದ ಶಿಸ್ತಿನ ಸಿಪಾಯಿ; ಬ್ಲಾಕ್‌ಮೇಲ್‌ ಮಾಡಲ್ಲ- ಡಿ.ಕೆ. ಶಿವಕುಮಾರ್‌

ನನ್ನ ಮಾನಸಿಕ, ದೈಹಿಕ ಹಾಗೂ ರಾಜಕೀಯ ಆರೋಗ್ಯ ಸರಿಯಾಗಿದೆ. ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಡಿಸೆಂಬರ್ ಒಳಗಾಗಿ ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲೇಬೇಕಾಗಿದೆ ಎಂದು ಡಿಕೆಶಿ ತಿಳಿಸಿದರು.


Click the Play button to hear this message in audio format

ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿವೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ತೀವ್ರ ಕುತೂಹಲ ಮೂಡಿಸಿದೆ.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, “ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನಲ್ಲ. ನಾನು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ" ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೀರಿ ಎಂಬ ಸುದ್ದಿ ಹರಿದಾಡುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಾನಸಿಕ, ದೈಹಿಕ ಹಾಗೂ ರಾಜಕೀಯ ಆರೋಗ್ಯ ಸರಿಯಾಗಿದೆ. ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ಡಿಸೆಂಬರ್ ತಿಂಗಳೊಳಗಾಗಿ ನೂರು ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲೇಬೇಕಾಗಿದೆ. ಹಾಗಾಗಿ ಚರ್ಚಿಸಲು ಬಂದಿದ್ದೇನೆ ಎಂದು ಹೇಳಿ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ.

"ಗಾಂಧಿ ಭಾರತ ಎಂಬ ಪುಸ್ತಕ ರಚಿಸಿದ್ದೇನೆ. ಇದರ ಬಿಡುಗಡೆಗೆ ದಿನಾಂಕ ನಿಗದಿ ಮಾಡಬೇಕಾಗಿದೆ. ಸದ್ಯದಲ್ಲೇ ಸಂಸತ್ ಅಧಿವೇಶನ ಆರಂಭವಾಗಲಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಣೆ ಮಾಡಬೇಕು. ಇದೆಲ್ಲವನ್ನು ಯಾರು ಮಾಡಬೇಕು?, ನಾನೇ ಮಾಡಬೇಕು. ನಾನೇಕೆ ರಾಜೀನಾಮೆ ನೀಡಲಿ. ಈಗ ಅಂತಹ ಸಂದರ್ಭವಿಲ್ಲ" ಎಂದು ತಿಳಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ಎಲ್ಲಿಯವರೆಗೂ ಈ ಸ್ಥಾನದಲ್ಲಿ ಕೆಲಸ ಮಾಡಲು ಹೇಳುತ್ತಾರೋ ಅಲ್ಲಿಯವರೆಗೆ ನಾನು ಪಕ್ಷದ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ. ಮುಂದೆಯೂ ಪಕ್ಷ ಅಧಿಕಾರಕ್ಕೆ ಬರುವಂತೆ ದುಡಿಯುವವನು ನಾನು" ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯಾಗುತ್ತಿದೆ, ಅದೆಲ್ಲಾ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಅವರು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತಾರೆ. ನನ್ನನ್ನು ಕರೆದರೆ ನಾನು ಹೋಗುತ್ತೇನೆ. ನಾನು ಕೇವಲ ಪಕ್ಷದ ಕಚೇರಿಗಳ ಶಂಕುಸ್ಥಾಪನೆಗೆ ದಿನಾಂಕ ನಿಗದಿ ಮಾಡಲು ಹೋಗುತ್ತಿರುವೆ ಎಂದು ಹೇಳಿದ್ದಾರೆ.

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟಾಗಿ ಶಂಕುಸ್ಥಾಪನೆ ಮಾಡಬೇಕು ಎಂಬುದು ನನ್ನ ಆಸೆ. ಡಿ.1 ರಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಅಷ್ಟರೊಳಗೆ, ಯಾವುದಾದರೂ ವಾರಾಂತ್ಯದಲ್ಲಿ ಬಂದು ಹೋಗಿ ಎಂದು ಮನವಿ ಮಾಡುತ್ತೇನೆ. ಕಾಂಗ್ರೆಸ್ ಕಚೇರಿ ನಿರ್ಮಾಣದ ಕಟ್ಟಡ ನಕ್ಷೆ ಅನುಮೋದನೆಗೆ ನಾನು 2.30 ಕೋಟಿ ರೂ. ಹಣವನ್ನು ಪಾವತಿಸುತ್ತಿದ್ದೇನೆ. ರಾಮಲಿಂಗಾರೆಡ್ಡಿ ಅವರ ಮುಂದಾಳತ್ವದಲ್ಲಿ ಒಂದು ಕಚೇರಿ ನಿರ್ಮಿಸಲಾಗುತ್ತಿದೆ. 75-80 ಕಡೆ ಕಚೇರಿ ನಿರ್ಮಾಣಕ್ಕೆ ಜಾಗ ಕೂಡ ಸಿದ್ದವಾಗಿವೆ. ನೂರು ಕಚೇರಿ ನಿರ್ಮಾಣ ಕಾರ್ಯ ಮಾಡುತ್ತೇವೆ" ಎಂದು ಹೇಳಿದ್ದಾರೆ.

Read More
Next Story