
ಹೈದರಾಬಾದ್ ಮೂಲದ ಶಿಲ್ಪಾ ಬಂಡಾ ಹಾಗೂ ಪತಿ ಸತೀಶ್ ವುಪ್ಪಲಪಾಟಿ
23 ಕೋಟಿ ವಂಚಿಸಿ ಪರಾರಿಯಾಗಿದ್ದ ಹೈದರಾಬಾದ್ ದಂಪತಿ ಹುಬ್ಬಳ್ಳಿಯಲ್ಲಿ ಅರೆಸ್ಟ್
ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಹೈದರಾಬಾದ್ ಪೊಲೀಸರ ಬಂಧನ ಭೀತಿಯಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇವರು ಹೈದರಾಬಾದ್ ಬಿಟ್ಟು ಕರ್ನಾಟಕದ ಕಡೆಗೆ ಕಾರಿನಲ್ಲಿ ಪರಾರಿಯಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಹೂಡಿಕೆದಾರರಿಗೆ ಬರೋಬ್ಬರಿ 23 ಕೋಟಿ ರೂಪಾಯಿ ವಂಚಿಸಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಹೈದರಾಬಾದ್ ಮೂಲದ ‘ಬಂಟಿ-ಬಬ್ಲಿ’ ಮಾದರಿಯ ದಂಪತಿಯನ್ನು ಧಾರವಾಡ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ (ನ.22) ಸಂಜೆ ಸಿನಿಮೀಯ ರೀತಿಯಲ್ಲಿ ಈ ಬಂಧನ ನಡೆದಿದೆ.
ಬಂಧಿತರನ್ನು ಹೈದರಾಬಾದ್ ಮೂಲದ ಸತೀಶ್ ವುಪ್ಪಲಪಾಟಿ ಹಾಗೂ ಆತನ ಪತ್ನಿ ಶಿಲ್ಪಾ ಬಂಡಾ ಎಂದು ಗುರುತಿಸಲಾಗಿದೆ. ಹೈದರಾಬಾದ್‌ನಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದ ಈ ದಂಪತಿ, ಬಳಿಕ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದರು. ಈ ಸಂಬಂಧ ಹೈದರಾಬಾದ್‌ನ ಸೆಂಟ್ರಲ್ ಕ್ರೈಂ ಸ್ಟೇಷನ್‌ನಲ್ಲಿ (ಸಿಸಿಎಸ್) ದಂಪತಿ ವಿರುದ್ಧ ಸುಮಾರು 23 ಕೋಟಿ ರೂ. ವಂಚನೆಯ ಗಂಭೀರ ಪ್ರಕರಣ ದಾಖಲಾಗಿತ್ತು.
ಬೈಪಾಸ್‌ನಲ್ಲಿ ರೋಚಕ ಕಾರ್ಯಾಚರಣೆ
ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ಹೈದರಾಬಾದ್ ಪೊಲೀಸರ ಬಂಧನ ಭೀತಿಯಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇವರು ಹೈದರಾಬಾದ್ ಬಿಟ್ಟು ಕರ್ನಾಟಕದ ಕಡೆಗೆ ಕಾರಿನಲ್ಲಿ ಪರಾರಿಯಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಧಾರವಾಡ ಪೊಲೀಸರು, ಹುಬ್ಬಳ್ಳಿ-ಧಾರವಾಡ ಬೈಪಾಸ್ ಮಾರ್ಗದಲ್ಲಿ ಕಾಯ್ದು ಕುಳಿತಿದ್ದರು. ಆರೋಪಿಗಳು ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಪೊಲೀಸರು, ಸ್ಥಳದಲ್ಲೇ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, "ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಳು ತಲೆಮರೆಸಿಕೊಂಡು ಓಡಿ ಹೋಗುತ್ತಿದ್ದರು. ಖಚಿತ ಸುಳಿವು ಮೇರೆಗೆ ಬೈಪಾಸ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ. ಮುಂದಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಇಬ್ಬರನ್ನೂ ಹೈದರಾಬಾದ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ," ಎಂದು ತಿಳಿಸಿದ್ದಾರೆ.

