ಪತ್ರಕರ್ತನ ಮೇಲೆ ಹಲ್ಲೆ, ನಟ ಮೋಹನ್ ಬಾಬು ವಿರುದ್ಧ ಕೇಸ್ ದಾಖಲು
ಮೋಹನ್ ಬಾಬು ಮೈಕ್ರೊಫೋನ್ ಅನ್ನು ಕಸಿದುಕೊಂಡು, "ನಿಂದನಾತ್ಮಕ ಮತ್ತು ಕೆಟ್ಟ ಭಾಷೆಯನ್ನು" ಬಳಸಿದ್ದಾರೆ. ಇದರಿಂದಾಗಿ ತಲೆಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ.
ವಿಡಿಯೋ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಟ ಮತ್ತು ಅವರ ಕಿರಿಯ ಮಗ ಮನೋಜ್ ನಡುವೆ ನಡೆಯುತ್ತಿರುವ ವಿವಾದವನ್ನು ವರದಿ ಮಾಡಲು ಡಿಸೆಂಬರ್ 10 ರಂದು ಮೋಹನ್ ಬಾಬು ಅವರ ಜಲ್ಪಲ್ಲಿ ನಿವಾಸಕ್ಕೆ ಭೇಟಿ ನೀಡಿದ್ದಾಗ ಘಟನೆ ನಡೆದಿದೆ. ಹಿರಿಯ ನಟ ತಮ್ಮನ್ನು ಮತ್ತು ಇತರ ಪತ್ರಕರ್ತರ ಮೇಲೆ ದಾಳಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅವರು ಮೈಕ್ರೊಫೋನ್ ಅನ್ನು ಕಸಿದುಕೊಂಡು, "ನಿಂದನಾತ್ಮಕ ಮತ್ತು ಕೆಟ್ಟ ಭಾಷೆಯನ್ನು" ಬಳಸಿದ್ದಾರೆ. ಇದರಿಂದಾಗಿ ತಲೆಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ.
35 ವರ್ಷದ ಪತ್ರಕರ್ತ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪಹಾಡಿ ಶರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ನಟ ಮನೋಜ್ ಮೋಹನ್ ಬಾಬು ಅವರ ಮನೆಯೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಗೊಂದಲ ಉಂಟಾಯಿತು ಎನ್ನಲಾಗಿದೆ. ಗದ್ದಲದ ಸಮಯದಲ್ಲಿ, ಘಟನೆಯನ್ನು ವರದಿ ಮಾಡಿದ ವೀಡಿಯೊ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮೋಹನ್ ಬಾಬು ಅವರು ಪತ್ರಕರ್ತನನ್ನು ಮೈಕ್ರೊಫೋನ್ ನಿಂದ ಹೊಡೆಯಲು ಪ್ರಯತ್ನಿಸುತ್ತಿರುವುದು ಟಿವಿಗಳಲ್ಲಿ ದಾಖಲಾಗಿದೆ. ದಾಳಿಯನ್ನು ಖಂಡಿಸಿದ ಮಾಧ್ಯಮ ಸಿಬ್ಬಂದಿ ಮೋಹನ್ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಏತನ್ಮಧ್ಯೆ ಅನಾರೋಗ್ಯದ ಹಿನ್ನೆಲೆಯಲ್ಲಿ ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಹನ್ ಬಾಬು ಮತ್ತು ಅವರ ಇಬ್ಬರು ಪುತ್ರರಾದ ವಿಷ್ಣು ಮತ್ತು ಮನೋಜ್ ಅವರಿಗೆ ಸೆಕ್ಷನ್ 126 ಬಿಎನ್ಎಸ್ಎಸ್ ಅಡಿಯಲ್ಲಿ ಡಿಸೆಂಬರ್ 11 ರಂದು ರಾಚಕೊಂಡ ಪೊಲೀಸ್ ಆಯುಕ್ತರ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಮನೋಜ್ ಮತ್ತು ಅವರ ಪತ್ನಿ ಬೆದರಿಕೆ ಮತ್ತು ಬಲಪ್ರಯೋಗದ ಮೂಲಕ ತಮ್ಮ ಜಲ್ಪಲ್ಲಿ ಮನೆಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ರೂಪಿಸಿದ್ದಾರೆ ಎಂದು ಆರೋಪಿಸಿ ಮೋಹನ್ ಬಾಬು ಅವರು ಡಿಸೆಂಬರ್ 9 ರಂದು ಪೊಲೀಸರಿಗೆ ದೂರು ನೀಡಿದ ನಂತರ ಅವರ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿದ್ದವು.
ಮನೋಜ್ ಬುಧವಾರ ತಮ್ಮ ಹೋರಾಟವು "ಆಸ್ತಿಯ ಪಾಲು" ಗಾಗಿ ಅಲ್ಲ, ಆದರೆ "ಸ್ವಾಭಿಮಾನ ಮತ್ತು ತನ್ನ ಹೆಂಡತಿ ಮತ್ತು ಮಕ್ಕಳ ಸುರಕ್ಷತೆಗಾಗಿ" ಎಂದು ಹೇಳಿದ್ದಾರೆ. ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಕೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಷ್ಣು, ಕೌಟುಂಬಿಕ ಸಮಸ್ಯೆಗಳು ಸೌಹಾರ್ದಯುತವಾಗಿ ಬಗೆಹರಿಯಲಿವೆ ಎಂಬ ಭರವಸೆ ವ್ಯಕ್ತಪಡಿಸಿದರು. ಮೋಹನ್ ಬಾಬು ಅವರ ದೂರಿನ ಆಧಾರದ ಮೇಲೆ ಪೊಲೀಸರು ಮನೋಜ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಡಿಸೆಂಬರ್ 8 ರಂದು 10 ಅಪರಿಚಿತ ವ್ಯಕ್ತಿಗಳು ಮನೆಗೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಮನೋಜ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಜಗಳದ ಸಮಯದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ಮನೋಜ್ ಹೇಳಿದ್ದಾರೆ.