
ಹೈದರಾಬಾದ್‌ನ ನಾಂಪಲ್ಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನಾಂಪಲ್ಲಿ ಅಗ್ನಿ ದುರಂತ| ಮಹಿಳೆ ಸೇರಿ ಐವರು ಬಲಿ; ಮುಂದುವರಿದ ರಕ್ಷಣಾ ಕಾರ್ಯಾಚರಣೆ
'ಬಾಚಾ ಕ್ರಿಸ್ಟಲ್ ಫರ್ನಿಚರ್' ಮಳಿಗೆಯಲ್ಲಿ ಶನಿವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ. ಬೇಸ್‌ಮೆಂಟ್‌ನಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಿದ್ದರಿಂದ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಹೈದರಾಬಾದ್‌ನ ನಾಂಪಲ್ಲಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮಹಿಳೆ ಸೇರಿ ಐವರು ಮೃತಪಟ್ಟಿದ್ದಾರೆ. ಶನಿವಾರ ಮಧ್ಯಾಹ್ನ ನಾಲ್ಕು ಅಂತಸ್ತಿನ ಪೀಠೋಪಕರಣಗಳ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಳೆದ 21 ಗಂಟೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ನೆಲಮಹಡಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಇನ್ನೂ ಐವರು ಸಿಲುಕಿರುವ ಸಾಧ್ಯತೆ ಇರುವುದರಿಂದ ಎನ್‌ಡಿಆರ್‌ಎಫ್ ಶೋಧ ನಡೆಸುತ್ತಿದೆ.
ಬಾಚಾ ಕ್ರಿಸ್ಟಲ್ ಫರ್ನಿಚರ್ ಎಂಬ ಮಳಿಗೆಯ ನೆಲಮಹಡಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿದ್ದು, ನಂತರ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಮಳಿಗೆಯ ಕೆಲಸಗಾರರು ಮತ್ತು ಸೆಕ್ಯೂರಿಟಿ ಗಾರ್ಡ್ ಕುಟುಂಬಗಳಿಗೆ ಬೇಸ್‌ಮೆಂಟ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೃತರು ಈ ಕುಟುಂಬದ ಸದಸ್ಯರೆಂದು ಗುರುತಿಸಲಾಗಿದೆ. ಕಟ್ಟಡದಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದು ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಯುಂಟುಮಾಡಿದೆ.
ಈ ಘಟನೆಯ ಬಗ್ಗೆ ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪೊನ್ನಂ ಪ್ರಭಾಕರ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಗ್ನಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿರುವ ಮಳಿಗೆ ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿ ಅವಘಡದ ಹಿನ್ನೆಲೆಯಲ್ಲಿ ನಾಂಪಲ್ಲಿ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಪ್ರಸಿದ್ಧ 'ನುಮೈಶ್' ಪ್ರದರ್ಶನಕ್ಕೆ ಭೇಟಿ ನೀಡುವ ಪ್ರವಾಸಿಗರು ಸದ್ಯಕ್ಕೆ ಅತ್ತ ಸುಳಿಯದಂತೆ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಮನವಿ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಕಟ್ಟಡಗಳ ನಿವಾಸಿಗಳನ್ನು ತೆರವುಗೊಳಿಸಲಾಗಿದೆ.

