
ಹೈದರಾಬಾದ್‌ನಲ್ಲಿ ರಸ್ತೆಯೊಂದಕ್ಕೆ 'ಡೊನಾಲ್ಡ್ ಟ್ರಂಪ್ ಹೆಸರು!
ದಿವಂಗತ ಉದ್ಯಮಿ ರತನ್ ಟಾಟಾ ಅವರ ಸ್ಮರಣಾರ್ಥವಾಗಿ, ಪ್ರಸ್ತಾವಿತ ರೀಜನಲ್ ರಿಂಗ್ ರೋಡ್‌ಗೆ (RRR) ಸಂಪರ್ಕ ಕಲ್ಪಿಸುವ ಮುಂಬರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ.
ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಪ್ರಮುಖ ರಸ್ತೆಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಿವಂಗತ ಉದ್ಯಮಿ ರತನ್ ಟಾಟಾ ಮತ್ತು ತಂತ್ರಜ್ಞಾನ ದೈತ್ಯ ಗೂಗಲ್ ಹೆಸರನ್ನು ಇಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಈ ನಿರ್ಧಾರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ತಂತ್ರವಾಗಿದ್ದರೆ, ಬಿಜೆಪಿ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಹೈದರಾಬಾದ್‌ನಲ್ಲಿರುವ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿಯ ಬಳಿಯ ರಸ್ತೆಗೆ 'ಡೊನಾಲ್ಡ್ ಟ್ರಂಪ್ ಅವೆನ್ಯೂ' ಎಂದು ಹೆಸರಿಡಲಾಗುವುದು. ಅಮೆರಿಕದ ಅಧ್ಯಕ್ಷರ ಗೌರವಾರ್ಥವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರತನ್ ಟಾಟಾ, ಗೂಗಲ್‌ಗೂ ಗೌರವ
ದಿವಂಗತ ಉದ್ಯಮಿ ರತನ್ ಟಾಟಾ ಅವರ ಸ್ಮರಣಾರ್ಥವಾಗಿ, ಪ್ರಸ್ತಾವಿತ ರೀಜನಲ್ ರಿಂಗ್ ರೋಡ್‌ಗೆ (RRR) ಸಂಪರ್ಕ ಕಲ್ಪಿಸುವ ಮುಂಬರುವ ಗ್ರೀನ್‌ಫೀಲ್ಡ್ ರೇಡಿಯಲ್ ರಸ್ತೆಗೆ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಜಾಗತಿಕವಾಗಿ ಗೂಗಲ್ ಮತ್ತು ಗೂಗಲ್ ಮ್ಯಾಪ್ಸ್‌ನ ಕೊಡುಗೆಯನ್ನು ಪರಿಗಣಿಸಿ, ಹೈದರಾಬಾದ್‌ನ ಫೈನಾನ್ಷಿಯಲ್ ಡಿಸ್ಟ್ರಿಕ್ಟ್‌ನಲ್ಲಿ ನಿರ್ಮಾಣವಾಗುತ್ತಿರುವ ಗೂಗಲ್‌ನ ಬೃಹತ್ ಕ್ಯಾಂಪಸ್ (ಅಮೆರಿಕದ ಹೊರಗಿನ ಅತಿ ದೊಡ್ಡ ಕ್ಯಾಂಪಸ್) ಬಳಿಯ ರಸ್ತೆಗೆ 'ಗೂಗಲ್ ಸ್ಟ್ರೀಟ್' (Google Street) ಎಂದು ನಾಮಕರಣ ಮಾಡಲಾಗುವುದು ಎಂದು ಹೇಳಿದೆ.
ಜೊತೆಗೆ, ಮೈಕ್ರೋಸಾಫ್ಟ್ ಮತ್ತು ವಿಪ್ರೋ ಕಂಪನಿಗಳಿಗೂ ಮನ್ನಣೆ ನೀಡಲಿದ್ದು, ನಗರದಲ್ಲಿ 'ವಿಪ್ರೋ ಜಂಕ್ಷನ್' ಮತ್ತು 'ಮೈಕ್ರೋಸಾಫ್ಟ್ ರೋಡ್'ಗಳು ತಲೆ ಎತ್ತಲಿವೆ.
ಜಾಗತಿಕ ಬ್ರ್ಯಾಂಡಿಂಗ್‌ಗೆ ಸಿಎಂ ಒತ್ತು
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಪ್ರಕಾರ, ಜಾಗತಿಕ ಮಟ್ಟದ ಪ್ರಭಾವಿ ವ್ಯಕ್ತಿಗಳು ಮತ್ತು ಬೃಹತ್ ಕಂಪನಿಗಳ ಹೆಸರನ್ನು ರಸ್ತೆಗಳಿಗೆ ಇಡುವುದು ಕೇವಲ ಗೌರವ ಸೂಚಿಸುವುದಷ್ಟೇ ಅಲ್ಲ, ಅದು ನಗರದ ಜನರಿಗೆ ಸ್ಫೂರ್ತಿಯಾಗಬೇಕು ಮತ್ತು ಹೈದರಾಬಾದ್ ನಗರಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಡಬೇಕು. ರಾಜ್ಯವನ್ನು ನಾವೀನ್ಯತೆ ಆಧಾರಿತ ಅಭಿವೃದ್ಧಿಯ ಕೇಂದ್ರವನ್ನಾಗಿ ರೂಪಿಸುವ ಸರ್ಕಾರದ ಗುರಿಯ ಭಾಗ ಇದಾಗಿದೆ..
ಬಿಜೆಪಿ ಆಕ್ರೋಶ: ಭಾಗ್ಯನಗರ ಎಂದು ಮರುನಾಮಕರಣ ಮಾಡಿ!
ಕಾಂಗ್ರೆಸ್ ಸರ್ಕಾರದ ಈ ನಡೆಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಕಿಡಿಕಾರಿದ್ದಾರೆ. "ಕಾಂಗ್ರೆಸ್ ಸರ್ಕಾರಕ್ಕೆ ಹೆಸರು ಬದಲಿಸುವ ಇಷ್ಟೊಂದು ಉತ್ಸಾಹವಿದ್ದರೆ, ಮೊದಲು ಹೈದರಾಬಾದ್ ಅನ್ನು 'ಭಾಗ್ಯನಗರ' ಎಂದು ಮರುನಾಮಕರಣ ಮಾಡಲಿ. ಇತಿಹಾಸ ಮತ್ತು ಅರ್ಥವಿರುವ ಹೆಸರುಗಳನ್ನು ಇಡಬೇಕು. ಟ್ರೆಂಡ್ ಆಗುವವರ ಹೆಸರನ್ನು ಇಡುವುದಲ್ಲ," ಎಂದು ವ್ಯಂಗ್ಯವಾಡಿದ್ದಾರೆ. "ಒಂದೆಡೆ ಬದುಕಿರುವ ಕೆಸಿಆರ್‌ಗೆ ಎಐ ಪ್ರತಿಮೆ ನಿರ್ಮಿಸಲಾಗುತ್ತಿದೆ, ಇನ್ನೊಂದೆಡೆ ರೇವಂತ್ ರೆಡ್ಡಿ ಟ್ರೆಂಡಿಂಗ್ ಹೆಸರುಗಳ ಬೆನ್ನು ಬಿದ್ದಿದ್ದಾರೆ," ಎಂದು ಎಕ್ಸ್ (ಟ್ವಿಟರ್) ಮೂಲಕ ವಾಗ್ದಾಳಿ ನಡೆಸಿದ್ದಾರೆ.

